ಶಿವಮೊಗ್ಗ: ಸರಸ್ವತಿ ಪೂಜೆಯ ಘಂಟೆ ನಾದ ಮೊಳಗುತ್ತಿದ್ದಂತೆ ದೇಸಿ ಉಡುಗೆಯಲ್ಲಿ ಕಂಗೊಳಿಸುತ್ತಿದ್ದ ವಿದ್ಯಾರ್ಥಿಗಳು ಮುಂಬರುವ ಶೈಕ್ಷಣಿಕ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸುವ ಶಕ್ತಿ ನೀಡುವಂತೆ ಭಕ್ತಿಯಿಂದ ಪ್ರಾರ್ಥಿಸಿದರು. ಪೂಜೆ ಬೆನ್ನಲ್ಲೇ ಶುರುವಾದ ಡೊಳ್ಳಿನ ನಾದಕ್ಕೆ ಸಂಭ್ರಮದಿಂದ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು.
ಇಂತಹ ವಿದ್ಯಾರ್ಥಿಗಳ ಸ್ನೇಹ ಸಂಭ್ರಮಕ್ಕೆ ಸಾಕ್ಷಿಯಾಗಿದ್ದು ನಗರದ ಎನ್‌ಇಎಸ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿನ ಆವರಣ. ಭಾನುವಾರ ಕಾಲೇಜಿನಲ್ಲಿ ಏರ್ಪಡಿಸಿದ್ದ ಸಾಂಪ್ರದಾಯಿಕ ದಿನದಲ್ಲಿ ವಿದ್ಯಾರ್ಥಿಗಳು ದೇಸಿಯ ಉಡುಗೆಯಲ್ಲಿ ಮಿಂಚಿದರು.
ಪುಸ್ತಕಗಳನ್ನು ಜೊಡಿಸಿಟ್ಟು, ಸರಸ್ವತಿ ಮಾತೆಯ ಫೋಟೊಗೆ ಹಣ್ಣು ಹಂಪಲು, ಹೂವುಗಳಿಂದ ಅಲಂಕರಿಸಿದ್ದ ವಿದ್ಯಾರ್ಥಿಗಳು, ತಳಿರು, ತೋರಣ, ರಂಗೋಲಿಗಳಿಂದ ಇಡೀ ಕಾಲೇಜನ್ನು ಸಾಂಪ್ರದಾಯಿಕವಾಗಿ ಸಿಂಗರಿಸಿದ್ದರು. ಸೀರೆ, ಪಂಚೆ, ಶಲ್ಯದಲ್ಲಿ ಆಗಮಿಸಿದ್ದ ಬಿಕಾಂ, ಬಿಬಿಎ, ಬಿಸಿಎ ವಿದ್ಯಾರ್ಥಿಗಳು ಪೂಜೆಯ ನಂತರ ಕಾಲೇಜು ಆವರಣದಲ್ಲೇ ಸಂಭ್ರಮಿಸಿದರು. ತಾವು ತಂದಿದ್ದ ಜೀಪು, ಬೈಕುಗಳಲ್ಲಿ ರೋಡ್ ಷೋ ನಡೆಸಿದರು.
ಬಿಸಿಲ ಧಗೆಯನ್ನು ಲೆಕ್ಕಿಸದ ವಿದ್ಯಾರ್ಥಿಗಳು ಪರಸ್ಪರ ಅಭಿನಂದಿಸಿಕೊಳ್ಳುತ್ತ, ಸೆಲ್ಫಿ ತೆಗೆದುಕೊಳ್ಳುತ್ತ ಉತ್ಸುಕತೆಯಿಂದ ಹೆಜ್ಜೆ ಹಾಕುತ್ತಿದ್ದದ್ದು ಸಾಮಾನ್ಯವಾಗಿತ್ತು. ಬಣ್ಣದ ಹೊಗೆ ಬಿಡುತ್ತಿದ್ದ ಸನ್ನೆಗೋಲುಗಳು, ಆಗಾಗ ಸಿಡಿಯುತ್ತಿದ್ದ ಬಣ್ಣದ ಪೇಪರ್ ಚೂರುಗಳ ಪಟಾಕಿಗಳು ಸ್ಟೇಜ್ ಮೇಲಿನ ರ‌್ಯಾಂಪ್ ನಡಿಗೆಗೆ ಮತ್ತಷ್ಟು ಮೆರುಗು ನೀಡಿತ್ತು. ಡಿಜೆ ಹಾಡುಗಳಿಗೆ ಕುಣಿದು ಕುಪ್ಪಳಿಸುತ್ತಿದ್ದ ಅಂತಿಮ ವರ್ಷದ ವಿದ್ಯಾರ್ಥಿಗಳ ಕಣ್ಣುಗಳಲ್ಲಿ ಪರೀಕ್ಷೆ ಮುಗಿದ ನಂತರ ಕಾಲೇಜು ದಿನಗಳು ಮುಗಿಯಿತೆಂಬ ಬೇಸರ ಛಾಯೆಯೊಂದು ಮೂಡಿತ್ತು.
ಪ್ರಾಚಾರ್ಯ ಡಾ. ಬಿ.ಎಸ್.ಶಿವಪ್ರಸಾದ್, ಉಪನ್ಯಾಸಕರಾದ ವಿನುತಾ ಶೆಣೈ, ಗುರುರಾಜ್, ಸುಜಾತಾ, ಅರುಣ್‌ಕುಮಾರ್, ಈಶ್ವರ್, ಚಂದನ ಮತ್ತಿತರರು ಇದ್ದರು.