ಮುಂಬೈ: ಜಾಗತಿಕ ಮಾರುಕಟ್ಟೆಯಲ್ಲಿನ ಪ್ರವೃತ್ತಿಯ ನಡುವೆ ಭಾರತದ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸಾರ್ವಕಾಲಿಕ ಏರಿಕೆಯೊಂದಿಗೆ ಶುಕ್ರವಾರ ಮುಕ್ತಾಯ ಕಂಡಿವೆ. ಬ್ಯಾಂಕಿಂಗ್, ಹಣಕಾಸು ಸಂಬಂಧಿತ ಷೇರುಗಳಲ್ಲಿ ಏರಿಕೆ ಕಂಡುಬಂತು. ಸೆನ್ಸೆಕ್ಸ್ 466.95 ಪಾಯಿಂಟ್ (ಶೇ.0.74) ಹೆಚ್ಚಳವಾಗಿ 63,384.58ರ ದಾಖಲೆಯ ಮುಕ್ತಾಯ ಕಂಡಿತು. ದಿನದ ಅವಧಿಯಲ್ಲಿ ಇದು 602.73 ಪಾಯಿಂಟ್ಗಳು (0.95 ಶೇಕಡ) ವರೆಗೂ ಏರಿಕೆ ಕಂಡು, 63,520.36ಕ್ಕೆ ತಲುಪಿತ್ತು. ಕಳೆದ ವರ್ಷ ಡಿಸೆಂಬರ್ 1ರಂದು ಸೂಚ್ಯಂಕ 63,284.19 ಮಟ್ಟ ದಾಖಲಿಸಿತ್ತು. ನಿಫ್ಟಿ 137.90 ಪಾಯಿಂಟ್ಗಳು (ಶೇಕಡ 0.74) ಏರಿಕೆಯಾಗಿ 18,826ರಲ್ಲಿ ಕೊನೆಗೊಂಡಿತು. ಈ ಮೊದಲು ನಿಫ್ಟಿಯ ಗರಿಷ್ಠ ಮಟ್ಟ 18,812.50 ಆಗಿತ್ತು. ಕಳೆದ ಒಂದು ವಾರದಲ್ಲಿ ಸೆನ್ಸೆಕ್ಸ್ 758.95 ಪಾಯಿಂಟ್ (1.21 ಶೇಕಡ) ಏರಿಕೆ ಕಂಡಿದ್ದರೆ, ನಿಫ್ಟಿ 262.6 ಪಾಯಿಂಟ್ (1.41 ಶೇಕಡ) ಹೆಚ್ಚಳವಾಗಿದೆ.
ಬಲಗೊಳ್ಳುತ್ತಿರುವ ರೂಪಾಯಿ ಮತ್ತು ವಿದೇಶಿ ಬಂಡವಾಳದ ಒಳಹರಿವು ಏರಿಕೆಗೆ ಪ್ರಮುಖ ಕಾರಣ ಎಂದು ತಜ್ಞರು ಹೇಳಿದ್ದಾರೆ. ನಿಫ್ಟಿ ಸೂಚ್ಯಂಕ ವಹಿವಾಟಿನ ಮೊದಲಾರ್ಧದಲ್ಲಿ ಸಾಧಾರಣ ಏರಿಕೆ ಕಂಡಿತು. ದಿನದ ಕೊನೆಗೆ ಏರಿಕೆ ದಾಖಲಿಸಿತು. ಎಫ್ಎಂಸಿಜಿ, ಫಾರ್ವ, ಎನರ್ಜಿ, ಬ್ಯಾಂಕಿಂಗ್ ಮತ್ತು ಹಣಕಾಸು ಕಂಪನಿಯ ಷೇರುಗಳಲ್ಲಿ ಏರಿಕೆ ಕಂಡುಬಂತು. ಮಿಡ್ಕ್ಯಾಪ್ ಮತ್ತು ಸ್ಮಾಲ್ಕ್ಯಾಪ್ ಷೇರುಗಳಲ್ಲೂ ಹೂಡಿಕೆದಾರರು ಖರೀದಿ ಮುಂದುವರಿಸಿದರು.
ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಎಚ್ಡಿಎಫ್ಸಿ ಅವಳಿ ಷೇರುಗಳಲ್ಲಿನ ಏರಿಕೆ ಸೂಚ್ಯಂಕಕ್ಕೆ ಬಲ ನೀಡಿತು. ಬಜಾಜ್ ಫಿನ್ಸರ್ವ್, ಟೈಟಾನ್, ಐಟಿಸಿ, ಕೋಟಕ್ ಮಹೀಂದ್ರಾ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್, ಎಚ್ಡಿಎಫ್ಸಿ, ಬಜಾಜ್ ಫೈನಾನ್ಸ್, ಇಂಡಸ್ಇಂಡ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಚ್ಯುುಎಲ್, ಮಹಿಂದ್ರಾ ಆಂಡ್ ಮಹಿಂದ್ರಾ ಷೇರುಗಳಲ್ಲಿ ಲಾಭ ಕಂಡುಬಂತು. ವಿಪೋ›, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಪವರ್ ಗ್ರಿಡ್ ಮತ್ತು ಟೆಕ್ ಮಹೀಂದ್ರಾ ತುಸು ಇಳಿಕೆ ದಾಖಲಿಸಿತು.
ಏರಿಕೆ ಕಾರಣ?: ಅಮೆರಿಕದ ಫೆಡರಲ್ ರಿಸರ್ವ್ ತನ್ನ ಬಿಗಿ ನೀತಿಯನ್ನು ಕೊನೆಗೊಳಿಸುವ ಸುಳಿವು ನೀಡಿದೆ. ಚೀನಾ ಆರ್ಥಿಕ ಉತ್ತೇಜನ ಕ್ರಮಗಳನ್ನು ಪರಿಚಯಿಸುತ್ತಿದೆ. ಈ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಉತ್ಸಾಹ ಬಂದಿದೆ. ಭಾರತದ ಮಾರುಕಟ್ಟೆಗೂ ಇದರಿಂದ ಲಾಭವಾಗಲಿದೆ.
ಚಿನ್ನ 510 ರೂ. ಏರಿಕೆ: ಅಂತರಾಷ್ಟ್ರೀಯ ಮಾರುಕಟ್ಟೆಗಳ ಸೂಚನೆಗಳ ನಡುವೆ ಶುಕ್ರವಾರ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 510 ರೂ. ಏರಿಕೆ ಕಂಡು, 60,210 ರೂ.ಗೆ ತಲುಪಿದೆ. ಬೆಳ್ಳಿ ಕೂಡ ಪ್ರತಿ ಕೆಜಿಗೆ 450 ರೂ. ಹೆಚ್ಚಳ ಕಂಡು 73,050 ರೂ.ಆಗಿದೆ.
ರೂಪಾಯಿ ಚೇತರಿಕೆ: ಶುಕ್ರವಾರ ಅಮೆರಿಕದ ಡಾಲರ್ ಎದುರು ರೂ. 34 ಪೈಸೆ ಚೇತರಿಕೆ ಕಂಡು ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ. ಜಾಗತಿಕ ತೈಲ ಮಾನದಂಡ ಬ್ರೆಂಟ್ ಆಯಿಲ್ ಶೇ. 0.62 ಕುಸಿದು ಬ್ಯಾರೆಲ್ಗೆ 75.20 ಡಾಲರ್ಗೆ ತಲುಪಿದೆ.