ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ವಿರುದ್ಧ ದೆಹಲಿಯಲ್ಲಿ ವಾಗ್ದಾಳಿ ನಡೆಸುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ 
ನ್ಯೂಸ್

"ಸೋತಾಗಲೆಲ್ಲಾ ನೆಪ ಹುಡುಕೋದು ಬಿಟ್ಟು ಆತ್ಮಾವಲೋಕನ ಮಾಡ್ಕೊಳ್ಳಿ!": ರಾಹುಲ್ ಗಾಂಧಿಗೆ ಅಮಿತ್ ಶಾ ಖಡಕ್ ತಿರುಗೇಟು | Amit Shah

ಮತದಾರರ ಪಟ್ಟಿ ಪರಿಷ್ಕರಣೆ (SIR) ವಿವಾದಕ್ಕೆ ಅಮಿತ್ ಶಾ ತಿರುಗೇಟು. ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಶೂನ್ಯ ಸಾಧನೆ; ಸೋಲಿಗೆ ನೆಪ ಹುಡುಕದೆ ಆತ್ಮಾವಲೋಕನ ಮಾಡಿಕೊಳ್ಳಲು ರಾಹುಲ್‌ಗೆ ಶಾ ಚಾಟಿ ಬೀಸಿದ ಗೃಹ ಸಚಿವ.

ನವದೆಹಲಿ: ಚುನಾವಣೆಯಲ್ಲಿ ಸೋತಾಗಲೆಲ್ಲಾ ಇವಿಎಂ (EVM) ಮೇಲೆ ಗೂಬೆ ಕೂರಿಸುವುದು, ಚುನಾವಣಾ ಆಯೋಗದ ನಿಯಮಗಳನ್ನು ದೂರುವುದು ಕಾಂಗ್ರೆಸ್‌ಗೆ ಚಾಳಿಯಾಗಿಬಿಟ್ಟಿದೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನೇ ಮುಂದಿಟ್ಟುಕೊಂಡು ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ಮುಗಿಬಿದ್ದಿರುವ ವಿರೋಧ ಪಕ್ಷಗಳ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ (ಅ.13) ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಮತ್ತು ಪ್ರಧಾನಿ ಮೋದಿಯವರ ಜನಪ್ರಿಯತೆಯನ್ನು SIR ಮೇಲೆ ಹಾಕಿ ನುಣುಚಿಕೊಳ್ಳಬೇಡಿ, ಮೊದಲು ನಿಮ್ಮ ಸೋಲಿಗೆ ನೀವೇ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಗುಡುಗಿದ್ದಾರೆ.

ದೆಹಲಿಯಲ್ಲಿ ಮಂಗಳವಾರ ಮಾತನಾಡಿದ ಅಮಿತ್ ಶಾ, ಕಾಂಗ್ರೆಸ್‌ನ ಸರಣಿ ಸೋಲುಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟು ತರಾಟೆಗೆ ತೆಗೆದುಕೊಂಡಿದ್ದಾರೆ. ವಿರೋಧ ಪಕ್ಷಗಳು ಎತ್ತುತ್ತಿರುವ ಆರೋಪಗಳಿಗೆ ಇತ್ತೀಚಿನ ಉಪಚುನಾವಣೆಗಳ ಫಲಿತಾಂಶಗಳನ್ನೇ ಅಸ್ತ್ರವನ್ನಾಗಿಸಿಕೊಂಡು ಅಮಿತ್​ ಶಾ ತಿರುಗೇಟು ನೀಡಿದ್ದಾರೆ.

ಆತ್ಮಾಮಲೋಕನ ಮಾಡಿಕೊಳ್ಳಿ!

ಕಾಂಗ್ರೆಸ್ ನಾಯಕರ ಆರೋಪಗಳಿಗೆ ನೇರ ಉತ್ತರ ನೀಡಿದ ಅಮಿತ್ ಶಾ, ಪ್ರಧಾನಿ ಮೋದಿ ಮತ್ತು ಬಿಜೆಪಿಯ ಅಗಾಧ ಜನಪ್ರಿಯತೆಯನ್ನು ಕೇವಲ ಮತದಾರರ ಪಟ್ಟಿ ಪರಿಷ್ಕರಣೆಯ ಮೇಲೆ ತಳ್ಳಿ ನೀವು ವಾಸ್ತವದಿಂದ ಓಡಿಹೋಗುತ್ತಿದ್ದೀರಿ. ಸೋಲಿಗೆ ಕಾರಣ ಬೇರೆಡೆ ಹುಡುಕುವ ಬದಲು ಕಾಂಗ್ರೆಸ್ ಪಕ್ಷ ಮೊದಲು ಗಂಭೀರವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಗುಡುಗಿದರು.

ಒಂದು ಕಾಲದಲ್ಲಿ ಸತತ 41 ವರ್ಷಗಳ ಕಾಲ ಗದ್ದುಗೆ ಹಿಡಿದು ಮೆರೆದಿದ್ದ ಪ್ರಮುಖ ರಾಜ್ಯವೊಂದರಲ್ಲೂ ಇಂದು ಕಾಂಗ್ರೆಸ್ ಒಂದೇ ಒಂದು ಸೀಟು ಗೆಲ್ಲಲು ಹೆಣಗಾಡುತ್ತಿದೆ. ಇಂತಹ ಹೀನಾಯ ಸ್ಥಿತಿಗೆ ತಲುಪಿರುವುದನ್ನು ಕಾಂಗ್ರೆಸ್ ನಾಯಕರು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಶಾ ವ್ಯಂಗ್ಯವಾಡಿದ್ದಾರೆ.

ಉಪಚುನಾವಣೆಯಲ್ಲಿ ಕಾಂಗ್ರೆಸ್‌ 'ಶೂನ್ಯ' ಸಂಪಾದನೆ!

ಪಶ್ಚಿಮ ಬಂಗಾಳ, ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಇತ್ತೀಚೆಗೆ ನಡೆದ ಉಪಚುನಾವಣೆಗಳ ಫಲಿತಾಂಶ ಪ್ರಸ್ತಾಪಿಸಿದ ಗೃಹ ಸಚಿವರು, ಕಾಂಗ್ರೆಸ್‌ನ ಹೀನಾಯ ಪ್ರದರ್ಶನವನ್ನು ಬಯಲಿಗೆಳೆದಿದ್ದಾರೆ. ಈ ಮೂರೂ ಪ್ರದೇಶಗಳಲ್ಲಿ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಒಂದೇ ಒಂದು ಸ್ಥಾನವನ್ನೂ ಗೆಲ್ಲಲು ಸಾಧ್ಯವಾಗಿಲ್ಲ ಎಂಬುದನ್ನು ನಾನು ಇಡೀ ದೇಶದ ಜನರಿಗೆ ಸ್ಪಷ್ಟವಾಗಿ ತಿಳಿಸಲು ಬಯಸುತ್ತೇನೆ ಎಂದರು.

ಪುದುಚೇರಿಯಲ್ಲೂ ಮುಖಭಂಗ!

ಪುದುಚೇರಿಯ ಫಲಿತಾಂಶವನ್ನೂ ಪ್ರಸ್ತಾಪಿಸಿದ ಶಾ, ಅಲ್ಲಿ ಎನ್‌ಡಿಎ ಮೈತ್ರಿಕೂಟದ ಎಐಎನ್‌ಆರ್‌ಸಿ (AINRC) ಅಭ್ಯರ್ಥಿ 8,482 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ ಶೇ. 22ರಷ್ಟು ಮತಗಳನ್ನು ಮಾತ್ರ ಪಡೆದು ಧೂಳಿಪಟವಾಗಿದೆ ಎಂದು ಲೇವಡಿ ಮಾಡಿದ್ದಾರೆ. ಜನರ ವಿಶ್ವಾಸ ಕಳೆದುಕೊಂಡ ಮೇಲೆ ನಿಯಮಗಳನ್ನು ದೂಷಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಅಮಿತ್ ಶಾ ಸ್ಪಷ್ಟ ಸಂದೇಶ ರವಾನಿಸಿದ್ದಾರೆ, (ಏಜೆನ್ಸೀಸ್​).