ನ್ಯೂಸ್

ಪೆಟ್ರೋಲ್, ಡೀಸೆಲ್ ದರ ಏರಿಕೆ ಹಿಂಪಡೆಯಲು ಒತ್ತಾಯಿಸಿ ಹೋರಾಟ: ವಿಜಯೇಂದ್ರ

ಬೆಂಗಳೂರು: ಗ್ಯಾರಂಟಿಗಳನ್ನು ಈಡೇರಿಸಲು ಆಗದೆ ಸಂದಿಗ್ಧ ಪರಿಸ್ಥಿತಿಯಲ್ಲಿರುವ ರಾಜ್ಯದ ಕಾಂಗ್ರೆಸ್ ಸರಕಾರವು, ಪೆಟ್ರೋಲ್ ದರವನ್ನು ಪ್ರತಿ ಲೀಟರ್‍ ಗೆ 3 ರೂ., ಡೀಸೆಲ್ ದರವನ್ನು 3.50 ರೂ. ಏರಿಸಿದೆ. ಈ ಮೂಲಕ ರಾಜ್ಯದ ಜನರ ಮೇಲೆ ಬರೆ ಹಾಕಲು ಹೊರಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಕಿಡಿಕಾರಿದರು.

ಪಕ್ಷದ ರಾಜ್ಯ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಶನಿವಾರ ಮಾತನಾಡಿದ ಅವರು, ಬರಗಾಲದಂಥ ಸಂಕಷ್ಟದ ಸಂದರ್ಭದಲ್ಲಿ ರಾಜ್ಯದ ಜನರ ಮೇಲೆ ಹೊರೆ ಹಾಕಿರುವುದು ಅಕ್ಷಮ್ಯ ಅಪರಾಧ.

ಮುಖ್ಯಮಂತ್ರಿಗಳು ತಮ್ಮ ಭಂಡತನವನ್ನು ಬಿಟ್ಟು ಪೆಟ್ರೋಲ್, ಡೀಸೆಲ್ ದರ ಏರಿಕೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಇಲ್ಲವಾದಲ್ಲಿ ಮುಂದಿನ ಸೋಮವಾರ (ಜೂ.17) ಬಿಜೆಪಿ, ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ, ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.

ಸೋಲಿನ ಹತಾಶೆ

ಒಂದೆಡೆ ಸೋಲಿನ ಹತಾಶೆ ಇದ್ದರೆ, ಇನ್ನೊಂದೆಡೆ ರಾಜ್ಯದ ಹಣಕಾಸು ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಭಂಡ ಸರಕಾರ ಮತ್ತು ಮುಖ್ಯಮಂತ್ರಿಗಳು ಇದನ್ನು ಒಪ್ಪಿಕೊಳ್ಳುವುದಿಲ್ಲ. ಆರ್ಥಿಕ ಪರಿಸ್ಥಿತಿ ಸದೃಢವಾಗಿದೆ ಎಂದು ಒಂದೆಡೆ ಹೇಳುತ್ತಾರೆ.

ಇನ್ನೊಂದೆಡೆ ಪೆಟ್ರೋಲ್, ಡೀಸೆಲ್ ದರ ಏರಿಸಿದ್ದು, ಇದು ಹಣಕಾಸಿನ ಪರಿಸ್ಥಿತಿ ಹದಗೆಟ್ಟದ್ದನ್ನು ತಿಳಿಸುತ್ತದೆ. ರಾಜ್ಯ ಸರಕಾರವು ಅಧಿಕಾರಿಗಳು, ಸಿಬ್ಬಂದಿಗೆ ಸಂಬಳ ಕೊಡಲಾಗದ ಕೆಟ್ಟ ಸ್ಥಿತಿಯಲ್ಲಿದ್ದು ಪರಿಣಾಮವಾಗಿ ಪೆಟ್ರೋಲ್, ಡೀಸೆಲ್ ದರ ಏರಿಸಿದ್ದಾರೆ ಎಂದು ದೂಷಿಸಿದರು.

ಗ್ಯಾರಂಟಿಯಿಂದ 18-20 ಸಂಸದರ ಸ್ಥಾನಗಳನ್ನು ಗೆಲ್ಲುವುದಾಗಿ ಭ್ರಮೆಯಲ್ಲಿ ಕಾಂಗ್ರೆಸ್ ಪಕ್ಷ ಇತ್ತು. ಲೋಕಸಭಾ ಚುನಾವಣೆಯಲ್ಲಿ ದೇಶ, ರಾಜ್ಯದಲ್ಲಿ ಕಾಂಗ್ರೆಸ್ಸಿಗೆ ಹಿನ್ನಡೆ ಆಗಿದೆ. ಈ ಸಿಟ್ಟನ್ನು ರಾಜ್ಯದ ಜನರ ಮೇಲೆ ತೋರಿಸುತ್ತಿದ್ದಾರೆ. ಹಿಂದೆ ಸ್ಟ್ಯಾಂಪ್ ಡ್ಯೂಟಿ ಹೆಚ್ಚಿಸಿದ್ದರು. ಇದರ ಬಗ್ಗೆ ನಾವು ವಿಧಾನಸಭೆ ಒಳಗೆ ಮತ್ತು ಹೊರಗಡೆ ಚರ್ಚೆ ಮಾಡಿದ್ದೇವೆ. ವಿದ್ಯುತ್ ದರವನ್ನೂ ಏರಿಸಿದ್ದರು ಎಂದು ಬಿ.ವೈ.ವಿಜಯೇಂದ್ರ ನೆನಪಿಸಿದರು.