ಲಖನೌ: ಸಾವಿನ ನಂತರ ಮತ್ತೆ ಬದುಕುಳಿಯುವುದು ಸಾಧ್ಯವೇ? ಈ ಪ್ರಶ್ನೆ ಕೇಳಿದರೆ ಖಂಡಿತ ಸಾಧ್ಯವಿಲ್ಲ ಎಂಬ ಉತ್ತರ ಬರುತ್ತದೆ. ಆದರೆ, ವೃದ್ಧೆಯೊಬ್ಬಳು ಮತ್ತೆ ಬದುಕುಳಿಯುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾಳೆ. ವೃದ್ಧೆಯ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಸ್ಮಶಾನಕ್ಕೆ ಕೊಂಡೊಯ್ಯಲಾಗಿತ್ತು. ಇನ್ನೇನು ಅಂತ್ಯಕ್ರಿಯೆ ನೆರವೇರಿಸಬೇಕು ಅಷ್ಟರಲ್ಲಿ ವೃದ್ಧೆ ಮತ್ತೆ ಕಣ್ಣು ತೆರೆದ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್ನಲ್ಲಿ ನಡೆದಿದೆ.
ವಿವರಣೆಗೆ ಬರುವುದಾದರೆ 81 ವರ್ಷದ ಹರಿಭೇಜಿ ಕಳೆದ ತಿಂಗಳು 23ರಂದು ತೀವ್ರ ಅಸ್ವಸ್ಥಗೊಂಡಿದ್ದಳು. ಆಕೆಯ ಕುಟುಂಬಸ್ಥರು ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧೆಯ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಖಚಿತಪಡಿಸಿದರು. ನಂತರ ಕುಟುಂಬಸ್ಥರು ವೃದ್ಧೆಯ ಪಾರ್ಥಿವ ಶರೀರವನ್ನು ಮನೆಗೆ ಕೊಂಡೊಯ್ದು ಅಂತಿಮ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಿದರು. ಸಂಬಂಧಿಕರೆಲ್ಲ ವೃದ್ಧೆಯ ಅಂತಿಮ ದರ್ಶನ ಪಡೆಯಲು ಬಂದರು.
ಕುಟುಂಬಸ್ಥರು ಮನೆಯ ಬಳಿ ಸಾಂಪ್ರದಾಯಿಕ ವಿಧಿವಿಧಾನಗಳನ್ನು ನೆರವೇರಿಸಿ ಮೃತದೇಹವನ್ನು ಅಂತಿಮ ಸಂಸ್ಕಾರಕ್ಕಾಗಿ ಸ್ಮಶಾನಕ್ಕೆ ಕೊಂಡೊಯ್ದರು. ನಂತರ, ಆಕೆಯ ಮೃತ ದೇಹವನ್ನು ಶವಸಂಸ್ಕಾರಕ್ಕಾಗಿ ಸ್ಥಳಾಂತರಿಸುತ್ತಿದ್ದಾಗ, ಇದ್ದಕ್ಕಿದ್ದಂತೆ ವೃದ್ಧೆ ಕಣ್ಣು ತೆರೆದಿದ್ದಾಳೆ. ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಕುಟುಂಬಸ್ಥರು ಹಾಗೂ ಸಂಬಂಧಿಕರು ಒಂದು ಕ್ಷಣ ಗಾಬರಿಗೊಂಡರು.
ಸ್ವಲ್ಪ ಸಮಯದ ಬಳಿಕ ವೃದ್ಧೆಯನ್ನು ಮನೆಗೆ ಕರೆದೊಯ್ಯಲಾಯಿತು. ಸಾಯಬೇಕಾದವಳು ಮತ್ತೆ ಬದುಕಿದ ಖುಷಿ ಎಲ್ಲರ ಮುಖದಲ್ಲಿತ್ತು. ಆದರೆ, ಆ ಖುಷಿ ಹೆಚ್ಚು ದಿನ ಉಳಿಯಲಿಲ್ಲ. ಏಕೆಂದರೆ, ಮರುದಿನವೇ ಆಕೆ ಅನಾರೋಗ್ಯದಿಂದ ಮೃತಪಟ್ಟಳು. ಬಳಿಕ ಮತ್ತೊಮ್ಮೆ ಸಂಬಂಧಿಕರಿಗೆ ವಿಷಯ ತಿಳಿಸಲಾಯಿತು. ನಂತರ ಎಲ್ಲರು ಸೇರಿ ಅಂತಿಮ ಸಂಸ್ಕಾರ ನೆರವೇರಿಸಿದರು. (ಏಜೆನ್ಸೀಸ್)