ಸರ್ಕಾರದ ಇಲಾಖೆಗಳಲ್ಲಿ ಜನರಿಗೆ ಹೆಚ್ಚು ನಿಕಟವಾಗಿ ಕಾರ್ಯನಿರ್ವಹಿಸುವ ಮತ್ತು ಮಹತ್ವದ ಸೇವೆಗಳನ್ನು ಒದಗಿಸುವ ಜವಾಬ್ದಾರಿ ಹೊಂದಿರುವಂಥವುಗಳಲ್ಲಿ ಕಂದಾಯ ಇಲಾಖೆ ಸಹ ಒಂದು. ಭೂಮಿ, ಕಂದಾಯದ ವಿಷಯಗಳು ಇದರ ವ್ಯಾಪ್ತಿಗೆ ಬರುವುದರಿಂದ ಸಹಜವಾಗಿಯೇ ಜನರು ಹೆಚ್ಚು ಒಡನಾಟ ಹೊಂದಿರುತ್ತಾರೆ. ಜನರ ಮನೆಬಾಗಿಲಿಗೆ ಪ್ರಮುಖ ದಾಖಲೆಗಳನ್ನು ತಲುಪಿಸುವುದು, ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮದಡಿಯಲ್ಲಿ ಗ್ರಾಮವಾಸ್ತವ್ಯ ಇತ್ಯಾದಿ ಉಪಕ್ರಮಗಳ ಮೂಲಕ ಕಂದಾಯ ಇಲಾಖೆ ಜನರಲ್ಲಿ ಹೊಸ ಭರವಸೆ ಮೂಡಿಸಿರುವುದು ಸುಳ್ಳಲ್ಲ. ಇದಕ್ಕೆ ಪೂರಕವಾಗಿ, ಸ್ಥಿರಾಸ್ತಿ ಮಾರ್ಗಸೂಚಿ ದರದಲ್ಲಿ ಶೇಕಡ 10 ರಿಯಾಯಿತಿ ಅವಧಿಯನ್ನು ಮತ್ತೆ ಮೂರು ತಿಂಗಳು ವಿಸ್ತರಿಸಲಾಗಿದೆ. ಅಂದರೆ, ಏಪ್ರಿಲ್ 25ರಿಂದ ಜುಲೈ 24ರವರೆಗೆ ಈ ಸವಲತ್ತು ಮುಂದುವರಿಯಲಿದೆ.
ಕರೊನಾ ಲಾಕ್ಡೌನ್ ಅವಧಿಯಲ್ಲಿ ಜನರ ಬಳಿ ಹಣ ಓಡಾಡುತ್ತಿದ್ದ ಪ್ರಮಾಣ ಕಡಿಮೆಯಾಗಿತ್ತು; ಇದರಿಂದ ಆಸ್ತಿ ಖರೀದಿ-ಮಾರಾಟ ಇತ್ಯಾದಿ ವ್ಯವಹಾರಗಳು ಕೂಡ ತಗ್ಗಿದ್ದವು. ಪರಿಣಾಮವಾಗಿ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂ. ನಷ್ಟ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ, ಸ್ಥಿರಾಸ್ತಿ ದರದಲ್ಲಿ ಶೇ.10 ರಿಯಾಯಿತಿ ನೀಡುವ ನಿರ್ಣಯಕ್ಕೆ ಬರಲಾಗಿತ್ತು. ಈ ಕ್ರಮದಿಂದ ಆಸ್ತಿ ಖರೀದಿ-ಮಾರಾಟ ವ್ಯವಹಾರದಲ್ಲಿ ಏರಿಕೆಯಾಗಿ, ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಹೆಚ್ಚುವರಿ 1 ಸಾವಿರ ರೂ. ಕೋಟಿ ರೂ. ರಾಜಸ್ವ ಸಂಗ್ರಹವಾಗಿತ್ತು. ಹೀಗಾಗಿ, ಈ ಸವಲತ್ತನ್ನು ಮುಂದುವರಿಸಲು ಸರ್ಕಾರ ನಿರ್ಧರಿಸಿದ್ದರೆ ಅದು ಸಹಜವೇ.
ಇದೆಲ್ಲ ಸರಿಯೇ. ಇದರ ಜತೆಗೆ, ಇಲಾಖೆಯ ಕಚೇರಿಗಳಲ್ಲಿ ಮೂಲಸೌಕರ್ಯಗಳನ್ನು ಒದಗಿಸಿ, ಸೇವೆಯ ಗುಣಮಟ್ಟವನ್ನು ಹೆಚ್ಚಿಸುವ ಕಡೆಗೂ ಸರ್ಕಾರ ಗಮನ ಕೊಡಬೇಕಾದ ಅಗತ್ಯವಿದೆ. ಈಗೇನೋ ಜನರ ಅನುಕೂಲಕ್ಕೆಂದು ಕಚೇರಿಗಳ ಸಮಯವನ್ನು ರಾತ್ರಿ 8ರವರೆಗೂ ವಿಸ್ತರಿಸಲಾಗಿದೆ. ಆದರೆ ಕೇವಲ ಸಮಯ ಹಿಗ್ಗಿಸಿದರೆ ಸಾಕಾಗುವುದಿಲ್ಲ. ಕಂದಾಯ ಸಚಿವಾಲಯ ವ್ಯಾಪ್ತಿಯಲ್ಲೇ ಬರುವ, ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಉಪನೋಂದಣಾಧಿಕಾರಿ ಕಚೇರಿಗಳು ಅನೇಕ ಮೂಲಭೂತ ಸಮಸ್ಯೆಗಳನ್ನು ಎದುರಿಸುತ್ತಿವೆ.
ಮಹಾನಗರಗಳಲ್ಲಿರುವ ಕಚೇರಿಗಳೇ ಹೈಟೆಕ್ ಸ್ಪರ್ಶ ಕಾಣದಿರುವುದು; ಸರ್ವರ್ ಸಮಸ್ಯೆ; ಕಂಪ್ಯೂಟರ್ ಅವ್ಯವಸ್ಥೆ; ಆನ್ಲೈನ್ ಸೇವೆಯ ಮಾಹಿತಿ ಒದಗಿಸಲು ಸಹಾಯವಾಣಿ ಇಲ್ಲದಿರುವುದು; ವಿವಿಧ ಆದೇಶಕ್ಕೆ ಸಂಬಂಧಿಸಿ ಸೂಚನಾ ಫಲಕ ಇಲ್ಲದಿರುವುದು; ಹಳೆಯ ಕಡತಗಳನ್ನು ಡಿಜಿಟಲ್ ರೂಪಕ್ಕೆ ಬದಲಿಸದಿರುವುದು...
ಹೀಗೆ ಸಮಸ್ಯೆಗಳ ಸರಮಾಲೆಯೇ ಇಲ್ಲಿದೆ. ಕೆಲ ಕಚೇರಿಗಳಲ್ಲಿ ಕುರ್ಚಿ, ಕುಡಿಯುವ ನೀರಿನ ವ್ಯವಸ್ಥೆಯೂ ಸರಿಯಾಗಿ ಇಲ್ಲ. ಇದರಿಂದಾಗಿ ಜನರಿಗೆ ಸಕಾಲಕ್ಕೆ ಸರಿಯಾಗಿ ಸೇವೆ ನೀಡಲು ಅಡಚಣೆ ಆಗುತ್ತಿದೆ. ರಾಜ್ಯದ 252 ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ 2007ರಲ್ಲಿ ಹೊರಗುತ್ತಿಗೆ ಆಧಾರದ ಮೇಲೆ 970 ಡೇಟಾ ಎಂಟ್ರಿ ಆಪರೇಟರ್ಗಳನ್ನು ನೇಮಿಸಲಾಗಿದೆ. ಈಗ ಸಬ್ ರಿಜಿಸ್ಟ್ರಾರ್ ಕಚೇರಿಗಳ ಕಾರ್ಯಭಾರ ಹೆಚ್ಚಿದ್ದರೂ ಡೇಟಾ ಎಂಟ್ರಿ ಆಪರೇಟರ್ಗಳ ಸಂಖ್ಯೆ ಹೆಚ್ಚಿಸಿಲ್ಲ. ಇದರಿಂದ ತ್ವರಿತ ಸೇವೆ ನೀಡಲು ತೊಂದರೆಯಾಗುತ್ತಿದೆ ಎಂಬ ಅಧಿಕಾರಿಗಳ ಅಳಲನ್ನು ಸರ್ಕಾರ ಕಿವಿಮೇಲೆ ಹಾಕಿಕೊಳ್ಳಬೇಕು. ಇಲಾಖೆಯಲ್ಲಿ ಹೊಸ ಯೋಜನೆ ಘೋಷಿಸುವ ಜತೆಗೆ, ಕಚೇರಿಗಳನ್ನು ಜನಸ್ನೇಹಿಯಾಗಿ ಮಾರ್ಪಡಿಸುವುದು ಸಹ ಮುಖ್ಯ.