ನ್ಯೂಸ್

ವಿದ್ಯಾರ್ಥಿನಿ ಪೋಟೋ ಮಾಫ್೯; ಮೂವರ ಸೆರೆ

ಬೆಂಗಳೂರು: ಖಾಸಗಿ ಶಾಲೆ ವಿದ್ಯಾರ್ಥಿನಿ ಪೋಟೋವನ್ನು ಅಶ್ಲೀಲವಾಗಿ ಮಾರ್ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ್ದ ಪಿಯುಸಿ ವಿದ್ಯಾರ್ಥಿ ಮತ್ತು ಇಬ್ಬರು ಅಪ್ರಾಪ್ತರನ್ನು ಈಶಾನ್ಯ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.

ಖಾಸಗಿ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ ಜೀವನ್ ಬಂಧಿತ. ಮತ್ತಿಬ್ಬರು ಸಂತ್ರಸ್ತೆ ಸಹಪಾಠಿಗಳಾದ ಬಾಲಕರನ್ನು ಬಂಧಿಸಿ ಅಭಿರಕ್ಷೆಗೆ ಒಳಪಡಿಸಲಾಗಿದೆ. ಕೃತ್ಯಕ್ಕೆ ಬಳಸಿದ್ದ ಮೂರು ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂತ್ರಸ್ತ ವಿದ್ಯಾರ್ಥಿನಿ ಮತ್ತು ಇಬ್ಬರು ಬಾಲಕರ ನಡುವೆ ಮನಸ್ತಾಪ ಉಂಟಾಗಿತ್ತು. ಇದೇ ದ್ವೇಷಕ್ಕಾಗಿ ಬಾಲಕರು, ವಿದ್ಯಾರ್ಥಿನಿಯ ಇನ್‌ಸ್ಟಾಗ್ರಾಂ ಖಾತೆಯಿಂದ ಪೋಟೋವನ್ನು ಕದ್ದು ಅದನ್ನು ಪರಿಚಯವಿದ್ದ ಜೀವನ್‌ಗೆ ಕೊಟ್ಟು ಅಶ್ಲೀಲ ಪೋಟೋವಾಗಿ ಎಡಿಟ್ ಮಾಡಿಕೊಡುವಂತೆ ಕೋರಿದ್ದರು. ಗೂಗಲ್‌ನಲ್ಲಿ ಸಿಕ್ಕ ಆ್ಯಪ್ ಸಹಾಯದಿಂದ ಜೀವನ್, ಸಂತ್ರಸ್ತ ವಿದ್ಯಾರ್ಥಿನಿಯ ಪೋಟೋದಲ್ಲಿದ್ದ ಮುಖವನ್ನು ತೆಗೆದುಕೊಂಡು ಅಶ್ಲೀಲ ಪೋಟೋಗೆ ಎಡಿಟ್ ಮಾಡಿ ಕೊಟ್ಟಿದ್ದ. ಇದನ್ನು ಬಾಲಕರು, ಇನ್‌ಸ್ಟಾಗ್ರಾಂನಲ್ಲಿ ವಿದ್ಯಾರ್ಥಿನಿ ಹೆಸರಿನಲ್ಲಿ ನಕಲಿ ಖಾತೆ ತೆರೆದು ಅಪ್‌ಲೋಡ್ ಮಾಡಿ ಕಿರುಕುಳ ನೀಡಿದ್ದರು.

ಗಮನಿಸಿದ ವಿದ್ಯಾರ್ಥಿನಿ, ಪಾಲಕರ ಬಳಿ ಅಳಲು ತೋಡಿಕೊಂಡಿದ್ದರು. ಈ ಬಗ್ಗೆ ಸಂತ್ರಸ್ತೆ ಪಾಲಕರು ಕೊಟ್ಟ ದೂರಿನ ಮೇರೆಗೆ ಈಶಾನ್ಯ ಸಿಇಎನ್ ಠಾಣೆ ಇನ್‌ಸ್ಪೆಕ್ಟರ್ ಮಲ್ಲಿಕಾರ್ಜುನ್ ನೇತೃತ್ವದ ತಂಡ ಕಾರ್ಯಾಚರಣೆ ಕೈಗೊಂಡು ಪ್ರಕರಣ ಪತ್ತೆಹಚ್ಚಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಪಾಲಕರಿಗೆ ಖಾಕಿ ಕಿವಿ ಮಾತು

ಮಕ್ಕಳನ್ನು ಒಳ್ಳೆಯ ಶಾಲಾ, ಕಾಲೇಜಿಗೆ ಸೇರಿಸಿ ಎಲ್ಲ ಸೌಲಭ್ಯ ಕೊಡುವ ಪಾಲಕರು ಅವರ ಚಲನವಲನದ ಮೇಲೂ ನಿಗಾ ವಹಿಸಬೇಕು. ಮಕ್ಕಳ ಮೊಬೈಲ್ ಪರಿಶೀಲನೆ ಮತ್ತು ಯಾವ ಯಾವ ಜಾಲತಾಣದಲ್ಲಿ ಆಕ್ಟೀವ್ ಆಗಿದ್ದಾರೆ. ಅದರಲ್ಲಿ ಏನೆಲ್ಲ ೆಸ್ಟ್ ಮಾಡುತ್ತಿದ್ದಾರೆ ಎಂಬುದನ್ನು ತಿಳಿದು ಅಗತ್ಯ ಬಂದಾಗ ಜಾಲತಾಣದಿಂದ ಆಗುವ ಅಪಾಯದ ಬಗ್ಗೆಯೂ ಅರಿವು ಮೂಡಿಸಬೇಕೆಂದು ಈಶಾನ್ಯ ಸಿಇಎನ್ ಪೊಲೀಸರು ಕಿವಿಮಾತು ಹೇಳಿದ್ದಾರೆ.

ಗೂಗಲ್‌ನಲ್ಲಿ ಸಿಗುವ ಆ್ಯಪ್ ಬಳಸಿಕೊಂಡು ಅಥವಾ ಮತ್ಯಾವುದೇ ತಂತ್ರಜ್ಞಾನ ಬಳಸಿ ಅಶ್ಲೀಲವಾಗಿ ಚಿತ್ರಗಳನ್ನು ಎಡಿಟ್ ಮಾಡಿ ಮರ್ಯಾದೆಗೆ ಧಕ್ಕೆ ತಂದರೆ ಅಪರಾಧ ಆಗಲಿದೆ. ಒಮ್ಮೆ ಎ್ಐಆರ್ ದಾಖಲಾಗಿ ಜೈಲಿಗೆ ಹೋದರೆ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ವಿದ್ಯಾರ್ಥಿಗಳು ಸಹ ಸೈಬರ್ ಅಪರಾಧಗಳ ಬಗ್ಗೆ ಎಚ್ಚರದಿಂದ ಇರಬೇಕೆಂದು ಸಲಹೆ ನಿಡಿದ್ದಾರೆ.