ನ್ಯೂಸ್

ಮಹಾಶಿವರಾತ್ರಿಯಂದು ನಾನ್​ ವೆಜ್​ ಊಟ: ದೆಹಲಿ ಯೂನಿವರ್ಸಿಟಿ ವಿದ್ಯಾರ್ಥಿ ಗುಂಪುಗಳ ಮಧ್ಯೆ ಮಾರಾಮಾರಿ! Maha Shivratri

Maha Shivratri : ನಿನ್ನೆ (ಫೆ.26) ಮಹಾ ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಯೂನಿವರ್ಸಿಟಿ ಮೆಸ್‌ನಲ್ಲಿ ನಾನ್​ ವೆಜ್​ ಆಹಾರ ಬಡಿಸುವ ವಿಚಾರಕ್ಕೆ ಎರಡು ವಿದ್ಯಾರ್ಥಿಗಳ ಗುಂಪು ಬಡಿದಾಡಿಕೊಂಡಿವೆ. ಈ ಘಟನೆ ದೆಹಲಿಯ ಸೌತ್ ಏಷಿಯನ್​ ಯೂನಿವರ್ಸಿಟಿ (SAU)ಯಲ್ಲಿ ನಡೆದಿದೆ.

ವಿಶ್ವವಿದ್ಯಾಲಯದಲ್ಲಿ ವಿನಾಕಾರಣ ಹಿಂಸಾಚಾರವನ್ನು ಪ್ರಚೋದಿಸುತ್ತಿದ್ದಾರೆ ಎಂದು ಭಾರತೀಯ ವಿದ್ಯಾರ್ಥಿ ಒಕ್ಕೂಟ (ಎಸ್‌ಎಫ್‌ಐ) ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಪರಸ್ಪರ ಆರೋಪ ಮಾಡಿ, ಕಿತ್ತಾಡಿಕೊಂಡಿವೆ. ಆದರೆ, ಈ ಬಗ್ಗೆ ಎಸ್​ಎಯು ಆಡಳಿತ ಮಂಡಳಿ ಇನ್ನೂ ಹೇಳಿಕೆ ನೀಡಿಲ್ಲ. ಅಲ್ಲದೆ, ಈ ಬಗ್ಗೆ ಯಾವುದೇ ಔಪಚಾರಿಕ ದೂರು ಕೂಡ ಬಂದಿಲ್ಲ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಸದ್ಯಕ್ಕೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಆಂತರಿಕ ವಿಚಾರಣೆ ನಡೆಸುತ್ತಿದೆ ಎಂದು ವರದಿಯಾಗಿದೆ.

ನಿನ್ನೆ ಮಧ್ಯಾಹ್ನ 3.45ರ ಸುಮಾರಿಗೆ ಮೈದಾನಗಢಿ ಪೊಲೀಸ್ ಠಾಣೆಗೆ ಎಸ್‌ಎಯುನಲ್ಲಿ ವಿದ್ಯಾರ್ಥಿಗಳ ಜಗಳ ನಡೆಯುತ್ತಿದೆ ಎಂದು ಪಿಸಿಆರ್ ಕರೆಯೊಂದು ಬಂದಿದೆ. ತಕ್ಷಣ ಪೊಲೀಸ್​ ಅಧಿಕಾರಿಗಳು ಘಟನಾ ಸ್ಥಳಕ್ಕೆ ಹೋದಾಗ ಅಲ್ಲಿ ವಾಗ್ವಾದ ನಡೆಯುತ್ತಿರುವುದನ್ನು ಗಮನಿಸಿದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೌತ್ ಏಷಿಯನ್​ ಯೂನಿವರ್ಸಿಟಿ ಒಳಗೆ ವಿದ್ಯಾರ್ಥಿನಿಯೊಬ್ಬಳನ್ನು ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿಯೂ ವೈರಲ್ ಆಗುತ್ತಿದೆ. ಶಿವರಾತ್ರಿಯ ದಿನದಂದು ನಡೆದ ಘರ್ಷಣೆಗೆ ಸಂಬಂಧಿಸಿದ ವಿಡಿಯೋ ಇದಾಗಿದೆ. ಕ್ಯಾಂಟೀನ್‌ನಲ್ಲಿ ಎರಡು ಗುಂಪುಗಳ ವಿದ್ಯಾರ್ಥಿಗಳ ನಡುವೆ ಆಹಾರದ ವಿಚಾರಕ್ಕೆ ವಾಗ್ವಾದ ನಡೆದು ನಂತರ ಜಗಳ ಆರಂಭವಾಯಿತು. ಈ ವೇಳೆ ಸಂತ್ರಸ್ತ ವಿದ್ಯಾರ್ಥಿನಿ ಪಿಸಿಆರ್ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಪ್ರಸ್ತುತ, ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಮಹಾ ಶಿವರಾತ್ರಿಯಂದು ವಿಶ್ವವಿದ್ಯಾಲಯದ ಮೆಸ್‌ನಲ್ಲಿ ನಾನ್​ ವೆಜ್​ ಆಹಾರ ಬಡಿಸಬಾರದು ಎಂಬುದು ಎಬಿವಿಪಿಯ ಬೇಡಿಕೆಯಾಗಿದೆ. ಆದರೆ, ಇದೊಂದು ಪ್ರಜಾಪ್ರಭುತ್ವ ವಿರೋಧಿ ಬೇಡಿಕೆ ಎಂದು ಭಾರತೀಯ ವಿದ್ಯಾರ್ಥಿ ಒಕ್ಕೂಟ ಕರೆದಿದೆ. ತನ್ನ ಬೇಡಿಕೆಯನ್ನು ಪಾಲಿಸದಿದ್ದಕ್ಕೆ ಎಬಿವಿಪಿ ವಿಶ್ವವಿದ್ಯಾಲಯದ ಮೆಸ್‌ನಲ್ಲಿ ವಿದ್ಯಾರ್ಥಿಗಳ ಮೇಲೆ ಕ್ರೂರವಾಗಿ ದಾಳಿ ಮಾಡಿದೆ ಎಂದು ಆರೋಪಿಸಲಾಗಿದೆ. ದಾಳಿಯ ಸಮಯದಲ್ಲಿ ಮಹಿಳಾ ವಿದ್ಯಾರ್ಥಿನಿಯರ ಕೂದಲು ಹಿಡಿದು ಹಿಂಸಾತ್ಮಕವಾಗಿ ಎಳೆದಾಡಿದರು ಮತ್ತು ಮಾಂಸಾಹಾರ ಬಡಿಸಿದ್ದಕ್ಕಾಗಿ ಮೆಸ್ ಸಿಬ್ಬಂದಿಯ ಮೇಲೂ ದಾಳಿ ಮಾಡಿದ್ದಾರೆ ಎಂದು ಎಸ್‌ಎಫ್‌ಐ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಆದಾಗ್ಯೂ, ಎಬಿವಿಪಿ ಈ ಆರೋಪಗಳನ್ನು ವಿರೋಧಿಸಿದೆ. ಉಪವಾಸ ಮಾಡುವ ವಿದ್ಯಾರ್ಥಿಗಳಿಗಾಗಿ ಗೊತ್ತುಪಡಿಸಿದ ಊಟದ ಕೋಣೆಯಲ್ಲಿ ಎಸ್‌ಎಫ್‌ಐ ಸದಸ್ಯರು ಬಲವಂತವಾಗಿ ನಾನ್​ ವೆಜ್​ ಆಹಾರವನ್ನು ಬಡಿಸಲು ಪ್ರಯತ್ನಿಸಿದ್ದಾರೆ ಎಂದು ಎಬಿವಿಪಿ ಆರೋಪಿಸಿದೆ.

ವಿಶ್ವವಿದ್ಯಾಲಯದಲ್ಲಿ ಮಹಾ ಶಿವರಾತ್ರಿಯ ಶುಭ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಉಪವಾಸ ವ್ರತವನ್ನು ಆಚರಿಸಿದರು. ಧಾರ್ಮಿಕ ನಂಬಿಕೆ ಮತ್ತು ಸಂಪ್ರದಾಯವನ್ನು ಗೌರವಿಸಿ, ಈ ವಿಶೇಷ ದಿನದಂದು ತಮಗೆ ಸಾತ್ವಿಕ ಆಹಾರವನ್ನು ವ್ಯವಸ್ಥೆ ಮಾಡುವಂತೆ ಈ ವಿದ್ಯಾರ್ಥಿಗಳು ಮೆಸ್ ಆಡಳಿತವನ್ನು ಮೊದಲೇ ವಿನಂತಿಸಿದ್ದರು. ವಿದ್ಯಾರ್ಥಿಗಳ ಈ ಬೇಡಿಕೆಯನ್ನು ಸ್ವೀಕರಿಸಿ, ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಎರಡು ವಿಭಿನ್ನ ಮೆಸ್‌ಗಳಲ್ಲಿ ಒಂದರಲ್ಲಿ ಸಾತ್ವಿಕ ಆಹಾರವನ್ನು ವ್ಯವಸ್ಥೆ ಮಾಡಿತು. ಉಪವಾಸ ವಿದ್ಯಾರ್ಥಿಗಳಿಗಾಗಿ ಗೊತ್ತುಪಡಿಸಿದ ಮೆಸ್‌ನಲ್ಲಿ ಸಾತ್ವಿಕ ಆಹಾರವನ್ನು ನೀಡುತ್ತಿದ್ದಾಗ, SFI ಗೆ ಸಂಬಂಧಿಸಿದ ಜನರು ಅಲ್ಲಿ ಬಲವಂತವಾಗಿ ಮಾಂಸಾಹಾರವನ್ನು ಬಡಿಸಲು ಪ್ರಯತ್ನಿಸಿದರು ಎಂದು ಎಬಿವಿಪಿ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಘರ್ಷಣೆಯ ವಿಡಿಯೋಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು, ಎಸ್‌ಎಫ್‌ಐ ದೆಹಲಿ ತನ್ನ ಎಕ್ಸ್ ಹ್ಯಾಂಡಲ್‌ನಲ್ಲಿ ಎಬಿವಿಪಿ ಸದಸ್ಯರು ಎಸ್‌ಎಯು ಮೆಸ್‌ನಲ್ಲಿ ಮಹಿಳಾ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ವಿಡಿಯೋವನ್ನು ಪೋಸ್ಟ್ ಮಾಡಿದೆ. (ಏಜೆನ್ಸೀಸ್​)