ಚಾಮರಾಜನಗರ ತಾಲ್ಲೂಕಿನ ವೆಂಕಟಯ್ಯನಛತ್ರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಆವರಣದಲ್ಲಿ ಆಯೋಜಿಸಿದ್ದ ವಿಜ್ಞಾನ ಪ್ರಯೋಗ ಶಾಲೆಯನ್ನು ಶಾಸಕ ಸಿ.ಪುಟ್ಟರಂಶೆಟ್ಟಿ ಉದ್ಘಾಟಿಸಿದರು. 
ನ್ಯೂಸ್

ವಿದ್ಯಾರ್ಥಿಗಳಿಗೆ ಸಮಯ ಪ್ರಜ್ಞೆ ಅಗತ್ಯ

ಕಿರಣ್ ಮಾದರಹಳ್ಳಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಸಿ.ಪುಟ್ಟರಂಗಶೆಟ್ಟಿ ಅಭಿಮತ
  • ವೆಂಕಟಯ್ಯನಛತ್ರದ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಪ್ರಯೋಗ ಶಾಲೆ ಉದ್ಘಾಟನೆ
ಚಾಮರಾಜನಗರ: ವಿದ್ಯಾರ್ಥಿ ದೆಸೆಯಲ್ಲಿ ಸಮಯಪ್ರಜ್ಞೆ ಅತ್ಯಂತ ಮಹತ್ವವಾದದ್ದು ಎಂದು ಶಾಸಕ ಅಧ್ಯಕ್ಷ ಸಿ. ಪುಟ್ಟರಂಗಶೆಟ್ಟಿ ಹೇಳಿದರು.
ತಾಲೂಕಿನ ವೆಂಕಟಯ್ಯನ ಛತ್ರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಆವರಣದಲ್ಲಿ ರಾಷ್ಟ್ರೀಯ ಹಸಿರು ಪಡೆ, ಗ್ರೀನ್‌ಬರ್ಡ್, ಇಕೋ ಕ್ಲಬ್ ವತಿಯಿಂದ ಗುರುವಾರ ಆಯೋಜಿಸಿದ್ದ ವಿಜ್ಞಾನ ಪ್ರಯೋಗ ಶಾಲೆ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು. ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದಲ್ಲಿ ಸಮಯ ಪ್ರಜ್ಞೆ ಅತಿ ಮುಖ್ಯ, ಈ ಸಮಯದಲ್ಲಿ ಸ್ಪಲ್ಪ ಮೈ ಮರೆತರೂ ಮುಂದಿನ ಭವಿಷ್ಯ ಕಷ್ಟ. ಆದ್ದರಿಂದ ಈ ಹಂತದಲ್ಲಿ ನೀವು ಜಾಗೃತಿಯಿಂದ ಇರಬೇಕು ಎಂದು ಸಲಹೆ ನೀಡಿದರು.
ಇದು ಸ್ಪರ್ಧಾತ್ಮಕ ಯುಗ. ಚೆನ್ನಾಗಿ ಓದುವುದರ ಜತೆ ಕೌಶಲ್ಯ ತರಬೇತಿಗಳು ಮುಖ್ಯ. ಯಾವುದೇ ನೌಕರಿ ಪಡೆಯಬೇಕಾದರೆ ಕೌಶಲ್ಯ ತರಬೇತಿಯು ಮುಖ್ಯ. ಇದನ್ನು ಪ್ರತಿಯೊಬ್ಬ ವಿದ್ಯಾರ್ಥಿಯು ಅರಿಯಬೇಕು ಎಂದರು.
ಜಿಲ್ಲೆಯಲ್ಲಿ ವೈದ್ಯಕೀಯ, ಇಂಜಿನಿಯರಿಂಗ್, ಕೃಷಿ ಸೇರಿದಂತೆ ಎಲ್ಲ ತರಹದ ವಿದ್ಯಾಭ್ಯಾಸ ಮಾಡಲು ಅನುಕೂಲತೆೆ ಇದೆ, ಆದರೆ ಚೆನ್ನಾಗಿ ಓದುವುದರ ಮೂಲಕ ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಶಿಕ್ಷಣಕ್ಕೆ ಹೆಚ್ಚು ತೊಡಗಿಸಿಕೊಳ್ಳುವುದರ ಜತೆ ಪಠ್ಯೇತರ ಚಟುವಟಿಕೆಗಳನ್ನೂ ತೊಡಗಿಸಿಕೊಂಡು ಜ್ಞಾನಾರ್ಜನೆಗೂ ಹೆಚ್ಚಿನ ಒತ್ತು ಕೊಡಬೇಕು, ತಂದೆ, ತಾಯಿ, ಪಾಲಕರೂ ಸಹ ಮಕ್ಕಳ ವಿದ್ಯಾಭ್ಯಾಕ್ಕೆ ಹೆಚ್ಚಿನ ಪ್ರೋತ್ಸಾಹ ಕೊಡಬೇಕು ಎಂದು ತಿಳಿಸಿದರು.
ವಿದ್ಯಾರ್ಥಿ ದೆಸೆಯಲ್ಲಿ ಆದಷ್ಟು ಮೊಬೈಲ್ ಬಳಕೆ ಕಡಿಮೆ ಮಾಡಬೇಕು. ಅಗತ್ಯವಿರುವಷ್ಟು ಮಾತ್ರ ಉಪಯೋಗಿಸಬೇಕು, ಅದು ಅತಿಯಾಗಬಾರದು. ಇದಕ್ಕೆ ಸ್ಪಷ್ಟ ಉದಾಹರಣೆಯಾಗಿ ಮೂವರು ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡಿರುವುದೇ ಸಾಕ್ಷಿ ಎಂದರು.
ಇದೇ ಸಂಧರ್ಭದಲ್ಲಿ ವಿಜ್ಞಾನ ಪ್ರಯೋಗಾಲಯದಲ್ಲಿ ಪವಾಡ ರಹಸ್ಯ ಬಯಲು, ರಂಗೋಲಿ ಮೂಲಕ ವಿಜ್ಞಾನಕ್ಕೆ ಸಂಬಂಧಪಟ್ಟ ಚಿತ್ರಗಳನ್ನು ಬಿಡಿಸುವುದು, ಮೇಂದಿ ಮೂಲಕ ವಿಜ್ಞಾನಕ್ಕೆ ಸಂಬಂಧಪಟ್ಟ ಚಿತ್ರಗಳನ್ನು ಬಿಡಿಸಲಾಯಿತು.
ಶಾಸಕರು ಪ್ರಯೋಗಾಲಯ ಉದ್ಘಾಟಿಸಿ, ವೀಕ್ಷಿಸಿ ಮಕ್ಕಳಿಂದ ಇದರ ಬಗ್ಗೆ ಮಾಹಿತಿ ಪಡೆದುಕೊಂಡರು.ಈ ಪ್ರಯೋಗಶಾಲೆಯಿಂದ ಮುಂಬರುವ ಪರೀಕ್ಷೆಗೂ ಅನುಕೂಲವಾಗಲಿದೆ ಎಂದು ಪ್ರಾಯೋಜಕರು ತಿಳಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಲಾವಣ್ಯ ಮಹೇಶ್, ರೋಟರಿ ಸಿಲ್ಕ್‌ಸಿಟಿ ಅಧ್ಯಕ್ಷ ಶಮೀತ್ ಕುಮಾರ್, ಬಿಇಒ ಹನುಮಂತಶೆಟ್ಟಿ, ಎಪಿಎಂಸಿ ಅಧ್ಯಕ್ಷ ಸೋಮೇಶ್, ಗ್ರಾಪಂ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ಬಿಸಿಯೂಟ ಸಹಾಯಕ ನಿರ್ದೇಶಕ ಶ್ರೀನಿವಾಸ್, ಪ್ರಾಂಶುಪಾಲ ಮಹೇಶ್, ಉಪಪ್ರಾಂಶುಪಾಲ ನಾಗರತ್ನ, ಜ್ಞಾನ ಶಿಕ್ಷಕ ಕಿರಣ್‌ರಾಜ್, ಮಹದೇವಯ್ಯ, ಎಚ್.ಎಂ. ಕೃಷ್ಣಮೂರ್ತಿ, ಮುಖಂಡರಾದ ಜಯಸ್ವಾಮಿ, ವಿ.ಹೊಸೂರು ರಾಜು, ಶಿಕ್ಷಕರು, ಎಸ್‌ಡಿಎಂಸಿ ತಂಡ, ವಿದ್ಯಾರ್ಥಿಗಳು ಇದ್ದರು.