ಹೊಸನಗರ: ನಾಡಿಗೆ ವಿದ್ಯುತ್ ನೀಡಲು ಬದುಕನ್ನು ತ್ಯಾಗ ಮಾಡಿದವರು ಅನ್ಯಾಯದ ವಿರುದ್ಧ ಧ್ವನಿ ಎತ್ತಿ ಹೋರಾಟಕ್ಕೂ ಮುನ್ನುಗ್ಗಬೇಕು ಎಂದು ಮೂಲೆಗದ್ದೆ ಮಠದ ಶ್ರೀ ಅಭಿನವ ಚೆನ್ನಬಸವ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಶ್ರೀ ಮೂಲೆಗದ್ದೆ ಮಠದ ಸಭಾಂಗಣದಲ್ಲಿ ಶರಾವತಿ ಕಣಿವೆ ಹೋರಾಟ ಒಕ್ಕೂಟದಿಂದ ಶರಾವತಿ ಪಂಪ್ಡ್ೃ ಸ್ಟೋರೇಜ್ ಹಾಗೂ ಬೆಂಗಳೂರಿಗೆ ಶರಾವತಿ ನದಿ ಕೊಂಡೊಯ್ಯುವುದನ್ನು ವಿರೋಧಿಸಿ ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಯ ಜನರ ಪರವಾಗಿ ಆರಂಭಿಸುತ್ತಿರುವ ಹೋರಾಟದ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದರು.
ಹೋರಾಟ ಮುಸುಕಿನ ಗುದ್ದಾಟವಾಗದೆ, ಮನಮುಟ್ಟುವಂತಿರಬೇಕು. ಯುವಶಕ್ತಿ ಜಾಗೃತರಾದಾಗ ಮಾತ್ರ ಯಶಸ್ಸು ಸಾಧ್ಯ. ನಿಮ್ಮೂರಿಗೆ ಸರ್ವೇಗೆ ಬಂದಾಗ ಒಗ್ಗಟ್ಟಾಗಿ ವಿರೋಧಿಸಿದರೆ ಮಾತ್ರ ನಿಮ್ಮ ಜಾಗ ಉಳಿಸಿಕೊಳ್ಳಲು ಸಾಧ್ಯ. ಯುವಶಕ್ತಿ ಸ್ವಯಂಪ್ರೇರಿತರಾಗಿ ಮಹದಾಯಿ ಮಾದರಿಯ ಹೋರಾಟ ಕೈಗೊಂಡರೆ ಮಾತ್ರ ಶರಾವತಿ ಹೆಸರಿನಲ್ಲಿ ಮಲೆನಾಡಿನ ಜನಜೀವನದ ಮೇಲಾಗುವ ಅನ್ಯಾಯಕ್ಕೆ ಪೂರ್ಣ ವಿರಾಮ ಹಾಕಲು ಸಾಧ್ಯ ಎಂದು ನುಡಿದರು.
ಜಾತ್ಯತೀತ, ಪಕ್ಷಾತೀತವಾಗಿ ಎಲ್ಲ ಧರ್ಮದ ಮುಖಂಡರು, ಮಠಾಧೀಶರು, ರಾಜಕೀಯ ನೇತಾರರು, ವಿದ್ಯಾರ್ಥಿಗಳು, ಮಹಿಳೆಯರು, ಸಾರ್ವಜನಿಕರೆಲ್ಲರೂ ಒಗ್ಗಟ್ಟಾಗಿ ಸರ್ಕಾರವನ್ನು ಎದುರಿಸಬೇಕು. ಯೋಜನೆಗಳ ಅನುಷ್ಠಾನದಿಂದ ಆಗುವ ಆರ್ಥಿಕ, ಜೈವಿಕ, ಪ್ರಾಕೃತಿಕ ನಷ್ಟವನ್ನು ಮನದಟ್ಟು ಮಾಡಿಕೊಡಬೇಕಾದ ಅನಿವಾರ್ಯತೆ ಇದೆ. ಶರಾವತಿ ಉಳಿಸಲು ಈ ಹಿಂದೆ ಕೈಗೊಂಡ ಮೊದಲ ಹೋರಾಟ ಚಾರಿತ್ರಿಕ ಯಶಸ್ಸು ಕಂಡಿತ್ತು. ಈಗ ಮತ್ತೆ ಹೋರಾಟದ ಚರಿತ್ರೆ ಮತ್ತೆ ದಾಖಲಿಸುವ ಕಾಲ ಬಂದಿದೆ ಎಂದರು.
ಎರಡೂ ಯೋಜನೆಗಳು ಅವೈಜ್ಞಾನಿಕ. ತಾಂತ್ರಿಕವಾಗಿ ಅನೇಕ ವಿಚಾರಗಳು ಇನ್ನೂ ಗೊಂದಲದಲ್ಲಿವೆ. ಈ ಯೋಜನೆಯಿಂದಾಗಿ ಜೀವಸಂಕುಲದ ವಿನಾಶ ಆಗುವುದರೊಂದಿಗೆ ಮುಳುಗಡೆ ಜನರ ಬದುಕಿನ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದು ಮಾಜಿ ಶಾಸಕ ಹರತಾಳು ಹಾಲಪ್ಪ ಅಭಿಪ್ರಾಯಪಟ್ಟರು. ಬೆಂಗಳೂರಿನವರಿಗೆ ನೀರು ಪೂರೈಸಲು ಇನ್ನು ಅನೇಕ ಮಾರ್ಗಗಳಿವೆ. ಹಾಗೆಯೇ ಸೋಲಾರ್ ಎನರ್ಜಿ ಪ್ರೊಡಕ್ಷನ್ ಅತ್ಯುತ್ತಮ ವಿದ್ಯುತ್ ಉತ್ಪಾದನಾ ವಿಧಾನ. ಹೀಗೆ ಶರಾವತಿ ನೀರಿನ ಬದಲಾಗಿ ಪರ್ಯಾಯ ವ್ಯವಸ್ಥೆಗಳ ಕುರಿತು ಸರ್ಕಾರ ಚಿಂತನೆ ಮಾಡುವುದು ಯೋಗ್ಯ ಎಂದರು.
ಮುಖಂಡರಾದ ಪ್ರತಿಭಾ ರಾಘವೇಂದ್ರ, ಕವಿತಾ, ಶಾರದಾ ಅಡಕೆ ಹಿಂಗಾರವನ್ನು ಅರಳಿಸುವ ಮೂಲಕ ಹೋರಾಟದ ಪೂರ್ವಭಾವಿ ಸಭೆಗೆ ಚಾಲನೆ ನೀಡಿದರು. ವಿಧಾನ ಪರಿಷತ್ ಸದಸ್ಯೆ ಪ್ರಫುಲ್ಲಾ ಮಧುಕರ್, ತೀ.ನಾ. ಶ್ರೀನಿವಾಸ್, ಅನಿತಾಕುಮಾರಿ, ಚಂದ್ರಕಾಂತ ಕತ್ರೇಕರ್, ದಿನೇಶ್ ಶಿರವಾಳ, ಮಲ್ಲಿಕಾರ್ಜುನ ಹಕ್ರೆ, ರವೀಂದ್ರ ಮಾಸ್ತಿ ಕಟ್ಟೆ, ಟಿ.ಆರ್.ಕೃಷ್ಣಪ್ಪ, ಶಂಕರ ಶರ್ಮಾ, ಶಿವಯೋಗಿ ಶಿಕಾರಿಪುರ, ಕವಿತಾ ಧಾರವಾಡ, ಶಾರದಾ ಧಾರವಾಡ, ಕೆ.ಬಿ.ಪ್ರಶಾಂತ ಸಾಗರ, ಉಮಾ ಮಹೇಶ್ವರ್ ಸಾಗರ, ಸುಬ್ರಹ್ಮಣ್ಯ ಚಕ್ರವಾಕ, ನಿತಿನ್ ನೇರಳೆ, ಅಜಯ ಶರ್ಮಾ, ಸಂಕೂರು ಶಾಂತಮೂರ್ತಿ, ಅಂಬ್ರಯಮಠ, ಪ್ರವೀಣ ಸಾಗರ, ಮಂಜುನಾಥ ಬೇಣದ್, ಶ್ರೀಪಾದ ಬಿಚ್ಚುಗತ್ತಿ, ಧನುಷ್ ಸೇರಿದಂತೆ ಇತರರಿದ್ದರು.