ನ್ಯೂಸ್

ಶಿಕ್ಷಕ ಸೇವೆ ಸಾರ್ಥಕ| ದೇವನೂರಿನಲ್ಲಿ ಹರಸಾಹಸ

ರಮೇಶ್​ ಕುಮಾರ್​​ ಬಿ ಎಡಮೋಳೆ

ಜಗತ್ತಿನಲ್ಲಿ ಶಿಕ್ಷಕರಿಗಿಂತ ಪವಿತ್ರ ವೃತ್ತಿ ಬೇರೊಂದಿಲ್ಲ. ತಾವು ಕಷ್ಟ-ಕಾರ್ಪಣ್ಯಗಳ ಬೆಂಕಿಯಲ್ಲಿ ಬೇಯುತ್ತಿದ್ದರೂ ಮಕ್ಕಳನ್ನು ಪುಟಕ್ಕಿಟ್ಟ ಚಿನ್ನದಂತೆ ರೂಪಿಸುವ ಮಹಾನುಭಾವರು ಅವರು. ಸಂಬಳಕ್ಕಾಗಿ ದುಡಿಯದೆ, ಮಕ್ಕಳ ಭವಿಷ್ಯ ರೂಪಿಸುವ ನಿಸ್ವಾರ್ಥ ಸೇವೆಗೆ ತಮ್ಮನ್ನು ಸಮರ್ಪಿಸಿಕೊಳ್ಳುವ ವಿಶಿಷ್ಟ ಸಮುದಾಯವೇ ಶಿಕ್ಷಕರು. ಕರೊನಾ ಸಂಕಷ್ಟದ ಸಂದರ್ಭದಲ್ಲೂ ಮಕ್ಕಳ ಭವಿಷ್ಯ ಮನೆಯ ನಾಲ್ಕು ಗೋಡೆಗಳ ನಡುವೆ ಮುರುಟಿಹೋಗದಂತೆ ಶಿಕ್ಷಕರು ವಹಿಸಿದ ಕಾಳಜಿ ಎಂದೆಂದಿಗೂ ಸ್ಮರಣೀಯ. ಕರೊನಾ ಕಾಲದಲ್ಲಿ ಅನೇಕ ಸವಾಲುಗಳನ್ನು ಮೆಟ್ಟಿನಿಂತು ನವನವೀನ ಪ್ರಯತ್ನ, ಪ್ರಯೋಗಗಳ ಮೂಲಕ ವಿದ್ಯಾರ್ಥಿಗಳನ್ನು ತಲುಪಿದ ಅನುಭವಗಳನ್ನು ನಾಡಿನ ಸಾವಿರಾರು ಶಿಕ್ಷಕರು ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ವಿಜಯವಾಣಿ ಜತೆ ಹಂಚಿಕೊಂಡಿದ್ದು, ಕೆಲವು ಆಯ್ದ ಅನುಭವಗಳನ್ನು ಇಲ್ಲಿ ಪ್ರಕಟಿಸಲಾಗಿದೆ. ನಾಡಿನ ಎಲ್ಲ ಶಿಕ್ಷಕ ವೃಂದಕ್ಕೆ ಶಿಕ್ಷಕರ ದಿನದ ಶುಭಾಶಯಗಳು.

ದೇವನೂರಿನಲ್ಲಿ ಹರಸಾಹಸ

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ದೇವನೂರು ಹಿಂದುಳಿದ ಗ್ರಾಮ. ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಗೆ ಸುತ್ತಮುತ್ತಲ ಹಳ್ಳಿಯವರೂ ಸೇರಿ 150 ವಿದ್ಯಾರ್ಥಿಗಳು ಬರುತ್ತಾರೆ. ಬಹುತೇಕ ವಿದ್ಯಾರ್ಥಿಗಳ ಪಾಲಕರಲ್ಲಿ ಸಾಮಾನ್ಯ ಮೊಬೈಲ್​ಫೋನ್ ಇರುವುದರಿಂದ ವಾಟ್ಸ್​ಆಪ್ ಇಲ್ಲ. ಹೀಗಾಗಿ ಅವರಿಗೆ ಕರೆ ಮಾಡಿಯೇ ವಿದ್ಯಾರ್ಥಿಗಳನ್ನು ಸಂರ್ಪಸಬೇಕು. ಕೆಲವು ಮಕ್ಕಳ ಪಾಲಕರು ಬೆಳಗ್ಗೆ ಹೋದರೆ ಬರುವುದು ಸಂಜೆ, ಕೆಲವೊಮ್ಮೆ ರಾತ್ರಿಯೂ ಅಗುತ್ತದೆ. ಅಲ್ಲಿಯವರೆಗೂ ವಿದ್ಯಾರ್ಥಿಯ ಸಂಪರ್ಕ ಅಸಾಧ್ಯ. ಆದರೂ, ಶಾಲೆಯ 6 ಶಿಕ್ಷಕರು ತಲಾ 20ರಿಂದ 30 ವಿದ್ಯಾರ್ಥಿಗಳನ್ನು ವೈಯಕ್ತಿಕವಾಗಿ ಗಮನಿಸುವ ಜವಾಬ್ದಾರಿ ತೆಗೆದುಕೊಂಡಿದ್ದೇವೆ. ಪುನರಾವರ್ತನೆ ಪ್ರಕಾರ ಒಂದೊಂದು ಗ್ರಾಮಗಳಿಗೆ ವಾರದಲ್ಲಿ 3-4 ದಿನಗಳಿಗೊಮ್ಮೆ ಹೋಗಿ ಸಂರ್ಪಸುತ್ತೇವೆ. ದೂರದರ್ಶನದ ಚಂದನದಲ್ಲಿ ಪ್ರಸಾರವಾಗುವ ಪಾಠ ವೀಕ್ಷಿಸುತ್ತಿದ್ದಾರಾ? ಕೇಳುತ್ತೇವೆ. ಜತೆಗೆ ಗ್ರಾಮದ ಒಂದೆಡೆ ದೈಹಿಕ ಅಂತರದಲ್ಲಿ ಮಕ್ಕಳನ್ನು ಕೂರಿಸಿ ಅವರಿಗೆ ಪ್ರಶ್ನೆಯ ಪ್ರತಿ, ಪಠ್ಯದ ಭಾಗಗಳನ್ನು ನೀಡುತ್ತೇವೆ. ಅದನ್ನು ಮಕ್ಕಳು 2-3 ದಿನಗಳಲ್ಲಿ ಹಿಂದಿರುಗಿಸಬೇಕು. ಕೆಲವೊಮ್ಮೆ ಮಕ್ಕಳು, ತಂದೆ-ತಾಯಿಯೊಂದಿಗೆ ಜಮೀನು, ಸಂಬಂಧಿಕರ ಮನೆಗಳಿಗೆ ಹೋಗಿರುತ್ತಾರೆ. ಅವರನ್ನು ಮತ್ತೆ ಹೇಗಾದರೂ ಸಂರ್ಪಸಿ ಪಠ್ಯ ವಿಷಯ ತಲುಪಿಸುವ ಸಾಹಸ ಕೂಡ ಮಾಡಿದ್ದೇವೆ.

| ಎ.ಎಂ.ಗುರುಸ್ವಾಮಿ ಮುಖ್ಯಶಿಕ್ಷಕ, ಸರ್ಕಾರಿ ಪ್ರೌಢಶಾಲೆ, ದೇವನೂರು