ನ್ಯೂಸ್

ಕಳುವಾಗಿದ್ದ ಜೆಪಿ ನಡ್ಡಾ ಪತ್ನಿಯ ಕಾರು ಪತ್ತೆ; 2 ಮಂದಿ ಅರೆಸ್ಟ್​

ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಡಿ ನಡ್ಡಾ ಅವರ ಪತ್ನಿ ಮಲ್ಲಿಕಾ ನಡ್ಡಾ ಅವರ ಫಾರ್ಚೂನರ್ ಎಸ್‌ಯುವಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಡಿ ನಡ್ಡಾ ಅವರ ಪತ್ನಿ ಮಲ್ಲಿಕಾ ನಡ್ಡಾ ಅವರ ಕಾರನ್ನು ದೆಹಲಿಯ ಗೋವಿಂದಪುರಿ ಪ್ರದೇಶದಲ್ಲಿನ ಸೇವಾ ಕೇಂದ್ರದಿಂದ ಕಳವು ಮಾಡಲಾಗಿದ್ದು, ಈ ಕಾರನ್ನು ವಾರಣಾಸಿಯಿಂದ ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಬಿಳಿ ಬಣ್ಣದ ಫಾರ್ಚುನರ್ ಎಸ್‌ಯುವಿಯನ್ನು ಮಾರ್ಚ್ 19 ರಂದು ಸರ್ವೀಸ್ ಸೆಂಟರ್‌ಗೆ ತೆಗೆದುಕೊಂಡು ಹೋದಾಗ ಕಳ್ಳತನವಾಗಿತ್ತು. ಮಾರ್ಚ್ 19 ರಂದು, ಕಾರು ಚಾಲಕ ಜೋಗಿಂದರ್ ಸಿಂಗ್ ಅವರು ದೂರು ನೀಡಿದ್ದರು, ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಾಹನದ ಪತ್ತೆಗೆ ತನಿಖೆ ಆರಂಭಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಉತ್ತರ ಪ್ರದೇಶದ ಫರಿದಾಬಾದ್ ಬಳಿಯ ಬದ್ಖಾಲ್ ನಿವಾಸಿಗಳಾದ ಶಾಹಿದ್ ಮತ್ತು ಶಿವಾಂಗ್ ತ್ರಿಪಾಠಿ ಎಂದು ಗುರುತಿಸಲಾಗಿದೆ.

ಪೊಲೀಸರ ಪ್ರಕಾರ, ಆರೋಪಿಗಳು ನಡ್ಡಾ ಅವರ ಕಾರನ್ನು ಕಳ್ಳತನ ಮಾಡಲೆಂದು ದೆಹಲಿಗೆ ಪ್ರಯಾಣಿಸಲು ಕ್ರೆಟಾ ಕಾರನ್ನು ಬಳಸಿದ್ದರು. ಕಾರನ್ನು ಮೊದಲು ಬದ್ಖಾಲ್‌ಗೆ ಕೊಂಡೊಯ್ಯಲಾಯಿತು. ಅಲ್ಲಿ ಅದರ ನಂಬರ್ ಪ್ಲೇಟ್ ಅನ್ನು ಬದಲಾಯಿಸಲಾಯಿತು. ಆರೋಪಿಗಳು ಕಾರನ್ನು ನಾಗಾಲ್ಯಾಂಡ್‌ಗೆ ಕಳುಹಿಸಲು ಯೋಜಿಸಿದ್ದರು. ಹೀಗಾಗಿ ಅಲಿಗಢ್, ಲಖಿಂಪುರ ಖೇರಿ, ಬರೇಲಿ, ಸೀತಾಪುರ್, ಲಖನೌ ಮಾರ್ಗವಾಗಿ ವಾರಾಣಸಿ ತಲುಪಿದ್ದರು.