ಕೊಳ್ಳೇಗಾಲ : ಪರಿಸರ ಸಂರಕ್ಷಣೆ ನಮ್ಮೆಲರ ಹೊಣೆ ಎಂಬುದನ್ನು ಎಲ್ಲರೂ ತಿಳಿಯಬೇಕಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಸುನೀತಾ ಹೇಳಿದರು.
ಪಟ್ಟಣದ ಮುಡಿಗುಂಡ ಆದರ್ಶ ವಿದ್ಯಾಲಯದಲ್ಲಿ ಬುಧವಾರ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲ ಸಂಘ, ಪೋಲಿಸ್ ಇಲಾಖೆ ಹಾಗೂ ಆದರ್ಶ ವಿದ್ಯಾಲಯ ಮುಡಿಗುಂಡ ಇವರ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನ ಮತ್ತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾನವನನ್ನು ಸೇರಿದಂತೆ ಗಾಳಿ, ನೀರು, ಮಣ್ಣು, ಮರಗಳು ಪ್ರಾಣಿ-ಪಕ್ಷಿಗಳು ಎಲ್ಲವೂ ಪರಿಸರವಾಗಿದೆ. ಇವೆಲ್ಲವನ್ನೂ ಒಳಗೊಂಡ ಪ್ರಕೃತಿಯ ಸಮತೋಲನವೇ ನಮ್ಮ ಜೀವಕ್ಕೆ ಅತಿ ಮುಖ್ಯವಾಗಿದೆ. ಜನರಲ್ಲಿ ಪರಿಸರ ಸಂರಕ್ಷಣೆ ಅರಿವು ಮೂಡಿಸುವುದು, ಪ್ರಕೃತಿ ಸಮತೋಲನ ಉಳಿಸಿಕೊಳ್ಳುವ ಅಗತ್ಯತೆಯನ್ನು ತೋರಿಸುವುದು, ಪರಿಸರಕ್ಕೆ ಹಾನಿಕರ ಕ್ರಿಯೆಗಳನ್ನು ತಡೆಯುವುದು, ಗಿಡಗಳನ್ನು ನೆಡು ವುದು, ಜಲ ಸಂರಕ್ಷಣೆ ಹಾಗೂ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವಂತಹ ಕ್ರಿಯಾತ್ಮಕ ಕೆಲಸಗಳನ್ನು ಪ್ರೋತ್ಸಾಹಿಸುವುದು ಪರಿಸರ ಸಂರಕ್ಷಣೆಯ ಪ್ರಮುಖ ಕಾರ್ಯವಾಗಿದೆ ಎಂದರು.
ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ಹೆಚ್ಚಿನ ಆದ್ಯತೆ ನೀಡಬೇಕು. ಗಿಡಗಳು, ಪ್ರಾಣಿ-ಪಕ್ಷಿಗಳು ಹಾಗೂ ನಮ್ಮ ಸುತ್ತಮುತ್ತಲ ಪರಿಸರವನ್ನು ಪ್ರೀತಿಸಬೇಕು. ಗಿಡವನ್ನು ನೆಟ್ಟು ಪೋಷಿಸಿ ಮರವನ್ನು ಮಾಡಬೇಕು. ಇದು ಮುಂದಿನ ಪೀಳಿಗೆಯ ಉಳಿವಿಗೆ ಅಗತ್ಯವಾಗಿದೆ ಎಂದರು.
ಅಪರ ಸಿವಿಲ್ ನ್ಯಾಯಾಧೀಶ ಎಂ.ರಂಜಿತ್ ಕುಮಾರ್, ವಕೀಲ ಸಂಘದ ಕರ್ಯದರ್ಶಿ ಸಿ.ಬಿ ಮಹೇಶ್ ಕುಮಾರ್, ಹಿರಿಯ ವಕೀಲರಾದ ಪಿ.ಮಹದೇವ, ವೆಂಕಟಾಚಲ, ಮುಖ್ಯ ಶಿಕ್ಷಕಿ ಪ್ರಿಯದರ್ಶಿನಿ, ಎಸ್‌ಡಿಎಂಸಿ ಅಧ್ಯಕ್ಷ ಪ್ರಕಾಶ್ ಇತರರು ಇದ್ದರು.