ನ್ಯೂಸ್

ಬೇಡಿಕೆ ನೀಗಿಸಲು ಸ್ಟೋರೇಜ್ ಯೋಜನೆ: ಜಾರ್ಜ್

ಅರವಿಂದ ಅಕ್ಲಾಪುರ

ಶಿವಮೊಗ್ಗ: ಮುಂದಿನ ಕೆಲ ದಶಕಗಳ ಗಮನದಲ್ಲಿಟ್ಟುಕೊಂಡು ಹಾಗೂ ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ವಿದ್ಯುತ್ ಬೇಡಿಕೆ ನೀಗಿಸುವ ಸಲುವಾಗಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕಾರ್ಯಗತಗೊಳಿಸಲು ಉದ್ದೇಶಿಸಲಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.

ಸೋಮವಾರ ಭದ್ರಾ ಜಲಾಶಯಕ್ಕೆ ಭೇಟಿ ನೀಡಿದ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿ, ಈ ಯೋಜನೆಗೆ ಪರಿಸರಾಸಕ್ತರು ಸೇರಿದಂತೆ ಅನೇಕರ ವಿರೋಧವಿರುವುದು ನನ್ನ ಗಮನಕ್ಕೂ ಬಂದಿದೆ. ಇಂಧನ ಇಲಾಖೆ ಹಿರಿಯ ಅಧಿಕಾರಿಗಳು ಅವರೆಲ್ಲರಿಗೂ ಯೋಜನೆ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿದರು.

ಈಗಾಗಲೇ ಸ್ಥಳೀಯರಿಂದ ಅಹವಾಲುಗಳನ್ನು ಸ್ವೀಕರಿಸಲಾಗಿದೆ. ಹೆಚ್ಚು ಪರಿಸರ ನಾಶವಾಗದಿರುವ ರೀತಿಯಲ್ಲಿ, ಯಾರಿಗೂ ತೊಂದರೆ ಆಗದಂತೆ ಯೋಜನೆ ಅನುಷ್ಠಾನ ಮಾಡಲಾಗುವುದು ಎಂದು ವಿವರಿಸಲಾಗಿದೆ. ಈ ಯೋಜನೆಗೆ ಬಳಸಿಕೊಳ್ಳಲಾಗುವ 120 ಎಕರೆ ಅರಣ್ಯದಲ್ಲಿ ಹಾದು ಹೋಗಲಿರುವ ಭೂಗತ ಮಾರ್ಗದ ಮೇಲ್ಮೆ ನಲ್ಲಿ ನೈಸರ್ಗಿಕವಾಗಿ ಕಾಡು ಬೆಳೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕೇಂದ್ರ ಪರಿಸರ ಇಲಾಖೆ ಸೇರಿದಂತೆ ಸರ್ಕಾರದ ಎಲ್ಲ ನಿಯಮಗಳನ್ನು ಪಾಲಿಸಿ ಯೋಜನೆ ಆರಂಭಿಸಲಾಗುವುದು. ಈ ಯೋಜನೆ ಪೂರ್ಣಗೊಂಡ ಬಳಿಕ ಹೆಚ್ಚುವರಿಯಾಗಿ ಎರಡು ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುವುದು ಎಂದರು.

ಯೋಜನೆಯಿಂದ ಸಕಾಲದಲ್ಲಿ ಬೇಡಿಕೆಗೆ ತಕ್ಕಷ್ಟು ವಿದ್ಯುತ್ ಪೂರೈಕೆ ಮಾಡಬಹುದು. ಕಡಿತಲೆಯಾಗುವ ಮರಗಳಿಗೆ ಪರ್ಯಾಯವಾಗಿ ಗಿಡಗಳನ್ನು ನೆಡಲಾಗುವುದು. ಯಾವುದೇ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗುವುದಿಲ್ಲ ಎಂದು ತಿಳಿಸಿದರು.