ನ್ಯೂಸ್

ಸಿಎಂ,ಡಿಸಿಎಂ ವಿರುದ್ಧ ಚಿಲ್ಲರೆ ಹೇಳಿಕೆ ನಿಲ್ಲಿಸಿ ; ಎಸ್.ಮನೋಹರ್|Stop retail statement

ಬೆಂಗಳೂರು: ಸಿಎಂ, ಡಿಸಿಎಂ ವಿರುದ್ಧ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕರಾದ ಚಲವಾದಿ ನಾರಾಯಣಸ್ವಾಮಿ ಚಿಲ್ಲರೆ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು(Stop retail statement against CM, DCM)ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್( S. Manohar) ಹೇಳಿದ್ದಾರೆ.

ಸಿಎಂ ಮುಡಾ ಪ್ರಕರಣದಲ್ಲಿ ಜೈಲು ಸೇರುತ್ತಾರೆ ಎಂದು ಅಪಪ್ರಚಾರ ಮಾಡುತ್ತಿರುವ ನಾರಾಯಣಸ್ವಾಮಿ ಚಿಲ್ಲರೆ ಹೇಳಿಕೆಯು ಅವರ ವ್ಯಕ್ತಿತ್ವವನ್ನು ಹಾಗೂ ಘನತೆಯನ್ನು ಎತ್ತಿ ತೋರುತ್ತಿದೆ ಎಂದು ಟಾಂಗ್ ಕೊಟ್ಟಿದ್ದಾರೆ.

ಚಲವಾದಿ ನಾರಾಯಣಸ್ವಾಮಿ ಅವರೇ, ಬಿಜೆಪಿಯಲ್ಲಿ ಅತಿ ಹೆಚ್ಚು ಜನ ಜೈಲಿಗೆ ಹೋಗಿ ಬಂದದ್ದು ನಿಮಗೆ ಸದಾ ನೆನಪಿಗೆ ಬರುತ್ತಿರಬೇಕು. ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ಹಾಗೂ ಡಜನ್ ಗಟ್ಟಲೆ ಬಿಜೆಪಿ ಮಂತ್ರಿಗಳು ಜೈಲಿಗೆ ಹೋಗಿದ್ದಾಗ ನೀವು ಯಾವ ಪಕ್ಷದಲ್ಲಿ ನಾಯಕನಾಗಿದ್ದೀರಿ? ಎಂಬುದನ್ನು ನೆನಪಿಸಿಕೊಳ್ಳಿ ಎಂದು ಪರಿಹಾಸ್ಯ ಮಾಡಿದ್ದಾರೆ.

ನಿಮ್ಮ ಬಿಜೆಪಿ ನಾಯಕರೆಲ್ಲ ಜೈಲಿಗೆ ಹೋದ ಸಂದರ್ಭದಲ್ಲಿ ನೀವು ಕರ್ನಾಟಕದಲ್ಲಿ ಇದ್ದಿದ್ದರೆ ನಿಮಗೆ ಎಲ್ಲ ಮಾಹಿತಿ ದೊರಕುತ್ತಿತ್ತು. ಆಗ ನೀವು ಎಲ್ಲಿದ್ದೀರಿ ಎಂಬುದು ನಿಮಗೆ ಮರೆತು ಹೋಗಿರಬೇಕು. ಈಗ ಸ್ವಲ್ಪ ನೆನಪು ಮಾಡಿಕೊಂಡರೆ ನಿಮಗೆ ಜ್ಞಾನೋದಯವಾಗುತ್ತದೆ ಎಂದು ಕಾಲೆಳೆದಿದ್ದಾರೆ.

ಜೈಲಿಗೆ ಹೋಗಿ ಬಂದ ಬಿಜೆಪಿ ನಾಯಕರ ಜೊತೆ ಇರುವ ನೀವು ಸದಾ ಬಂದಿಖಾನೆಯನ್ನು ನೆನಪಿಸಿಕೊಳ್ಳುತ್ತೀರಾ ಯಾಕೆ? ತಡಮಾಡಬೇಡಿ ಮುಂದೊಂದು ದಿನ ಆ ತರಹದ ಆಹ್ವಾನ ನಿಮ್ಮ ಪಕ್ಷದ ನಾಯಕರಿಗೆ ಬರಬಹುದು. ಏಕೆಂದರೆ ನೀವು ಕೆಐಎಡಿಬಿ ಪ್ರಕರಣದಲ್ಲಿ ಯಾವ ರೀತಿ ಕಬಾಬ್ ಅಂಗಡಿ ತೆರೆದಿದ್ದೀರಿ ಎಂಬುದು ಇಡೀ ರಾಜ್ಯಕ್ಕೆ ಗೊತ್ತಿದೆ ಅದಕ್ಕೆ ನಿಮಗೆ ಪ್ರತಿ ಬಾರಿ ಜೈಲು ನೆನಪಾಗುತ್ತದೆ ಎಂದು ಗೇಲಿ ಮಾಡಿದ್ದಾರೆ.

ಬಿಜೆಪಿಯಲ್ಲಿರುವ ಭ್ರಷ್ಟಾಚಾರ ಈಗ ಅಮೆರಿಕಗೂ ತಲುಪಿದೆ. ಅದಕ್ಕೆ ಮೊದಲು ನೀವು ನಿಮ್ಮ ವಿಶ್ವಗುರುವಿನಿಂದ ಮಾಹಿತಿಯನ್ನು ಪಡೆಯಿರಿ, ನಂತರ ರಾಜ್ಯದ ಜನತೆಗೆ ತಿಳಿಸಿ. ಬಿಜೆಪಿ ಅಂದರೆ ಭ್ರಷ್ಟಾಚಾರದ ಪಕ್ಷವೆಂದು ಈಗ ಅಂತರಾಷ್ಟ್ರೀಯ ಮಟ್ಟದಲ್ಲೂ ಪ್ರಚಾರ ಪಡೆದಿದೆ. ಮೋದಿ ಭ್ರಷ್ಟಾಚಾರವನ್ನು ಡೊನಾಲ್ಡ್ ಟ್ರಂಪ್ ಬಹಿರಂಗಪಡಿಸಿದ್ದು ಇದಕ್ಕೆ ಬಿಜೆಪಿಗರೇ ಉತ್ತರ ನೀಡಬೇಕು ಎಂದು ಮನೋಹರ್ ಕುಹಕವಾಡಿದ್ದಾರೆ.