ನ್ಯೂಸ್

ಐಟಿ ಷೇರುಗಳ ಮಾರಾಟ ಇಳಿಕೆ ಕಂಡ ಷೇರುಪೇಟೆ

ಮುಂಬೈ: ಹಿಂದಿನ ವಹಿವಾಟಿನಲ್ಲಿ ತೀವ್ರ ಏರಿಕೆ ಕಂಡಿದ್ದ ಮಾಹಿತಿ ತಂತ್ರಜ್ಞಾನ ಕಂಪನಿಗಳ ಷೇರುಗಳಿಂದ ಲಾಭ ಮಾಡಿಕೊಳ್ಳಲು ಹೂಡಿಕೆದಾರರು ಮಾರಾಟಕ್ಕಿಳಿದ ಪರಿಣಾಮ ಭಾರತೀಯ ಷೇರು ಪೇಟೆ ಶುಕ್ರವಾರ ಇಳಿಕೆ ದಾಖಲಿಸಿತು. ದಿನದ ವಹಿವಾಟಿನ ಮಧ್ಯೆ 383 ಅಂಕ ಇಳಿಕೆಯಾಗಿ 82,146ಕ್ಕೆ ತಲುಪಿದ್ದ ಸೆನ್ಸೆಕ್ಸ್ ಕೊನೆಯಲ್ಲಿ 200 ಅಂಕ ಇಳಿಕೆ ದಾಖಲಿಸಿ 82,330ಕ್ಕೆ ಸ್ಥಿರವಾಯಿತು. ನಿಫ್ಟಿ 42 ಅಂಕ ಇಳಿದು 25,019ಕ್ಕೆ ಸ್ಥಿರಗೊಂಡಿತು.

ಭಾರ್ತಿ ಏರ್​ಟೆಲ್ ಷೇರಿನ ಬೆಲೆ ಶೇ. 2.81ರಷ್ಟು ತೀವ್ರ ಇಳಿಕೆಯಾಗಿದ್ದು ಗಮನಾರ್ಹವಾಗಿದೆ. ಎಚ್​ಸಿಎಲ್ ಟೆಕ್, ಎಸ್​ಬಿಐ, ಇನ್​ಫೋಸಿಸ್, ಟೆಕ್ ಮಹಿಂದ್ರಾ, ಟಿಸಿಎಸ್, ಬಜಾಜ್ ಫಿನ್​ಸರ್ವ್, ಎಲ್ ಆಂಡ್ ಟಿ, ಮಹಿಂದ್ರಾ ಆಂಡ್ ಮಹಿಂದ್ರಾ, ಟೈಟನ್ ಷೇರುಗಳು ಕೂಡ ನಷ್ಟ ಅನುಭವಿಸಿದವು. ಎಟರ್ನಲ್, ಹಿಂದುಸ್ತಾನ್ ಯುನಿಲಿವರ್, ಏಷ್ಯನ್ ಪೇಂಟ್ಸ್, ಐಟಿಸಿ, ಟಾಟಾ ಮೋಟರ್ಸ್, ಎನ್​ಟಿಪಿಸಿ ಷೇರುಗಳು ಲಾಭ ಗಳಿಸಿದವು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಗುರುವಾರ 5,392 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ವಿನಿಮಯ ಕೇಂದ್ರ ತಿಳಿಸಿದೆ. ಏಷ್ಯಾದ ಮಾರುಕಟ್ಟೆಗಳ ಪೈಕಿ ಜಪಾನ್, ಶಾಂಘೈ, ಹಾಂಗ್​ಕಾಂಗ್ ಸೂಚ್ಯಂಕಗಳು ಇಳಿಕೆ ದಾಖಲಿಸಿದರೆ, ದಕ್ಷಿಣ ಕೊರಿಯಾದ ಸೂಚ್ಯಂಕ ಧನಾತ್ಮಕವಾಗಿತ್ತು. ಯೂರೋಪಿಯನ್ ಮಾರುಕಟ್ಟೆಗಳೂ ಏರಿಕೆ ದಾಖಲಿಸಿದವು.