ತರೀಕೆರೆ ಪುರಸಭೆ ಸಭಾಂಗಣದಲ್ಲಿ ನಡೆದ ವಿಶೇಷ ಸಭೆಯಲ್ಲಿ ಅಧ್ಯಕ್ಷ ವಸಂತ್‌ಕುಮಾರ್, ಉಪಾಧ್ಯಕ್ಷೆ ಶಮೀಮ್ ಭಾನು, ಮುಖ್ಯಾಧಿಕಾರಿ ತಾಹೀರಾ ತಸ್ನೀಮ್ ಇದ್ದರು. 
ನ್ಯೂಸ್

ತರೀಕೆರೆಯಲ್ಲಿ ಬೀದಿ ನಾಯಿಗಳಿಗಿಲ್ಲ ಕಡಿವಾಣ

ತರೀಕೆರೆ: ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದರೂ ಅವುಗಳ ನಿಯಂತ್ರಣಕ್ಕೆ ಪುರಸಭೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸದಸ್ಯೆ ಆಶಾ ದೂರಿದರು.
ಪುರಸಭೆ ಸಭಾಂಗಣದಲ್ಲಿ ವಸಂತ್‌ಕುಮಾರ್ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ವಿಶೇಷ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, 21ನೇ ವಾರ್ಡ್‌ನಲ್ಲಿ ಬೀದಿ ನಾಯಿಗಳ ಹಾವಳಿಯಿಂದ ಮಕ್ಕಳು ಮನೆಯಿಂದ ಹೊರ ಬಾರದ ಸ್ಥಿತಿ ನಿರ್ಮಾಣವಾಗಿದೆ. ಪುರಸಭೆ ಈಗಲಾದರೂ ನಾಯಿ ಹಾವಳಿಗೆ ಕಡಿವಾಣ ಹಾಕಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಸದಸ್ಯ ಟಿ.ಎಂ.ಭೋಜರಾಜ್ ಮಾತನಾಡಿ, ಪುರಸಭೆಯಲ್ಲಿ ಆಡಳಿತ ನಡೆಸುತ್ತಿರುವ ಪಕ್ಷ ವಿವಿಧ ವಾರ್ಡ್‌ಗಳ ಅಭಿವೃದ್ಧಿಯಲ್ಲಿ ತಾರತಮ್ಯ ಮಾಡುತ್ತಿದೆ. ಬೀದಿ ನಾಯಿ ಹಾವಳಿ ನಿಯಂತ್ರಣವಿರಲಿ, ಒಂದು ಬೀದಿ ದೀಪ ಅಳವಡಿಸಿಕೊಡುವ ಯೋಗ್ಯತೆ ಇಲ್ಲ. ಪಟ್ಟಣದ ಜನತೆಗೆ ಆಡಳಿತದ ದುರಾವಸ್ತೆ ಗೊತ್ತಾಗ ಬೇಕಾದರೆ 23 ವಾರ್ಡ್‌ಗಳ ಅಭಿವೃದ್ಧಿಗೆ ಎಷ್ಟೆಷ್ಟು ಅನುದಾನ ಬಂದಿದೆ ಎಂಬುದರ ಶ್ವೇತಪತ್ರ ಹೊರಡಿಸಬೇಕು ಎಂದು ಸವಾಲು ಹಾಕಿದರು.
ಸದಸ್ಯ ಟಿ.ಜಿ.ಲೋಕೇಶ್ ಮಾತನಾಡಿ, ಪುರಸಭೆ ವಿವಿಧ ವಾರ್ಡ್‌ಗಳ ಅಭ್ಯುದಯಕ್ಕೆ ಅನುದಾನ ಅಳವಡಿಸಿದೆ ಹೊರತು ಯಾರೊಬ್ಬರ ಮನೆ ಅಭಿವೃದ್ಧಿ ಸಲುವಾಗಿ ಅನುದಾನ ಬಿಡುಗಡೆ ಮಾಡಿಲ್ಲ. ಅಧಿಕಾರಿಗಳು ಎಲ್ಲ ಸದಸ್ಯರ ವಾರ್ಡ್‌ಗಳಿಗೂ ತಾರತಮ್ಯ ಮಾಡದೆ ಅನುದಾನ ಅಳವಡಿಸಿ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಮನವರಿಕೆ ಮಾಡಿಕೊಟ್ಟರು.
ಸದಸ್ಯೆ ಗೀತಾ ಮಾತನಾಡಿ, ಒಂಭತ್ತನೇ ವಾರ್ಡ್‌ನಲ್ಲಿ ಕೊಳಚೆ ನೀರು ಮನೆಯೊಂದರ ಸಂಪ್‌ಗೆ ಸೇರುತ್ತಿದೆ. ಈ ಬಗ್ಗೆ ಪುರಸಭೆ ಗಮನಕ್ಕೆ ತಂದರೂ ಅವ್ಯವಸ್ಥೆ ಸರಿಪಡಿಸುತ್ತಿಲ್ಲ ಎಂದು ದೂರಿದರು. ಸದಸ್ಯ ಪರಮೇಶ್ ಮಾತನಾಡಿ, ನಮ್ಮ ವಾರ್ಡ್‌ನಲ್ಲಿ ಉದ್ಯಾನವನ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದ್ದು, ಶೀಘ್ರದಲ್ಲಿ ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸಿದರು. ಮುಖ್ಯಾಧಿಕಾರಿ ತಾಹೀರಾ ತಸ್ನೀಮ್ ಪ್ರತಿಕ್ರಿಯಿಸಿ ಪಾರ್ಕ್ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಉತ್ತರಿಸಿದರು.
ಉಪಾಧ್ಯಕ್ಷೆ ಶಮೀಮ್ ಭಾನು, ಸದಸ್ಯರಾದ ಎಂ.ಗಿರಿಜಾ, ವಸಂತ, ರಿಹಾನ ಪರ್ವಿನ್, ಟಿ.ಎಂ.ರಂಗನಾಥ್, ಚಂದ್ರಶೇಖರ್, ಆರ್.ಕುಮಾರಪ್ಪ, ಅನಿಲ್ ಮತ್ತಿತರರಿದ್ದರು.