ನ್ಯೂಸ್

ಅಪಾರ್ಟ್‌ಮೆಂಟ್‌ನಿಂದ ಹಾರಿ ವಿದ್ಯಾರ್ಥಿ ಆತ್ಮಹತ್ಯೆ


ಬೆಂಗಳೂರು: ಖಿನ್ನತೆಯಿಂದಾಗಿ ಅಪಾರ್ಟ್‌ಮೆಂಟ್‌ವೊಂದರ ಮಹಡಿಯಿಂದ ಜಿಗಿದು ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಬ್ಯಾಟರಾಯನಪುರ ಸಮೀಪದಲ್ಲಿ ನಡೆದಿದೆ.
ಜ್ಞಾನಜ್ಯೋತಿನಗರ ನಿವಾಸಿ ವಿಜಯಲಕ್ಷ್ಮೀ(೧೭)ಆತ್ಮಹತ್ಯೆ ಮಾಡಿಕೊಂಡು ವಿದ್ಯಾರ್ಥಿನಿ. ನಾಯಂಡಹಳ್ಳಿ ರಸ್ತೆಯ ಬಿಎಚ್‌ಇಎಲ್ ಮುಂಭಾಗ ಅಪಾರ್ಟ್‌ಮೆಂಟ್‌ವೊಂದಕ್ಕೆ ಬಂದು ಸೆ.೨೦ರಂದು ೧೩ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸೆ. ೨೧ರಂದು ಸಂಜೆ ಅಪಾರ್ಟ್‌ಮೆಂಟ್ ಆವರಣದಲ್ಲಿ ವಿಜಯಲಕ್ಷ್ಮೀ ಮೃತದೇಹ ಪತ್ತೆಯಾಗಿದೆ. ಈ ಅಪಾರ್ಟ್‌ಮೆಂಟ್‌ಗೆ ಆಕೆ ಬರಲು ಕಾರಣ ಏನು? ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ವಿಜಯಲಕ್ಷ್ಮೀ ಖಾಸಗಿ ಕಾಲೇಜಿನಲ್ಲಿ ಮೊದಲ ವರ್ಷದ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಸೆ.೨೦ರಂದು ಸಂಜೆ ೬.೧೫ರ ಸುಮಾರಿಗೆ ಅಪಾರ್ಟ್‌ಮೆಂಟ್‌ಗೆ ಹೋಗಿದ್ದಾಳೆ. ಗೇಟ್ ಬಳಿಯೇ ಸೆಕ್ಯೂರಿಟಿ ಗಾರ್ಡ್ ತಡೆದು ವಿಚಾರಿಸಿದ್ದಾರೆ. ಆಗ ೧೩ ಮಹಡಿಗೆ ಹೋಗಬೇಕೆಂದು ವಿಜಯಲಕ್ಷ್ಮೀ ಹೇಳಿದ್ದಾಳೆ. ಹೀಗಾಗಿ ೧೩ನೇ ಮಹಡಿಯಲ್ಲಿ ವಾಸವಾಗಿದ್ದವರಿಗೆ ಕರೆ ಮಾಡಿ ವಿಷಯ ತಿಳಿಸಿದ ಸೆಕ್ಯೂರಿಟಿ ಗಾರ್ಡ್‌ಗೆ, ಫ್ಲಾೃಟ್ ನಿವಾಸಿಗಳು ಪರಿಚಯಸ್ಥರು ಇರಬಹುದು ಎಂದು ಭಾವಿಸಿ, ಕಳುಹಿಸಿ ಎಂದಿದ್ದಾರೆ. ಈ ನೆಪದಲ್ಲಿ ೧೩ ಮಹಡಿಗೆ ಹೋಗಿ ಜಿಗಿದಿದ್ದಾಳೆ. ಆದರೆ, ಮೃತದೇಹ ಕಿರಿದಾದ ಖಾಲಿ ಜಾಗದಲ್ಲಿ ಬಿದ್ದಿದ್ದರಿಂದ ಸೆ.೨೧ರ ಬೆಳಗ್ಗೆವರೆಗೂ ಯಾರು ಗಮನಕ್ಕೆ ಬಂದಿಲ್ಲ. ಆ ನಂತರ ಸ್ಥಳೀಯರು ವಾಯುವಿಹಾರ ಮಾಡುವಾಗ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.


ಸ್ಥಳಕ್ಕೆ ಬಂದ ಪೊಲೀಸರು ವಿಜಯಲಕ್ಷ್ಮೀ ಬ್ಯಾಗ್‌ನಲ್ಲಿದ್ದ ಗುರುತಿನ ಚೀಟಿ ಪರಿಶೀಲಿಸಿದಾಗ ಆಕೆಯ ಹೆಸರು ಗೊತ್ತಾಗಿದೆ. ಬ್ಯಾಗ್‌ನಲ್ಲಿದ್ದ ಮತ್ತೊಂದು ಚೀಟಿಯಲ್ಲಿದ್ದ ಮೊಬೈಲ್ ನಂಬರ್‌ಗೆ ಕರೆ ಮಾಡಿದಾಗ ಧರ್ಮಸ್ಥಳದ ಹರೀಶ್ ಎಂಬವರು ಕರೆ ಸ್ವೀಕರಿಸಿದ್ದಾರೆ. ಸೆ.೨೦ರಂದು ಮುಂಜಾನೆ ೪ ಗಂಟೆ ಸುಮಾರಿಗೆ ವಿಜಯಲಕ್ಷ್ಮೀ ಒಬ್ಬರೇ ಧರ್ಮಸ್ಥಳದ ಬಸ್ ನಿಲ್ದಾಣದಲ್ಲಿ ನಿಂತಿದ್ದರು. ಅದನ್ನು ಗಮನಿಸಿದ ಹರೀಶ್ ಎಂಬವರು ತಮ್ಮ ಸಹೋದರಿಯ ಜತೆ ವಿಚಾರಿಸಿ ಆಕೆಗೆ ಬೆಂಗಳೂರಿನ ಬಸ್ ಹತ್ತಿಸಿ ಕಳುಹಿಸಿದ್ದಾರೆ. ಅಲ್ಲದೆ, ಏನಾದರೂ ಸಮಸ್ಯೆಯಾದರೆ ಕರೆ ಮಾಡುವಂತೆ ತಮ್ಮ ಮೊಬೈಲ್ ನಂಬರ್ ಅನ್ನು ಚೀಟಿಯಲ್ಲಿ ಬರೆದು ಕಳುಹಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಆತ್ಮಹತ್ಯೆಗೆ ಮೊದಲು ತಂದೆಗೆ ಕರೆ
ಪ್ರಾಥಮಿಕ ವಿಚಾರಣೆಯಲ್ಲಿ ಅಪಾರ್ಟ್‌ಮೆಂಟ್‌ನಲ್ಲಿ ವಿಜಯಲಕ್ಷ್ಮೀಗೆ ಯಾರು ಪರಿಚಯ ಇಲ್ಲ. ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದಲೇ ಅಪಾರ್ಟ್‌ಮೆಂಟ್‌ಗೆ ಹೋಗಿದ್ದಾಳೆ. ಆಗ ತನ್ನ ತಂದೆಗೆ ಸೆಕ್ಯೂರಿಟಿ ಗಾರ್ಡ್‌ನಿಂದ ಕರೆ ಮಾಡಿಸಿದ್ದು, ಆ ನಂಬರ್ ಬೇರೊಂದು ನಂಬರ್‌ಗೆ ವರ್ಗಾವಣೆಯಾಗಿತ್ತು. ಹೀಗಾಗಿ ತಂದೆಯೊಂದಿಗೂ ಮಾತನಾಡಿಲ್ಲ ಎಂದು ಸೆಕ್ಯೂರಿಟಿ ಗಾರ್ಡ್ ಹೇಳಿಕೆ ನೀಡಿದ್ದಾರೆ.