ನ್ಯೂಸ್

ಮಹಿಳಾ ದಿನದ ಸಂದರ್ಭ : ರಾಜ್ಯಸಭೆಯಲ್ಲಿ ಮೀಸಲಾತಿಗೆ ಒತ್ತಾಯ

ನವದೆಹಲಿ: ವಿಶ್ವ ಮಹಿಳಾ ದಿನವಾದ ಇಂದು ಆರಂಭವಾದ ರಾಜ್ಯಸಭೆಯ ಬಜೆಟ್​ ಅಧಿವೇಶನದ ಎರಡನೇ ಭಾಗದಲ್ಲಿ ಮಹಿಳೆಯರ ಸ್ಥಾನಮಾನಗಳನ್ನು ಉತ್ತಮಗೊಳಿಸುವ ಬಗ್ಗೆಯೇ ಹೆಚ್ಚಿನ ಚರ್ಚೆ ನಡೆಯಿತು. ಹಲವು ಮಹಿಳಾ ಸದಸ್ಯರು ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯತ್ವದಲ್ಲಿ ಮಹಿಳೆಯರಿಗೆ ಮೀಸಲಾತಿ ಒದಗಿಸಲು ಒತ್ತಾಯಿಸಿದರೆ, ಕೆಲವರು ಮಹಿಳೆಯರ ಮೇಲೆ ಹೆಚ್ಚುತ್ತಿರುವ ಅಪರಾಧಗಳ ಬಗ್ಗೆ ಚರ್ಚೆ ನಡೆಸಿದರು.

ರಾಜ್ಯಸಭೆಯ ಅಧ್ಯಕ್ಷರಾದ ವೆಂಕಯ್ಯ ನಾಯ್ಡು ಅವರು ಸದನದ ಕಲಾಪವನ್ನು ವಿಶ್ವ ಮಹಿಳಾ ದಿನದ ಪ್ರಸ್ತಾಪ ಮಾಡಿ ಆರಂಭಿಸಿದರು. "ಮಹಿಳಾ ದಿನವು ಮಹಿಳೆಯರ ಅದಮ್ಯ ಚೇತನ, ದೃಢ ನಿಶ್ಚಯ ಮತ್ತು ಸಾಧನೆಗಳನ್ನು ಗೌರವಿಸುವ ದಿನವಾಗಿದೆ" ಎಂದರು.

"ಸಾಂಸ್ಕೃತಿಕ, ಸಾಮಾಜಿಕ ಮತ್ತು ಆರ್ಥಿಕ ಅಡಚಣೆಗಳು ಮಹಿಳೆಯರು ನಿರ್ಧಾರಕ ಸ್ಥಾನಗಳನ್ನು ಅಲಂಕರಿಸಲು ಅಡ್ಡಿಯಾಗಿವೆ" ಎಂದ ಎನ್​ಸಿಪಿ ಸಂಸದೆ ಡಾ. ಫೌಜಿಯಾ ಖಾನ್, ಶೇ.6 ರಷ್ಟು ಮಹಿಳೆಯರು ಮಾತ್ರ ನಾಯಕತ್ವದ ಪಾತ್ರಗಳಲ್ಲಿದ್ದಾರೆ ಎಂದು ಉಲ್ಲೇಖಿಸಿದರು. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ತರುವುದರೊಂದಿಗೆ ಈ ನಿಟ್ಟಿನಲ್ಲಿ ಬದಲಾವಣೆಯ ಆರಂಭ ಮಾಡಬಹುದು ಎಂದರು.

ಶಿವಸೇನೆಯ ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ಸಂಸತ್ತಿನಲ್ಲಿ ಮಹಿಳೆಯರಿಗೆ ಶೇ.33 ರ ಮೀಸಲಾತಿಯು 24 ವರ್ಷಗಳ ಹಿಂದಿನ ಪ್ರಸ್ತಾವನೆಯಾಗಿದ್ದು, ಈಗಿನ ಕಾಲಮಾನಕ್ಕೆ ತಕ್ಕ ಹಾಗೆ ಶೇ. 50 ರಷ್ಟು ಮೀಸಲಾತಿ ಒದಗಿಸಬೇಕು ಎಂದರು. ಸಮಾಜದಲ್ಲಿ ಹಲವಾರು ಸವಾಲುಗಳನ್ನು ಎದುರಿಸುತ್ತಿರುವ ಮಹಿಳೆಯರ ರಾಜಕೀಯ ಸಬಲೀಕರಣಕ್ಕಾಗಿ ಮೀಸಲಾತಿಯ ಕ್ರಮ ಅಗತ್ಯವಾಗಿದೆ ಎಂದು ಇನ್ನೂ ಕೆಲವು ಸದಸ್ಯರು ಅಭಿಪ್ರಾಯಪಟ್ಟರು.

ಈ ನಡುವೆ ಬಿಜೆಪಿಯ ಸೋನಲ್ ಮಾನ್​ಸಿಂಗ್, ಸಮಾನತೆಯ ಮಾತಾಡುತ್ತಿರುವುದರಿಂದ, ನಾವು ಮಹಿಳಾ ದಿನವನ್ನು ಆಚರಿಸುವಂತೆಯೇ ಅಂತರರಾಷ್ಟ್ರೀಯ ಪುರುಷರ ದಿನವನ್ನು ಕೂಡ ಆಚರಿಸಬೇಕು ಎಂದರು. ಕಾಂಗ್ರೆಸ್ ಸಂಸದೆ ಛಾಯಾ ವರ್ಮ, "ಸರ್ಕಾರವು ಬೇಟಿ ಬಚಾವೋ, ಬೇಟಿ ಪಡಾವೋ ಘೋಷಣೆಯನ್ನು ಹೇಳುತ್ತಿದೆ. ಆದರೆ ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಅಪರಾಧ ದರವು ಬೇರೆಯೇ ಕತೆ ಹೇಳುತ್ತದೆ" ಎಂದರು. (ಏಜೆನ್ಸೀಸ್)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ