ನ್ಯೂಸ್

ಪಾಕ್ ದೌರ್ಜನ್ಯಕ್ಕೆ ಕಡಿವಾಣ

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರನ್ನು ಪಾಕ್ ಸರ್ಕಾರ ಹಲವಾರು ದಶಕಗಳಿಂದಲೂ ಎರಡನೇ ದರ್ಜೆ ನಾಗರಿಕರಂತೆ ನಡೆಸಿಕೊಳ್ಳುತ್ತಿದೆ. 1948ರಲ್ಲಿ ಆ ಭಾಗವನ್ನು ಪಾಕಿಸ್ತಾನ ವಶಪಡಿಸಿಕೊಂಡಾಗಿನಿಂದಲೂ ಅಲ್ಲಿನ ಜನ ತಾರತಮ್ಯ ಅನುಭವಿಸುತ್ತಲೇ ಇದ್ದಾರೆ. ಪಾಕ್ ಸರ್ಕಾರ ಅಲ್ಲಿನ ನೈಸರ್ಗಿಕ ಸಂಪನ್ಮೂಲಗಳ ಲಾಭವನ್ನು ಪಡೆಯುತ್ತಿದ್ದರೂ, ಪ್ರತಿಯಾಗಿ ಆ ಜನರಿಗೆ ಅಗತ್ಯ ಸ್ವಾತಂತ್ರ್ಯ ಸೌಲಭ್ಯಗಳನ್ನು ನೀಡುತ್ತಿಲ್ಲ. ಪರಿಣಾಮವಾಗಿ, ಆ ಪ್ರದೇಶ ಆರ್ಥಿಕವಾಗಿ ತೀರಾ ಹಿಂದುಳಿದಿದೆ. ಜನರು ತೀವ್ರ ಬಡತನ ಎದುರಿಸುತ್ತಿದ್ದಾರೆ. ಸಾಲದೆಂಬಂತೆ, ಪಾಕಿಸ್ತಾನ ಸರ್ಕಾರವೇ ಅವರಿಗೆ ಪಾಕ್ ವಿರೋಧಿಗಳು, ಇಸ್ಲಾಂ ವಿರೋಧಿಗಳು ಎಂಬ ಹಣೆಪಟ್ಟಿ ಕಟ್ಟಿ ಅವಮಾನಿಸುತ್ತಿದೆ. ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಲು ಅವಕಾಶ ನೀಡುವಂತೆ ಜನ ಒತ್ತಾಯಿಸುತ್ತಿದ್ದರೆ, ಪಾಕ್ ಸರ್ಕಾರ ಅವರ ಧ್ವನಿಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಬಹುಕಾಲದಿಂದ ಅಲ್ಲಿ ನಡೆಯುತ್ತಿದ್ದ ಪ್ರತಿಭಟನೆಗಳು ಈಗ ತೀವ್ರ ಸ್ವರೂಪ ಪಡೆದುಕೊಂಡಿವೆ. ಮೀರ್​ಪುರ್, ರಾವಲ್​ಕೋಟ್, ಸಮಾಹ್ನಿ, ಸೆಹನ್ಸಾ, ಹಟ್ಟಿಯಾನ್​ಬಾಲಾ ಮುಂತಾದ ಕಡೆ ಪ್ರತಿಭಟನೆ ನಡೆಯುತ್ತಿವೆ. ಪಾಕ್ ಭದ್ರತಾಪಡೆಗಳು ಎಕೆ-47 ರೈಫಲ್​ಗಳಿಂದ ಕೆಲವೊಮ್ಮೆ ಗಾಳಿಯಲ್ಲಿ, ಮತ್ತೆ ಕೆಲವು ಸಲ ಪ್ರತಿಭಟಕಾರರತ್ತ ಗುಂಡು ಹಾರಿಸುತ್ತಿರುವ ವಿಡಿಯೋಗಳು ವೈರಲ್ ಆಗಿವೆ.

ಪಾಕ್ ಆಕ್ರಮಿತ ಕಾಶ್ಮೀರದ ಜನ ಅನುಭವಿಸುತ್ತಿರುವ ದೌರ್ಜನ್ಯ- ಕಷ್ಟಕಾರ್ಪಣ್ಯ ಗಳನ್ನು ಇನ್ನು ಹೆಚ್ಚು ಕಾಲ ಯಾರೂ ನಿರ್ಲಕ್ಷಿಸಲು ಸಾಧ್ಯವಿಲ್ಲ. ಅಲ್ಲಿನ ಸಮಸ್ಯೆಗಳನ್ನು ಪರಿಹರಿಸಲು, ಮಾನವಹಕ್ಕುಗಳ ಉಲ್ಲಂಘನೆ ತಡೆಯಲು, ಜನರ ಜೀವನಮಟ್ಟ ಎತ್ತರಿಸಲು ಅಂತಾರಾಷ್ಟ್ರೀಯ ಸಮುದಾಯ ಮಧ್ಯಪ್ರವೇಶಿಸಲೇಬೇಕಾಗಿದೆ. ಪಾಕಿಸ್ತಾನದಿಂದ ಆಗುತ್ತಿರುವ ಅನ್ಯಾಯ ತಡೆಯಲು ಜಗತ್ತಿನ ಎಲ್ಲ ರಾಷ್ಟ್ರಗಳು ಧ್ವನಿ ಎತ್ತಬೇಕಾಗಿದೆ.

ಹಾಗೆ ನೋಡಿದರೆ, ಪಿಒಕೆಯಲ್ಲಿ ಮಾತ್ರವಲ್ಲ, ಪಾಕಿಸ್ತಾನದ ಪ್ರತಿಯೊಂದು ಭಾಗದಲ್ಲಿಯೂ ದೌರ್ಜನ್ಯ ಕಂಡುಬರುತ್ತಿದೆ. ಪಾಕಿಸ್ತಾನಕ್ಕೆ ಸೇನಾ ಆಡಳಿತದ ಬಹುದೀರ್ಘ ಇತಿಹಾಸವಿದೆ. ಅಲ್ಲಿ 1958ರಲ್ಲಿ ಮೊದಲ ಸೇನಾ ಕ್ಷಿಪ್ರ ಕ್ರಾಂತಿ ಸಂಭವಿಸಿತು. ಅಲ್ಲಿಂದೀಚೆ ಬಹಳಷ್ಟು ವರ್ಷ ಸೇನಾ ಸರ್ವಾಧಿಕಾರಿಗಳು ಆ ರಾಷ್ಟ್ರವನ್ನು ಆಳಿದ್ದಾರೆ. ಅದರಿಂದ ಅಲ್ಲಿ ಪ್ರಜಾಪ್ರಭುತ್ವ ಮತ್ತು ಮೂಲಭೂತ ಹಕ್ಕುಗಳು ನಾಶವಾಗಿವೆ. ಅಲ್ಲಿ ಸೇನೆಯ ಅಧಿಕಾರವನ್ನು ಕುಗ್ಗಿಸಿ, ಜವಾಬ್ದಾರಿಯುತ ಚುನಾಯಿತ ಸರ್ಕಾರದ ಪ್ರಾಬಲ್ಯವನ್ನು ಹೆಚ್ಚಿಸಬೇಕಾಗಿದೆ. ಅದಕ್ಕೆ ಅಂತಾರಾಷ್ಟ್ರೀಯ ಸಮುದಾಯದ ಹಸ್ತಕ್ಷೇಪ ಅಗತ್ಯ.

ಈ ಮಧ್ಯೆ, ಇತ್ತೀಚೆಗೆ ಪಿಒಕೆಯಲ್ಲಿನ ಪ್ರತಿಭಟನೆ ಸಂದರ್ಭದಲ್ಲಿ ಭಾರತದ ಧ್ವಜ ಕಾಣಿಸಿರುವುದು ಎಲ್ಲರ ಗಮನ ಸೆಳೆದಿದೆ. ಭವಿಷ್ಯದಲ್ಲಿ ಭಾರತದೊಂದಿಗೆ ಗುರುತಿಸಿಕೊಳ್ಳಲು ಪಿಒಕೆಯ ಜನರೇ ಮುಂದೆಬರುತ್ತಾರೆ ಎಂದು ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದ್ದು ಇದರಿಂದ ನಿಜವಾದಂತಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮತ್ತು ಭಾರತೀಯರ ಸ್ಥಿತಿಗತಿ ಈಗ ಹೇಗಿದೆ ಎಂಬುದನ್ನು ನೋಡಿ, ಪಾಕಿಸ್ತಾನದ ಜನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಜನ ತಾವೂ ಭಾರತದಲ್ಲಿ ಹುಟ್ಟಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅಂದುಕೊಂಡರೆ ಅದರಲ್ಲಿ ಆಶ್ಚರ್ಯವೇನೂ ಇಲ್ಲ.