ನ್ಯೂಸ್

ಮೆಟ್ರೋ ನಿಲ್ದಾಣದಿಂದ ಕೆಳಗೆ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು..!

ಹೈದರಾಬಾದ್​: ಮೆಟ್ರೋ ನಿಲ್ದಾಣದಿಂದ ಕೆಳಗೆ ಜಿಗಿದು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಹೈದರಾಬಾದ್​ನ ಬೆಗುಂಪೇಟ್​ ಮೆಟ್ರೋ ನಿಲ್ದಾಣದಲ್ಲಿ ಬುಧವಾರ ರಾತ್ರಿ ನಡೆದಿದೆ.

ಮೃತನನ್ನು ಮಂಜುನಾಥ್​ (23)​ ಎಂದು ಗುರುತಿಸಲಾಗಿದ್ದು, ಖಿನ್ನತೆಯ ಬಳಲುವಿಕೆಯೇ ಆತ್ಮಹತ್ಯೆಗೆ ಕಾರಣ ಎಂದು ತಿಳಿದುಬಂದಿದೆ. ಈತ​ ಕರ್ನೂಲ್​ ಜಿಲ್ಲೆಯ ಮಂತ್ರಾಲಯದ ರಾಮಚಂದ್ರನಗರದ ನಿವಾಸಿ. ಚಾರ್ಟೆಡ್​ ಅಕೌಂಟೆಂಟ್​ ಓದುತ್ತಿದ್ದ ಮಂಜುನಾಥ್​ ಅನೇಕ ದಿನಗಳಿಂದ ಖಿನ್ನತೆಯಿಂದ ಬಳಲುತ್ತಿದ್ದರು. ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಂಜುನಾಥ್​ ಕಾಣೆಯಾಗಿರುವ ಬಗ್ಗೆ ಅವರ ಸಹೋದರ ಗೋವರ್ಧನ್​ ನಗರಕ್ಕೆ ಆಗಮಿಸಿ ದೂರು ದಾಖಲಿಸಿದ್ದ. ಇದರ ನಡುವೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ತಿಳಿದು, ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಮಂಜುನಾಥ್​ ಸಾವಿಗೂ 4 ದಿನಗಳ ಹಿಂದಷ್ಟೇ ಕುಟುಂಬದ ಸಂಪರ್ಕಕ್ಕೆ ಬಂದಿದ್ದ. ಹಾಸ್ಟೆಲ್​ ಮಾಲೀಕರಿಗೆ ಫೋನ್​ ಮಾಡಿ ಸಹೋದರನ ಬಗ್ಗೆ ವಿಚಾರಿಸಿದ್ದಾಗ ಆತ ನಾಲ್ಕು ದಿನಗಳಿಂದ ಪತ್ತೆಯಿಲ್ಲ ಎಂಬ ಮಾಹಿತಿ ತಿಳಿದಿತ್ತು. ಆ ಬಳಿಕವೇ ಗೋವರ್ಧನ್​ ನಾಪತ್ತೆ ದೂರು ನೀಡಿದ್ದರು. ಇದೀಗ ಮಂಜುನಾಥ್​ ಶವವಾಗಿ ಪತ್ತೆಯಾಗಿದ್ದು, ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. (ಏಜೆನ್ಸೀಸ್​)