ನವದೆಹಲಿ: ಭಾರತದ ಸೇನೆಯ ಕಣ್ಗಾವಲು ವೃದ್ಧಿಗೆ ಪೂರಕವಾಗಿ ಅಭಿವೃದ್ಧಿಪಡಿಸಲಾಗಿರುವ ಸ್ಟ್ರಾಟೊಸ್ಪಿಯರಿಕ್ ಏರ್ಷಿಪ್ ಪ್ಲ್ಯಾಟ್ಫಾರ್ಮ್ನ ಚೊಚ್ಚಲ ಪರೀಕ್ಷಾರ್ಥ ಹಾರಾಟ ಶನಿವಾರ ಯಶಸ್ವಿಯಾಗಿದೆ. ಮಧ್ಯಪ್ರದೇಶದ ಶಿಯೊಪುರದಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಈ ಪರೀಕ್ಷಾರ್ಥ ಹಾರಾಟ ನಡೆಸಿದೆ. ನಿಗದಿತ ಪೇಲೋಡ್ನೊಂದಿಗೆ 17 ಕಿ.ಮೀ. ಎತ್ತರದಲ್ಲಿ ಒಟ್ಟು 62 ನಿಮಿಷಗಳ ಕಾಲ ಈ ಹಾರಾಟ ನಡೆಯಿತು. ಭವಿಷ್ಯದಲ್ಲಿನ ಅತಿ ಎತ್ತರದ ಏರ್ಷಿಫ್ ಫ್ಲೈಟ್ಗಳ ಫಿಡೆಲಿಟಿ ಸಿಮ್ಯುಲೇಷನ್ ಮಾಡೆಲ್ಗಳ ತಯಾರಿಗೆ ಈ ಹಾರಾಟದಿಂದ ಲಭಿಸಿದ ಡೇಟಾ ಬಳಸಿಕೊಳ್ಳಲಾಗುವುದು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಸ್ಟ್ರಾಟೊಸ್ಪಿಯರಿಕ್ ಏರ್ಷಿಪ್ ಪ್ಲ್ಯಾಟ್ಫಾರ್ಮ್ನ ಭಾರತದ ಭೂ ವೀಕ್ಷಣೆ, ಗುಪ್ತಚರ, ಕಣ್ಗಾವಲು ಹಾಗೂ ವಿಚಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುವ ವ್ಯವಸ್ಥೆ ಆಗಿದೆ. ಇಂಥದ್ದೊಂದು ಸಂಕೀರ್ಣ ವ್ಯವಸ್ಥೆ ಅಭಿವೃದ್ಧಿಪಡಿಸಿಕೊಂಡಿರುವ ಜಗತ್ತಿನ ಕೆಲವೇ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ. ಅಲ್ಲದೆ, ಪಹಲ್ಗಾಮ್ ದಾಳಿಯಿಂದಾಗಿ ಉಂಟಾಗಿರುವ ಭಾರತ-ಪಾಕಿಸ್ತಾನ ಸಂಘರ್ಷದ ಬೆನ್ನಿಗೇ ಇಂಥದ್ದೊಂದು ಪರೀಕ್ಷಾರ್ಥ ಹಾರಾಟ ನಡೆದಿರುವುದು ಗಮನ ಸೆಳೆದಿದೆ.
‘ವಾಯುಮಂಡಲದ ಎತ್ತರದಲ್ಲಿ ಬಹುಕಾಲ ವಾಯುಗಾಮಿಯಾಗಿ ಉಳಿಯಬಲ್ಲ ಗಾಳಿಗಿಂತಲೂ ಹಗುರವಾದ ಎತ್ತರದ ವೇದಿಕೆಯ ವ್ಯವಸ್ಥೆ ಕಂಡುಕೊಳ್ಳುವಲ್ಲಿ ಇದು ಮಹತ್ವದ ಮೈಲಿಗಲ್ಲು’ ಎಂದು ಡಿಆರ್ಡಿಒ ಅಧ್ಯಕ್ಷ ಸಮೀರ್ ವಿ. ಕಾಮತ್ ಹೇಳಿದ್ದಾರೆ. ಈ ಪರೀಕ್ಷಾರ್ಥ ಹಾರಾಟದ ಯಶಸ್ಸಿನೊಂದಿಗೆ ಇಂಥ ವ್ಯವಸ್ಥೆ ಹೊಂದಿರುವ ಜಗತ್ತಿನ ಕೆಲವೇ ರಾಷ್ಟ್ರಗಳ ಪೈಕಿ ಭಾರತವೂ ಒಂದಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿ, ಡಿಆರ್ಡಿಒಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ. ಆಗ್ರಾ ಮೂಲದ ಏರಿಯಲ್ ಡೆಲಿವರಿ ರಿಸರ್ಚ್ ಆಂಡ್ ಡೆವಲಪ್ವೆುಂಟ್ ಎಸ್ಟ್ಯಾಬ್ಲಿಷ್ ವೆುಂಟ್ ಈ ಏರ್ಷಿಪ್ ಪ್ಲಾ್ಯಟ್ಫಾಮ್ರ್ ಅಭಿವೃದ್ಧಿಪಡಿಸಿದೆ.