ನ್ಯೂಸ್

ವಿಳಂಬ ಧೋರಣೆ ಬಿಡಿ: ಅಧಿಕಾರಿಗಳಿಗೆ ಖರ್ಗೆ ಸೂಚನೆ

ಬೆಂಗಳೂರು: ಮಹಾತ್ಮಗಾಂಧಿ ರಾಷ್ಡ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಆಯಾ ಜಿಲ್ಲೆಗಳಲ್ಲಿ ಅವಶ್ಯವಿರುವ ಕಾಮಗಾರಿಗಳನ್ನು ಕೈಗೆತ್ತಿಕೊಂಡು ವಿಳಂಬವಿಲ್ಲದೆ ಕಾರ್ಯಗತಗೊಳಿಸಲು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರಿಗಳಿಗೆ ಸೂಚಿಸಿದರು.

ಗ್ರಾಮೀಣಾಭಿವೃದ್ಧಿ ಇಲಾಖೆಯ ವಿವಿಧ ಕಾರ್ಯುಕ್ರಮಗಳಲ್ಲಿ ಆಗಿರುವ ಪ್ರಗತಿಯನ್ನು ಪರಿಶೀಲಿಸಿ ಮಾತನಾಡಿದ ಅವರು, ಅಧಿಕಾರಿಗಳಿಗೆ ಸಮಸ್ಯೆ ಹಾಗೂ ಪರಿಹಾರ ಎರಡರ ಬಗ್ಗೆ ಅರಿವಿದ್ದರೂ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸುವಲ್ಲಿ ವಿಳಂಬ ಧೋರಣೆ ತೆಳೆಯುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಪಂಚಾಯಿತಿ ಕಟ್ಟಡಗಳ ನಿರ್ಮಾಣ

ಅಧಿಕಾರಿಗಳು ಉತ್ಪಾದಕತೆಯ ಬಗ್ಗೆ ತಮ್ಮ ಗಮನ ಹರಿಸಬೇಕು. ಗ್ರಾಮ ಪಂಚಾಯಿತಿಗಳ ಆಸ್ತಿ, ಅವುಗಳ ವ್ಯಾಪ್ತಿ, ಸದಸ್ಯರ ಸಂಖ್ಯಾ ಬಲಕ್ಕೆ ಅನುಗುಣವಾಗಿ ಗ್ರಾಮ ಪಂಚಾಯಿತಿ ಕಚೇರಿ ಕಟ್ಟಡಗಳ ನಿರ್ಮಾಣ ಕೆಲಸ ಕೈಗೆತ್ತಿಕೊಳ್ಳಬೇಕು ಎಂದು ತಾಕೀತು ಮಾಡಿದರು.

ಜಲಜೀವನ್ ಮಿಷನ್ ಅಡಿ ಪ್ರತಿ ಗ್ರಾಮಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳ ವಿವರಗಳನ್ನು ಪಟ್ಟಿ ಮಾಡಬೇಕು. ಪ್ರತಿ ಕಾಮಗಾರಿಗಳ ಉದ್ದ, ಅವುಗಳಿಗೆ ಮಾಡಲಾಗುತ್ತಿರುವ ವೆಚ್ಚ, ಕಾಮಗಾರಿಯ ಸ್ಥಿತಿ-ಗತಿಗಳ ಅಂಕಿಅಂಶಗಳನ್ನು ಸಂಗ್ರಹಿಸಬೇಕು ಎಂದು ಹೇಳಿದರು.

ತಾಲೂಕುಗಳಿಗೆ ಭೇಟಿ ನೀಡಿ

ಜಿ.ಪಂ. ಸಿಇಒಗಳು ನಿರ್ದಿಷ್ಟ ದಿನದಂದು ನಿರ್ದಿಷ್ಟ ತಾಲ್ಲೂಕಿಗೆ ಭೇಟಿ ನೀಡಿ ಕಾಮಗಾರಿಗಳ ಪರಿಶೀಲನೆ, ಸಾರ್ವಜನಿಕರ ಅಹವಾಲು ಆಲಿಸಲು ಕ್ಯಾಲೇಂಡರ್ ಹಾಕಿಕೊಳ್ಳುವಂತೆ ಸೂಚಿಸಿ ಆದೇಶ ಹೊರಡಿಸಲು ಗ್ರಾಮೀಣಾಭಿವೃದ್ಧಿ ಇಲಾಖೆಯ ಆಯುಕ್ತರಿಗೆ ನಿರ್ದೇಶಿಸಿದರು.

ಅಂತರ್ಜಲ ಬರಿದಾಗುತ್ತಿರುವ ಬಗ್ಗೆ ಆತಂಕ

ರಾಜ್ಯದಲ್ಲಿ ಹೆಚ್ಚು ಅಂತರ್ಜಲ ತುಂಬಿದ್ದ ಕೊಡಗು ಹಾಗೂ ಮಲೆನಾಡಿನಲ್ಲಿ ಅಂತರ್ಜಲ ಕುಸಿಯುತ್ತಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದ ಸಚಿವರು, ಈ ಬಗ್ಗೆ ಕಾರಣಗಳನ್ನು ಪತ್ತೆ ಮಾಡಬೇಕಾದ ಅವಶ್ಯಕತೆ ಇದೆ ಎಂದು ಅಧಿಕಾರಿಗಳಿಗೆ ತಿಳಿಸಿದರು.ರಾಜ್ಯದ ಪ್ರತಿ ಗ್ರಾಮಗಳಿಗೆ ಸಂಬಂಧಿಸಿದಂತೆ ಕೆರೆ, ಜಲಾಶಯ, ನದಿ, ಕೊಳವೆಬಾವಿ ಮುಂತಾದ ನೀರಿನ ಸೌಲಭ್ಯಗಳ ವಿವರಗಳನ್ನು ಹೊಂದಿದಂತೆ ಮಾಹಿತಿ ಸಂಗ್ರಹಿಸಬೇಕು. ಅನುಪಾಲನ ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಿದರು.

ಆರ್‌ಒ ಘಟಕಗಳ ಉಸ್ತುವಾರಿ

ರಾಜ್ಯದಲ್ಲಿ 18,000 ಶುದ್ಧ ನೀರು ಸರಬರಾಜು ಮಾಡುವ ಆರ್.ಒ. ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳು ಕೆಟ್ಟು ನಿಂತಾಗ ಕೂಡಲೇ ದುರಸ್ತಿ ಮಾಡುವಂತೆ ಆರ್.ಒ. ನಿರ್ಮಾಣ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಕ್ರಮ ಆಗಬೇಕಿದೆ. ಈ ಸಂಬಂಧ ತೆಗೆದುಕೊಳ್ಳಲಾಗುವ ಕ್ರಮಗಳ ಬಗ್ಗೆ ತಮಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಗ್ರಾಮ ಯೋಜಕರ ಬಳಕೆಗೆ ಸೂಚನೆ

ನಗರಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ನಗರ ಯೋಜಕರನ್ನು ನೇಮಿಸಿಕೊಳ್ಳುವಂತೆ ಗ್ರಾಮ ಯೋಜಕರನ್ನು ನೇಮಿಸಿಕೊಂಡು ರಾಜ್ಯದಲ್ಲಿನ ಗ್ರಾಮಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಲಹೆ ಹಾಗೂ ಗ್ರಾಮಗಳಲ್ಲಿನ ಸೌಲಭ್ಯಗಳನ್ನು ಆಧರಿಸಿ ಶ್ರೇಣಿಗನುಸಾರ ಹಳ್ಳಿಗಳನ್ನು ಅಯ್ಕೆ ಮಾಡುವಂತೆ ಪ್ರಿಯಾಂಕ್ ಖರ್ಗೆ ಹೇಳಿದರು.

ಗ್ರಾಮೀಣಾಭಿವೃದ್ಧಿ ಇಲಾಖೆಯ ಆಯುಕ್ತ ಅಂಜುಂ ಪರ್ವೇಜ್, ಗ್ರಾಮೀಣ ನೀರು ಸರಬರಾಜು ಇಲಾಖೆಯ ನಿರ್ದೇಶಕ ಕೆ.ನಾಗೇಂದ್ರ ಪ್ರಸಾದ್ ಹಾಗೂ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.