ಚಿಗುರು ವಿದ್ಯಾರ್ಥಿ ಗೋಡೆ ಪತ್ರಿಕೆಯನ್ನು ಸವಿತಾ ನಾಗಭೂಷಣ ಬಿಡುಗಡೆ ಮಾಡಿದರು. ಅವಿನಾಶ್, ಡಾ.ಪ್ರಕಾಶ್ ಮರ‌್ಗನಳ್ಳಿ, ಸುಹಾಸ್, ಶಶಾಂಕ್ ಎಂ.ಜೋಗಿ, ಸುಹಾಸ್, ಡಾ.ಕೆ.ಎಸ್.ಸರಳಾ ಮುಂತಾದವರಿದ್ದರು. 
ನ್ಯೂಸ್

ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಅವಶ್ಯ

ಅರವಿಂದ ಅಕ್ಲಾಪುರ

ಶಿವಮೊಗ್ಗ: ಜಗತ್ತು ಇಂದು ತಲ್ಲಣಗೊಂಡಿದೆ. ಕರ್ನಾಟಕವೂ ಕೂಡ ಇದಕ್ಕೆ ಹೊರತಾಗಿಲ್ಲ. ಈ ಹೊತ್ತಿನಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನದ ನೀಡುವ ಹೊಣೆ ಸಮಾಜದ ಮೇಲಿದೆ ಎಂದು ಖ್ಯಾತ ಕವಯತ್ರಿ ಸವಿತಾ ನಾಗಭೂಷಣ್ ಹೇಳಿದರು.

ಕುವೆಂಪು ವಿವಿ, ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ವಿದ್ಯಾರ್ಥಿ ಸಾಂಸ್ಕೃತಿಕ ವೇದಿಕೆ, ಐಕ್ಯೂಎಸಿಯ ಸಂಯುಕ್ತಾಶ್ರಯದಲ್ಲಿ ಚಿಗುರು ವಿದ್ಯಾರ್ಥಿ ಗೋಡೆ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳು ಯುವಕರ ಮನಸ್ಥಿತಿಗಳನ್ನೇ ಬದಲು ಮಾಡುತ್ತಿವೆ. ಪೆನ್‌ಡ್ರೈವ್ ಘಟನೆಗಳು ವಿಜೃಂಭಿಸುತ್ತಿರುವ ಈ ಹೊತ್ತಿನಲ್ಲಿ ಇಡೀ ಸಮಾಜ ಯೋಚಿಸಬೇಕಾದ ಅಗತ್ಯವಿದೆ. ಮಕ್ಕಳನ್ನು ಸರಿದಾರಿಯತ್ತ ಕೊಂಡೊಯ್ಯುವ ಜವಾಬ್ದಾರಿ ಪಾಲಕರು, ಶಿಕ್ಷಕರು, ಅಧ್ಯಾಪಕರ ಮೇಲಿದೆ ಎಂದರು.
ಮಕ್ಕಳ ಬಾಲ್ಯಗಳನ್ನು ನಾವು ಕಸಿದುಕೊಳ್ಳುತ್ತಿದ್ದೇವೆ. ಅವರ ಆಸಕ್ತಿಗಳಿಗೆ ಅಡ್ಡಿ ಮಾಡುತ್ತಿದ್ದೇವೆ. ಮಕ್ಕಳು ಭವಿಷ್ಯದಲ್ಲಿ ಹಣ ಸಂಪಾದಿಸುವ ಯಂತ್ರ ಆಗಬೇಕೆಂದು ಬಯಸಿ ಪಠ್ಯೇತರ ವಿಷಯಗಳತ್ತ ಗಮನವನ ಹರಿಸದಂತೆ ನೋಡಿಕೊಳ್ಳುತ್ತಿದ್ದೇವೆ. ಹದಿಹರೆಯದ ಮಕ್ಕಳು ಕುತೂಹಲ, ಆಶ್ಚರ್ಯ, ಮಂದಹಾಸ, ಚೈತನ್ಯಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ವಿಷಾದಿಸಿದರು.
ಗೋಡೆ ಬರಹದ ಪತ್ರಿಕೆ ವಿದ್ಯಾರ್ಥಿಗಳಲ್ಲಿ ಅದು ಕ್ರಿಯಾಶೀಲ ಗುಣವನ್ನು ಹೆಚ್ಚಿಸುತ್ತದೆ. ಜಗತ್ತು ಸುಂದರವಾಗಿ ಕಾಣುವಂತೆ ಮಾಡುತ್ತದೆ. ಭಯಗಳನ್ನು ದೂರ ತಳ್ಳುತ್ತದೆ. ಉತ್ಸಾಹ, ಆಸಕ್ತಿ ಮೂಡಿಸುತ್ತದೆ. ವಿದ್ಯಾರ್ಥಿಗಳ ಆಸಕ್ತಿಗಳಿಗೆ ಯಾರೂ ಅಡ್ಡಿ ಮಾಡಬಾರದು. ಅವರವರ ಕನಸುಗಳು ಅವರಿಗೆ ಮುಖ್ಯ. ಆಯ್ಕೆ ಅವರದೇ ಆಗಿರುತ್ತದೆ. ಆದರೆ ಎಚ್ಚರಿಕೆ ಅಗತ್ಯ ಎಂದರು.
ಹದಿಹರೆಯದ ವಯಸ್ಸಿನಲ್ಲಿ ಪ್ರೇಮ ಸಹಜವಾದುದು. ಪ್ರೇಮ, ಸ್ನೇಹ ಬೇಕೇ ಬೇಕು. ಅದು ಗಿಡದಲ್ಲಿ ಹೂವು ಅರಳುವಷ್ಟೇ ಸಹಜ ಪ್ರಕ್ರಿಯೆ. ಆದರೆ ಈ ಪ್ರೇಮ ಸಕಾಲದಲ್ಲಿರಬೇಕು ಅಷ್ಟೇ. ಪ್ರೇಮ, ಭೀಭತ್ಸ, ಕ್ರೌರ್ಯವಾಗಬಾರದು. ಅದು ಮಧುರ ಅನುಭೂತಿ ನೀಡಬೇಕು. ವಿದ್ಯಾರ್ಥಿಗಳು ಇಂತಹ ಸಂದರ್ಭದಲ್ಲಿ ಎದೆಯಲ್ಲಿ ಹುಟ್ಟಿದ ಪ್ರೇಮವನ್ನು ಮೆದುಳಿಗೆ ಕಳಿಸಿ ಗೆರೆ ಎಳೆದುಕೊಂಡು ತೀರ್ಮಾನಿಸಬೇಕು ಎಂದು ಹೇಳಿದರು.
ಪ್ರಾಚಾರ್ಯ ಟಿ. ಅವಿನಾಶ್ ಮಾತನಾಡಿ, ವಾಣಿಜ್ಯ ವಿದ್ಯಾರ್ಥಿಗಳು ಕೂಡ ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಗೋಡೆ ಬರಹದಲ್ಲಿ ವಿದ್ಯಾರ್ಥಿಗಳ ಬರಹ ಉತ್ತಮವಾಗಿದೆ. ಗೊತ್ತಿಲ್ಲದ ದಾರಿಯಲ್ಲಿ ಮೊದಲ ಹೆಜ್ಜೆ ಇಟ್ಟರೆ ಮುಂದಿನ ಹೆಜ್ಜೆ ತನ್ನಿಂತಾನೇ ಬರುತ್ತದೆ ಎಂದರು.
ಪ್ರಾಧ್ಯಾಪಕರಾದ ಡಾ. ಪ್ರಕಾಶ್ ಮರ‌್ಗನಳ್ಳಿ, ಡಾ.ಕೆ.ಎಸ್.ಸರಳಾ, ಎಂ.ಪರಶುರಾಮ್, ಡಾ.ಕೆ.ವಿ.ಗಿರಿಧರ್ , ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ.ಎ.ಶಿವಮೂರ್ತಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಜಯಾನಂದ್, ಸುಹಾಸ್, ಶಶಾಂಕ್ ಎಂ. ಜೋಗಿ ಮುಂತಾದವರಿದ್ದರು.