ಬೆಂಗಳೂರು: ನಿರ್ಮಾಣ ಹಂತದಲ್ಲಿದ್ದ ಕಾಲೇಜು ಕಟ್ಟಡದ ಮರದ ಸೆಂಟ್ರಿಂಗ್ ಪೀಸ್ ಬಿದ್ದು, ವಿದ್ಯಾರ್ಥಿಯೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಳೆದ ತಿಂಗಳು ಕನಕಪುರ ರಸ್ತೆ ಬಳಿಯ ಪ್ರತಿಷ್ಠಿತ ದಯಾನಂದ್ ಸಾಗರ್ ಕಾಲೇಜಿನಲ್ಲಿ ನಡೆದಿದೆ.
ಘಟನೆಯ ವಿವರ
ಗಾಯಗೊಂಡಿರುವ ವಿದ್ಯಾರ್ಥಿ ಅಭಿಷೇಕ್ ಬಿಕಾಂ ವ್ಯಾಸಂಗ ಮಾಡುತ್ತಿದ್ದು, ಕಳೆದ 1ನೇ ತಾರೀಖು ಬೆಳಗ್ಗೆ ಕಾಲೇಜಿಗೆ ಹೋದಾಗ ಮೇಲ್ಕಂಡ ಘಟನೆ ನಡೆದಿದೆ. ಘಟನೆಯಲ್ಲಿ ಅಭಿಷೇಕ್ ತಲೆಗೆ ಗಂಭೀರ ಗಾಯಗಳಾಗಿದ್ದು, ಸಾಗರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ಕಟ್ಟಡ ಗುತ್ತಿಗೆದಾರ, ಕಾಲೇಜು ಆಡಳಿಯ ಮಂಡಳಿ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಪ್ರಕರಣ ದಾಖಲು
ಸದ್ಯ ದಯಾನಂದ್ ಸಾಗರ್ ಕಾಲೇಜು ವಿರುದ್ಧ ಗಾಯಾಳು ವಿದ್ಯಾರ್ಥಿ ದೂರು ನೀಡಿದ್ದು, ಕಗ್ಗಲೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಾಲಕರ ಆರೋಪ
"ನಾಮಕಾವಸ್ತೆಗೆ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ಇನ್ನೂ ಚೇತರಿಸಿಕೊಂಡಿಲ್ಲ. ಆದರೂ ಆಸ್ಪತ್ರೆ ಸಿಬ್ಬಂದಿ ಡಿಸ್ಚಾರ್ಜ್ ಮಾಡುತ್ತಿದ್ದೇವೆ ಎನ್ನುತ್ತಿದ್ದಾರೆ. ವಿದ್ಯಾರ್ಥಿ ಅಭಿಷೇಕ್ ಸ್ಥಿತಿ ಇನ್ನೂ ಗಂಭೀರವಾಗಿದೆ'' ಎಂದು ಅಭಿಷೇಕ್ ಸಂಬಂಧಿಕರು ಆರೋಪ ಮಾಡಿದ್ದಾರೆ. "ಶಾಲೆಯಲ್ಲಿ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಆದರೂ ಸುರಕ್ಷತಾ ಕ್ರಮ ವಹಿಸಿಲ್ಲ. ಇಷ್ಟೆಲ್ಲಾ ಆದರೂ ವಿದ್ಯಾರ್ಥಿಗೆ ಏನಾಗಿದೆ ಎಂದು ಕಾಲೇಜು ಆಡಳಿತ ಮಂಡಳಿ ಕೇಳಿಲ್ಲ. ಅಭಿಷೇಕ್ಗೆ ಇನ್ನೂ ಚಿಕಿತ್ಸೆಯ ಅವಶ್ಯಕತೆಯಿದೆ" ಎಂದು ಸಾಗರ್ ಆಸ್ಪತ್ರೆ ಬಳಿ ಅಭಿಷೇಕ್ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.