> ಆರ್.ಮುನಿರಾಜು, ಕೋಲಾರ/ವೇಮಗಲ್
ತಾಲೂಕಿನ ವೇಮಗಲ್ ನಾಡಕಚೇರಿಯಲ್ಲಿ ಆಧಾರ್ ಆಪರೇಟರ್ ಕಳೆದ 10 ದಿನಗಳಿಂದ ಕಚೇರಿಗೆ ಗೈರಾಗಿದ್ದು, ಸಾರ್ವಜನಿಕರು ಆಧಾರ್ ಸೇವೆಗಾಗಿ ಪರದಾಡುವಂತಾಗಿದೆ.
ವೇಮಗಲ್ ನಾಡಕಚೇರಿಯ ಆಪರೇಟರ್ ಕಳೆದ ತಿಂಗಳಷ್ಟೇ ಕೆಲಸಕ್ಕೆ ನಿಯೋಜನೆಗೊಂಡಿದ್ದು, ಆರಂಭದಲ್ಲಿ 15 ದಿನ ಮಾತ್ರ ಕಚೇರಿಗೆ ಬಂದು, ಈಗ ಬರುತ್ತಿಲ್ಲ. ಈ ಬಗ್ಗೆ ಸ್ಥಳಿಯ ಆಡಳಿತ ಸಹ ಯಾವುದೇ ಮಾಹಿತಿ ನೀಡದ ಪರಿಣಾಮ ಜನರು ಆಧಾರ್ ಸೇವೆಗಾಗಿ ದಿನವಿಡೀ ನಾಡಕಚೇರಿ ಮುಂದೆ ಠಿಕಾಣಿ ಹೂಡುವಂತಾಗಿದೆ.
ಈ ಹಿಂದಿನ ಆಪರೇಟರ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ವಿವಿಧ ಸೇವೆಗಳಿಗಾಗಿ ಸಾರ್ವಜನಿಕರು ನಾಡಕಚೇರಿಗೆ ಹೋದರೆ ಕೇವಲ 5ರಿಂದ 10 ನಿಮಿಷಗಳಲ್ಲಿ ಕೆಲಸ ಮುಗಿಸಿಕೊಡುತ್ತಿದ್ದರು. ಆದರೆ, ತಿಂಗಳ ಹಿಂದೆ ನಿಯೋಜನೆಗೊಂಡಿರುವ ಆಪರೇಟರ್ ಕೆಲಸಕ್ಕೆ ಸರಿಯಾಗಿ ಬರದಿರುವುದು ಆಧಾರ್ ಸೇರಿದಂತೆ ಗ್ರಾಮಒನ್ನ ವಿವಿಧ ಸೇವೆಗಳು ಸಕಾಲಕ್ಕೆ ದೊರೆಯುತ್ತಿಲ್ಲ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಲಂಚದ ಆರೋಪದ ಹಿನ್ನೆಲೆಯಲ್ಲಿ ವರ್ಗಾವಣೆ
ಸದ್ಯದ ಆಪರೇಟರ್ ಈ ಹಿಂದೆ ಕೋಲಾರದ ತಾಲೂಕು ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅವರ ವಿರುದ್ಧ ಲಂಚಕ್ಕೆ ಬೇಡಿಕೆ ಸೇರಿ ಅನೇಕ ದೂರುಗಳು ಕೇಳಿ ಬಂದಿದ್ದವು. ಪರಿಣಾಮ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ವೇಮಗಲ್ ನಾಡಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಧಾರ್ ಆಪರೇಟರ್ನನ್ನು ಕೋಲಾರದ ಕಚೇರಿಗೆ ಹಾಗೂ
ಕೋಲಾರದ ತಾಲೂಕು ಕಚೇರಿಯಲ್ಲಿನ ಆಪರೇಟರ್ನನ್ನು ವೇಮಗಲ್ ನಾಡಕಚೇರಿಗೆ ನಿಯೋಜನೆ ಮಾಡಲಾಗಿದೆ.
ಬರೀ 15 ದಿನ ಕಾರ್ಯನಿರ್ವಹಣೆ
ಸದ್ಯದ ಆಪರೇಟರ್ ನಿಯೋಜನೆಗೊಂಡ ಆರಂಭದಲ್ಲಿ ಸುಮಾರು 15 ದಿನ ಮಾತ್ರ ಕಾರ್ಯನಿರ್ವಹಿಸಿ, 10 ದಿನಗಳಿಂದ ಕಾರ್ಯನಿರ್ವಹಿಸಲು ಬಂದಿಲ್ಲ. ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರದ ಎಲ್ಲ ಸೇವೆಗಳಿಗೆ ಆಧಾರ್ ಕಡ್ಡಾಯವಾಗಿದೆ. ಹಾಗಾಗಿ ಆಧಾರ್ ಇಂದುಗೊಳಿಸುವುದು (ಅಪಡೇಟ್), ಹೊಸದಾಗಿ ಆಧಾರ್ ನೋಂದಣಿ, ವಿವಿಧ ಸೇವೆಗಳಿಗೆ ಆಧಾರ್ ಜೋಡಣೆ ಸೇರಿ ಯಾವ ಸೇವೆಗಳೂ ಇಲ್ಲದೇ ಜನ ಪರದಾಡುತ್ತಿದ್ದಾರೆ.
ಕೋಟ್)))
108 ಹಳ್ಳಿಗಳಿಗೆ ಹೋಬಳಿ ಕೇಂದ್ರ, ಪಟ್ಟಣ ಪಂಚಾಯಿತಿ ಕೇಂದ್ರಸ್ಥಾನ ವೇಮಗಲ್ ನಾಡಕಚೇರಿಗೆ ಸಮರ್ಥ ಆಪರೇಟರ್ ನಿಯೋಜನೆ ಮಾಡದೆ ಅಧಿಕಾರಿಗಳು ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡಿದ್ದಾರೆ. ಈ ಕೂಡಲೇ ಬೇರೆ ಆಪರೇಟರ್ನನ್ನು ನಿಯೋಜಿಸಿ.
> ಹೆಸರು ಹೇಳಲು ಇಚ್ಛಿಸದ ಗ್ರಾಮಸ್ಥ
ಕೋಟ್))
ಹೊಸದಾಗಿ ನಿಯೋಜನೆಗೊಂಡ ಆಧಾರ್ ಆಪರೇಟರ್ ಕಾರಣಾಂತರಗಳಿಂದ ಕೆಲಸ ಬಿಟ್ಟಿದ್ದಾರೆ. ಅವರ ಬದಲಾಗಿ ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಆಧಾರ್ ಆಪರೇಟರ್ ಅವರನ್ನೇ ಮರಳಿ ಕಳುಹಿಸುವಂತೆ ತಹಸೀಲ್ದಾರ್ ಅವರಿಗೆ ಮನವಿ ಮಾಡಿದ್ದು, ಶ್ರೀದಲ್ಲೇ ಸಮಸ್ಯೆ ಬಗೆಹರಿಸಲಾಗುವುದು.
> ಬಿ.ಹೇಮಲತಾ, ಉಪ ತಹಸೀಲ್ದಾರ್ ವೇಮಗಲ್
ಕೋಟ್))))
ವೇಮಗಲ್&-ಕುರುಗಲ್ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದೆ. ಜನಸಂಖ್ಯೆಯೂ ಹೆಚ್ಚುತ್ತಿದೆ. ಆಧಾರ್ ಆಪರೇಟರ್ ಇಲ್ಲದೆ ಸಾರ್ವಜನಿಕರಿಗೆ ತೊಂದರೆಯಾಗಿದೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಯದಿದ್ದರೆ ಸಮಸ್ಯೆ ಇನ್ನಷ್ಟು ಬಿಗಡಾಯಿಸಲಿದೆ. ಆಗ ಸ್ಥಳಿಯ ಆಡಳಿತದ ವಿರುದ್ಧ ಹೋರಾಟ ಅನಿವಾರ್ಯವಾಗಲಿದೆ.
> ವಿ.ಎಂ.ಮುನಿಯಪ್ಪ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ