ಮುಂಬೈ: ಜಾಗತಿಕ ಮಟ್ಟದಲ್ಲಿ ಧನಾತ್ಮಕ ಬೆಳವಣಿಗೆಗಳು, ದೇಶದಲ್ಲಿ ಚಿಲ್ಲರೆ ಹಣದುಬ್ಬರದ ಇಳಿಕೆ ಮುಂತಾದ ಕಾರಣಗಳಿಂದಾಗಿ ಭಾರತೀಯ ಷೇರುಪೇಟೆ ಬುಧವಾರ ಸ್ವಲ್ಪಮಟ್ಟಿನ ಏರಿಕೆ ಕಂಡಿತು.
ದಿನದ ವಹಿವಾಟಿನ ಮಧ್ಯೆ 81,691ರಷ್ಟು ಎತ್ತರಕ್ಕೆ ಮತ್ತು 80,910ರಷ್ಟು ಕೆಳಕ್ಕೆ ಹೋಗಿದ್ದ ಸೆನ್ಸೆಕ್ಸ್ ಕೊನೆಯಲ್ಲಿ 182 ಅಂಕ ಏರಿಕೆಯಾಗಿ 81,330ಕ್ಕೆ ಸ್ಥಿರಗೊಂಡಿತು. ನಿಫ್ಟಿ 88 ಅಂಕ ಏರಿಕೆಯಾಗಿ 24, 666ಕ್ಕೆ ಸ್ಥಿರವಾಯಿತು.
ಟಾಟಾ ಸ್ಟೀಲ್ನ ಷೇರುಗಳ ಬೆಲೆ 3.88ರಷ್ಟು ಏರಿಕೆಯಾಯಿತು. ಎಟರ್ನಲ್, ಟೆಕ್ ಮಹಿಂದ್ರಾ, ಮಾರುತಿ, ಮಹಿಂದ್ರಾ ಆಂಡ್ ಮಹಿಂದ್ರಾ, ಇನ್ಫೋಸಿಸ್, ಇಂಡಸ್ಇಂಡ್ ಬ್ಯಾಂಕ್, ಎಚ್ಸಿಎಲ್ ಟೆಕ್, ಟಾಟಾ ಕನ್ಸಲ್ಟನ್ಸಿ ಸರ್ವಿಸಸ್, ಭಾರ್ತಿ ಏರ್ಟೆಲ್ ಮುಂತಾದ ಕಂಪನಿಗಳ ಷೇರುಗಳು ಲಾಭ ಗಳಿಸಿದವು. ಏಷ್ಯನ್ ಪೇಂಟ್ಸ್, ಟಾಟಾ ಮೋಟರ್ಸ್, ಕೋಟಕ್ ಮಹಿಂದ್ರಾ ಬ್ಯಾಂಕ್, ಎನ್ಟಿಪಿಸಿ, ಪವರ್ಗ್ರಿಡ್ ಷೇರುಗಳು ನಷ್ಟ ಅನುಭವಿಸಿದವು. ಏಷ್ಯಾದ ಮಾರುಕಟ್ಟೆಗಳ ಪೈಕಿ ದಕ್ಷಿಣ ಕೊರಿಯಾ, ಶಾಂಘೈ, ಹಾಂಗ್ಕಾಂಗ್ನ ಸೂಚ್ಯಂಕಗಳು ಏರಿಕೆ ದಾಖಲಿಸಿದರೆ ಜಪಾನ್ ಸೂಚ್ಯಂಕ ಇಳಿಮುಖವಾಯಿತು. ಯೂರೋಪ್ ಮಾರುಕಟ್ಟೆಗಳೂ ಇಳಿಕೆ ಕಂಡವು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು 476 ಕೋಟಿ ರೂ. ಹಿಂತೆಗೆದುಕೊಂಡಿದ್ದಾರೆ.