ಕೋಲಾರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶಾಸಕ ಕೆ.ವೈ.ನಂಜೇಗೌಡ ಮಾತನಾಡಿದರು.
ಕೋಲಾರ: ಪ್ರಜ್ವಲ್ ರೇವಣ್ಣ ಲೈಂಗಿಕ ಪ್ರಕರಣದ ಪೆನ್ ಡ್ರೈವ್ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೂ ಯಾವುದೇ ಸಂಬಂಧವಿಲ್ಲ. ಈ ವಿಚಾರವಾಗಿ ವಿರೋಧ ಪಕ್ಷದವರು ರಾಜಕೀಯ ಮಾಡುವುದನ್ನು ಬಿಡಬೇಕು ಎಂದು ಶಾಸಕ ಕೆ.ವೈ.ನಂಜೇಗೌಡ ಕಿಡಿಕಾರಿದರು.
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಾಸನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರವು ತನಿಖೆಗೆ ಎಸ್ಐಟಿಗೆ ಒಪ್ಪಿಸಿತು. ಆಗ ಜೆಡಿಎಸ್-ಬಿಜೆಪಿಯವರು ಸ್ವಾಗತಿಸಿದರು. ಈಗ ದಿನಕ್ಕೊಂದು ಹೇಳಿಕೆ ನೀಡುವ ಮೂಲಕ ಪ್ರಕರಣದ ತನಿಖೆಯ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.
ರೇವಣ್ಣ ಕುಟುಂಬಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದು, ಆರ್.ಅಶೋಕ ಸಹ ತನಿಖೆಗೆ ಒತ್ತಾಯಿಸಿದರು. ನಿಖಿಲ್ ಕುಮಾರಸ್ವಾಮಿಯೂ ಪ್ರಕರಣ ಸಂಬಂಧ ಜವಾಬ್ದಾರಿಯುತವಾಗಿ ಮಾತನಾಡಿದರು. ಆದರೀಗ ಒಬ್ಬೊಬ್ಬರು ಒಂದೊಂದು ರೀತಿ ಹೇಳಿಕೆ ನೀಡಿ ಸತ್ಯಾಸತ್ಯತೆಯನ್ನು ಮರೆಮಾಚುವ ಕೆಲಸ ಮಾಡುತ್ತಿದ್ದಾರೆ. ಎಲ್ಲೊ ಒಂದು ಕಡೆ ಪ್ರಜ್ವಲ್ ರೇವಣ್ಣ ಅವರನ್ನು ರಕ್ಷಣೆ ಮಾಡುವ ಕೆಲಸವನ್ನೂ ವಿಪಕ್ಷದವರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರಕರಣ ತನಿಖೆ ಪ್ರಗತಿಯಲ್ಲಿದ್ದಾಗ ಹೇಳಿಕೆ ನೀಡುವುದು ಸರಿಯಲ್ಲ, ಸಂತ್ರಸ್ತ ಮಹಿಳೆಯರ ಕುಟುಂಬಗಳನ್ನು ಬೀದಿಪಾಲು ಮಾಡುತ್ತಿದ್ದಾರೆ. ತಮ್ಮ ವರ್ತನೆಗಳನ್ನು ಇಲ್ಲಿಗೆ ನಿಲ್ಲಿಸುವ ಮೂಲಕ ತನಿಖೆಗೆ ಸಹಕರಿಸಬೇಕು. ಇಲ್ಲದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ನಂಜೇಗೌಡ ಎಚ್ಚರಿಕೆ ನೀಡಿದರು.
- ನಟನೆ, ಚಿತ್ರೀಕರಣ ಮಾಡಿದವರ ಬಗ್ಗೆಯೂ ಚರ್ಚಿಸಿ
ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಪ್ರಜ್ವಲ್ ರೇವಣ್ಣ ಲೈಂಗಿಕ ಪ್ರಕರಣದ ವಿಡಿಯೋ ಬಿಡುಗಡೆ ಮಾಡಿರುವ ಬಗ್ಗೆ ಚರ್ಚೆಯಾಗುತ್ತಿದೆ ಹೊರತು, ನಟನೆ, ನಿರ್ದೇಶನ, ಚಿತ್ರೀಕರಣ ಮಾಡಿರುವವರ ಬಗ್ಗೆ ಯಾಕೆ ಕುಮಾರಸ್ವಾಮಿ ಚರ್ಚಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪೆನ್ಡೆವ್ ಪ್ರಕರಣ ಕುರಿತು ದಿನಕ್ಕೊಂದು ಹೇಳಿಕೆ ನೀಡುವುದನ್ನು ಕುಮಾರಸ್ವಾಮಿ ಅವರು ಕಾಯಕವಾಗಿಸಿಕೊಂಡಿದ್ದಾರೆ. ತನಿಖಾ ಅಧಿಕಾರಿಗಳ ಸ್ಥೆ$ರ್ಯ ಕುಗ್ಗಿಸುವ ಪ್ರಯತ್ನ ನಡೆಯುತ್ತಿದೆ ಎಂದು ಟೀಕಿಸಿದರು. ಅಲ್ಲದೇ ವಕೀಲ ದೇವರಾಜೇಗೌಡ ಕಳೆದ ಒಂದು ವರ್ಷದಿಂದ ನನ್ನ ಬಳಿ ಪೆನ್ಡೆವ್ ಇದೆ. ಬಿಡುಗಡೆ ಮಾಡುತ್ತೇನೆ ಎಂದು ಹೇಳುತ್ತಿದ್ದರು. ಡಿ.ಕೆ.ಶಿವಕುಮಾರ್ ಅವರ ಕೈವಾಡ ಈ ಪ್ರಕರಣದ ಹಿಂದೆ ಇದೆ ಎಂದರೆ ಹೇಗೆ? ಪ್ರಕರಣದಲ್ಲಿ ಎಲ್ಲವೂ ತನಿಖೆ ಆಗಲಿ ಎಂದು ಅನಿಲ್ಕುಮಾರ್ ಒತ್ತಾಯಿಸಿದರು.
ಕುಮಾರಸ್ವಾಮಿ ಅವರು ಪ್ರತಿದಿನ ಬೆಳಗ್ಗೆ ಪ್ರೆಸ್ಮೀಟ್ ಮಾಡಿ ಸುರ್ಜೇವಾಲಾ, ಶಿವಕುಮಾರ್, ಸಿದ್ದರಾಮಯ್ಯ ಅವರ ಇನ್ವೆಸ್ಟಿಂಗ್ ಟೀಂ ಎಂದು ಎಸ್ಐಟಿ ತನಿಖಾ ತಂಡವನ್ನು ಟೀಕಿಸುತ್ತಿದ್ದಾರೆ. ಹಿರಿಯ ಐಪಿಎಸ್ ಅಧಿಕಾರಿಗಳು ಇರುವ ತನಿಖಾ ಸಂಸ್ಥೆಯನ್ನು ದೂಷಿಸಿದರೆ ಏನು ಅರ್ಥ? ಪ್ರಕರಣದಲ್ಲಿ ಭಾಗಿಯಾಗಿರುವವರನ್ನು ಶಿೆಗೆ ಒಳಪಡಿಸುವುದು ಖಚಿತ. ಕುಮಾರಸ್ವಾಮಿ ಅವರು ಅಲ್ಲಿಯವರೆಗೆ ಸುಮ್ಮನಿರಬೇಕು ಎಂದು ಅನಿಲ್ಕುಮಾರ್ ಕಿಡಿಕಾರಿದರು.
ಲೈಂಗಿಕ ದೌಜ್ಯನ್ಯ ಪ್ರಕರಣದ ಆರೋಪದಲ್ಲಿ ಸತ್ಯಾಂಶ ಕಂಡು ಬಂದಲ್ಲಿ ಮಾತ್ರ ಶಿಕ್ಷೆಯಾಗುತ್ತದೆ. ಅದು ಬಿಟ್ಟು ಸಂತ್ರಸ್ತೆಯನ್ನು ಕಿಡ್ನಾಪ್ ಮಾಡಿ ತಮ್ಮ ಪಿಎ ತೋಟದ ಮನೆಯಲ್ಲಿಡಿ ಅಂತ ಕಾಂಗ್ರೆಸ್ನವರು ಹೇಳಿರಲಿಲ್ಲ. ಯಾರು ಇವೆಲ್ಲಾ ಸೃಷ್ಟಿ ಮಾಡಿಕೊಂಡಿರೋದು? ಎಂದು ಪ್ರಶ್ನಿಸಿದರು.
ಬಂಗಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲ್ ಗೌಡ, ಮುಖಂಡರಾದ ಚಂಜಿಮಲೆ ರಮೇಶ್, ದಯಾನಂದ್, ನಗರಸಭೆ ಸದಸ್ಯ ಎಸ್.ಆರ್.ಮುರಳಿಗೌಡ, ಮುನಿರಾಜು ಸುದ್ದಿಗೋಷ್ಠಿಯಲ್ಲಿ ಇದ್ದರು.