ಮಂಡ್ಯ: ಸರಿಯಾಗಿ ತರಗತಿಗೆ ಹಾಜರಾಗುತ್ತಿಲ್ಲ ಎಂದು ಪಾಲಕರಿಗೆ ತಿಳಿಸಿದ್ದಕ್ಕೆ ಆಕ್ರೋಶಗೊಂಡ ವಿದ್ಯಾರ್ಥಿಯೊಬ್ಬ ಉಪನ್ಯಾಸಕನಿಗೆ ಲಾಂಗ್ ತೋರಿಸಿ ಬೆದರಿಕೆ ಹಾಕಿರುವ ಆಘಾತಕಾರಿ ಘಟನೆ ಸಕ್ಕರೆ ನಾನು ಮಂಡ್ಯದಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆಯ ಕಾಲೇಜೊಂದರಲ್ಲಿ ಈ ಘಟನೆ ನಡೆದಿದೆ. ತರಗತಿಗೆ ನಿರಂತರವಾಗಿ ಗೈರಾಗುತ್ತಿದ್ದ ಬಗ್ಗೆ ಉಪನ್ಯಾಸಕ, ವಿದ್ಯಾರ್ಥಿಯ ಪಾಲಕರಿಗೆ ಮಾಹಿತಿ ನೀಡಿ, ಬುದ್ಧಿವಾದ ಹೇಳುವಂತೆ ಸಲಹೆ ನೀಡಿದ್ದರು. ಬಳಿಕ ಪಾಲಕರು ವಿದ್ಯಾರ್ಥಿಯನ್ನು ತರಾಟೆಗೆ ತೆಗೆದುಕೊಂಡರು.
ಇದರಿಂದ ಆಕ್ರೋಶಗೊಂಡು ಕಾಲೇಜಿಗೆ ಲಾಂಗ್ ತಂದಿದ್ದ ವಿದ್ಯಾರ್ಥಿ, ಲ್ಯಾಬ್ನಲ್ಲಿದ್ದ ಉಪನ್ಯಾಸಕನಿಗೆ ಲಾಂಗ್ ತೋರಿಸಿ ಅವಾಜ್ ಹಾಕಿದ್ದಾನೆ. ಇದರಿಂದ ಉಪನ್ಯಾಸಕ ಸಹ ಒಂದು ಕ್ಷಣ ಗಾಬರಿಗೆ ಒಳಗಾದರು. ವಿದ್ಯಾರ್ಥಿಯನ್ನು ಮನವೊಲಿಸಲು ಪ್ರಯತ್ನಿಸಿದರು. ಆದರೂ ವಿದ್ಯಾರ್ಥಿ, ಉಪನ್ಯಾಸಕನಿಗೆ ನಿಂದಿಸಿ, ಬೆದರಿಕೆ ಹಾಕಿದ್ದಾನೆ.
ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿದ್ದು, ವಿದ್ಯಾರ್ಥಿಯ ವರ್ತನೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಆದರೆ, ತಪ್ಪೊಪ್ಪಿಗೆ ಬರೆಸಿಕೊಂಡು ಇನ್ಮುಂದೆ ಈ ರೀತಿ ಮಾಡದಂತೆ ಪೊಲೀಸರು ಬುದ್ಧಿ ಹೇಳಿ ಕಳುಹಿಸಿದ್ದಾರೆ. ಅಪ್ರಾಪ್ತನಾದ ಹಿನ್ನೆಲೆಯಲ್ಲಿ ಬಂಧಿಸದೇ ಬುದ್ಧಿ ಹೇಳಿ ಬಿಟ್ಟು ಕಳುಹಿಸಿದ್ದಾರೆ. (ದಿಗ್ವಿಜಯ ನ್ಯೂಸ್)