ನ್ಯೂಸ್

ಪ್ರಜಾಪ್ರಭುತ್ವ ಪರ್ವಕ್ಕೆ ಬಲ

| ಸತೀಶ್ ಕಂದಗಲ್​ಪುರ ಬೆಂಗಳೂರು

ಭಾರತ ಪ್ರಜಾಪ್ರಭುತ್ವ ರಾಷ್ಟ್ರ. ಕ್ಷೇತ್ರದ ಅಭಿವೃದ್ಧಿಗೆ ಕಾಯಾ, ವಾಚಾ, ಮನಸಾ ಸೇವೆ ಸಲ್ಲಿಸುವ ವ್ಯಕ್ತಿಯನ್ನು ತಮ್ಮ ಪ್ರತಿನಿಧಿಯನ್ನಾಗಿ ಆಯ್ಕೆ ಮಾಡುವ ಹಕ್ಕು ಪ್ರತಿ ಮತದಾರನಿಗೂ ಇದೆ. ಹೀಗಾಗಿ, 18 ವರ್ಷ ಮೇಲ್ಪಟ್ಟ ಎಲ್ಲರೂ ಮತದಾನಕ್ಕೆ ನೋಂದಣಿ ಮಾಡಿಸಿ ಜವಾಬ್ದಾರಿಯುತ ಜನಪ್ರತಿನಿಧಿ ಆಯ್ಕೆಯಲ್ಲಿ ಪಾಲ್ಗೊಳ್ಳಬೇಕು. ಇಂಥ ಮತದಾನದ ಮಹತ್ವ ಕುರಿತು ಅರಿವು ಮೂಡಿಸಲು ಮತ್ತು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೇಂದ್ರ ಚುನಾವಣಾ ಆಯೋಗ ಕಳೆದ 11 ವರ್ಷಗಳಿಂದ ಜನವರಿ 25ರಂದು ರಾಷ್ಟ್ರೀಯ ಮತದಾರರ ದಿನ ಆಚರಣೆ ಮಾಡುತ್ತಿದೆ.

ರಾಜ್ಯದಲ್ಲಿ 5.10 ಕೋಟಿ ಮತದಾರರು: ಕರ್ನಾಟಕ ಚುನಾವಣಾ ಮಾಹಿತಿ ವ್ಯವಸ್ಥೆ (ಕೆಇಐಎಸ್) ಪ್ರಕಾರ ನಮ್ಮ ರಾಜ್ಯದಲ್ಲಿ 6.82 ಕೋಟಿ ಜನಸಂಖ್ಯೆಯಿದ್ದು, ಈ ಪೈಕಿ 5.10 ಕೋಟಿ (ಶೇಕಡ 75) ಮತದಾರರಿದ್ದಾರೆ. ಇದರಲ್ಲಿ 2.58 ಕೋಟಿ ಪುರುಷ, 2.52 ಕೋಟಿ ಮಹಿಳೆಯರು ಹಾಗೂ 4,839 ತೃತೀಯ ಲಿಂಗಿ ಮತದಾರರಿದ್ದಾರೆ. ಈ ಪೈಕಿ ರಾಜ್ಯ ರಾಜಧಾನಿ ಬೆಂಗಳೂರು ವ್ಯಾಪ್ತಿಯ ಬೆಂಗಳೂರು ಉತ್ತರ, ದಕ್ಷಿಣ, ಕೇಂದ್ರ ವಿಭಾಗದ ಲೋಕಸಭಾ ಕ್ಷೇತ್ರಗಳಲ್ಲಿ 72 ಲಕ್ಷ ಮತದಾರರಿದ್ದಾರೆ. ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳು ಹಾಗೂ 224 ವಿಧಾನಸಭಾ ಕ್ಷೇತ್ರಗಳಿದ್ದು, ಮತದಾನ ಪ್ರಕ್ರಿಯೆ ನಡೆಯುವ 58,186 ಮತಗಟ್ಟೆಗಳಿವೆ.

ನಕಲಿ ಪೊ›ಫೈಲ್ ಬಗ್ಗೆ ದೂರು ವೇದಿಕೆ

ರಾಜ್ಯದಲ್ಲಿ ನಕಲಿ ಮತದಾರರನ್ನು ಪತ್ತೆ ಮಾಡಲು ರಾಜ್ಯ ಚುನಾವಣಾ ಆಯೋಗ ವೆಬ್​ಸೈಟ್, ಬ್ಲಾಗ್​ಗಳು, ಸಾಮಾಜಿಕ ಜಾಲತಾಣಗಳಾದ ಫೇಸ್​ಬುಕ್, ಯ್ಯೂಟೂಬ್ ಹಾಗೂ ಟ್ವಿಟರ್ ಮೂಲಕ ಜಾಗೃತಿ ಮೂಡಿಸುತ್ತಿದೆ. ನಕಲಿ ಪ್ರೊಫೈಲ್​ಗಳು ಕಂಡುಬಂದಲ್ಲಿ ‘ನ್ಯಾಷನಲ್ ಗ್ರೀವಿಯನ್ಸ್ ಸರ್ವಿಸಸ್’ ವೆಬ್​ಸೈಟ್ ಮೂಲಕ ದೂರು ನೀಡಬಹುದು. ದೂರುಗಳನ್ನು ಟ್ರಾ್ಯಕ್ ಮಾಡುವ, ಇ-ಮೇಲ್ ಮೂಲಕ ಸಲಹೆ ಸೂಚನೆ ನೀಡಬಹದು. ಓಟರ್ಸ್ ಹೆಲ್ಪ್​ಲೈನ್ ಆಪ್ ಮೂಲಕ ಅಥವಾ ಟೋಲ್ ಫ್ರೀ ಸಂಖ್ಯೆ 1950 ಮೂಲಕವೂ ದೂರು ದಾಖಲಿಸಬಹುದು.

ಮೊಬೈಲ್​ನಲ್ಲಿ ಮಾಹಿತಿ

ಚುನಾವಣಾ ಆಯೋಗ ತಾಂತ್ರಿಕ ಸೌಲಭ್ಯವನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿದೆ. ತಮ್ಮ ಮತಗಟ್ಟೆ ಎಲ್ಲಿದೆ ಎಂಬ ಬಗ್ಗೆ ತಿಳಿದುಕೊಳ್ಳಲು ಎಲ್ಲ ಮತದಾರರಿಗೆ ಮೊಬೈಲ್ ಮೂಲಕ ಸಂದೇಶ ಪಡೆಯುವ ವ್ಯವಸ್ಥೆ ಮಾಡಲಾಗಿತ್ತು. ಈಗ ಅದನ್ನು ಸುಧಾರಣೆ ಮಾಡಿ, ರಾಜ್ಯ ಚುನಾವಣಾ ಆಯೋಗದ ವೆಬ್​ಸೈಟ್​ನಲ್ಲಿ ಮತಗಟ್ಟೆ ಮಾಹಿತಿ, ಚುನಾವಣಾ ಅಧಿಕಾರಿಗಳ ಮಾಹಿತಿ ಪಟ್ಟಿ, ಫೀಡ್​ಬ್ಯಾಕ್ ನೀಡುವುದು, ಪ್ರಜಾಪ್ರಭುತ್ವ ಯೋಧರಾಗಿ (ಡೆಮಾಕ್ರಸಿ ವಾರಿಯರ್ಸ್) ನೋಂದಣಿ, ವ್ಹೀಲ್​ಚೇರ್ ಬುಕಿಂಗ್ ಹಾಗೂ ಪಿಕಪ್ ಸೇವೆ ಸೌಲಭ್ಯ ಒದಗಿಸಲಾಗುತ್ತಿದೆ. ಮತದಾರರು ತಮ್ಮ 10 ಅಂಕಿಯ ಎಪಿಕ್ ನಂಬರ್ ನಮೂದಿಸಿ ಈ ಸೇವೆ ಪಡೆದುಕೊಳ್ಳಬಹುದು.

ಇ-ಎಪಿಕ್ ಡೌನ್​ಲೋಡ್

ಕೇಂದ್ರ ಚುನಾವಣಾ ಆಯೋಗ ಜನವರಿ 25ರ ಮತದಾರರ ದಿನದ ಅಂಗವಾಗಿ ಇ-ಇಪಿಕ್ (ಡಿಜಿಟಲ್ ಗುರುತಿನ ಚೀಟಿ) ಕಾರ್ಡ್ ಡೌನ್​ಲೋಡ್ ಸೇವೆಗೆ ಚಾಲನೆ ನೀಡುತ್ತಿದೆ. ಇ-ಎಪಿಕ್ ಪಿಡಿಎಫ್ ಆವೃತ್ತಿಯಾಗಿದ್ದು, ಭಾವಚಿತ್ರ ಮತ್ತು ಸುರಕ್ಷಿತ ಕ್ಯೂಆರ್ ಕೋಡ್, ಕ್ರಮಸಂಖ್ಯೆಗಳನ್ನು ಹೊಂದಿರುತ್ತದೆ. ಮೊದಲ ಹಂತದಲ್ಲಿ (ಜ.25 ರಿಂದ 31) ಮತದಾರರ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಬೇಕು. ಹೀಗೆ ನಮೂನೆ-6ರಲ್ಲಿ ಮೊಬೈಲ್ ಸಂಖ್ಯೆ ನೋಂದಾಯಿಸಿರುವ ಹೊಸ ಮತದಾರರು, ತಮ್ಮ ಮೊಬೈಲ್​ಗೆ ಬರುವ ಒಟಿಪಿ ದೃಢೀಕರಿಸಿ ಇ-ಎಪಿಕ್ ಡೌನ್​ಲೋಡ್ ಮಾಡಿಕೊಳ್ಳಬಹುದು. ಫೆಬ್ರವರಿ 1ರಿಂದ ಎಲ್ಲ ಸಾಮಾನ್ಯ ಮತದಾರರು ಮೊಬೈಲ್ ಸಂಖ್ಯೆ ನಮೂದಿಸಿ ಇ-ಎಪಿಕ್ ಪಡೆದುಕೊಳ್ಳಬಹುದು.

ಜಾಗೃತಿ ಮತ್ತು ಪ್ರೋತ್ಸಾಹ

18 ವರ್ಷ ತುಂಬಿದ ಹೊಸ ಮತದಾರರಿಗೆ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಕೊಳ್ಳಲು, ಮತದಾನದ ಬಗ್ಗೆ ಅರಿವು ಮೂಡಿಸಲು ಶಾಲೆ, ಕಾಲೇಜುಗಳಲ್ಲಿ ರಂಗೋಲಿ, ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗುತ್ತಿದೆ. ಜತೆಗೆ ಬೀದಿನಾಟಕ, ಜಾಥಾ, ವಿಚಾರ ಸಂಕಿರಣದಂಥ ಕಾರ್ಯಕ್ರಮಗಳೂ ನಡೆಯುತ್ತವೆ.

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಹೇಗೆ?

  1. ರಾಜ್ಯ ಚುನಾವಣಾ ಆಯೋಗ ನಿಗದಿ ಮಾಡಿದ ಸರ್ಕಾರಿ ಕಚೇರಿಗಳಲ್ಲಿ ನಿಗದಿತ ದಾಖಲೆ ನೀಡಿ ಹೆಸರು ಸೇರಿಸಬಹುದು.

2. ನಗರ ಮಟ್ಟದಲ್ಲಿ ವಾರ್ಡ್ ಕಚೇರಿ, ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬಹುದು.

3. ತಹಸೀಲ್ದಾರ್, ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಮತ್ತು ತಾಲೂಕು ಮಟ್ಟದ ಮತದಾರರ ನೋಂದಣಾಧಿಕಾರಿಗಳ ಕಚೇರಿ, ಮತದಾರರ ಸಲಹಾ ಕೇಂದ್ರ, ಸಹಾಯಕ ಮತದಾರರ ನೋಂದಣಾಧಿಕಾರಿ, ಸಕಾಲ ಕೇಂದ್ರ, ನಾಗರಿಕ ಕೇಂದ್ರ ಹಾಗೂ ಬೆಂಗಳೂರು ಒನ್​ಗಳಲ್ಲಿ ಅರ್ಜಿ ಸಲ್ಲಿಸಬಹುದು.

4. ಚುನಾವಣಾ ಆಯೋಗದ ವೆಬ್​ಸೈಟ್ ceokarnataka.kar.in ನಲ್ಲಿ ಕೂಡ ಅರ್ಜಿ ಸಲ್ಲಿಸಬಹುದು.