ಮುಂಬೈ: ಅಮೆರಿಕದ ಫೆಡರಲ್ ರಿಸರ್ವ್ ಮುಂದಿನ ವಾರ ಬಡ್ಡಿ ದರ ಕಡಿತಗೊಳಿಸಲಿದೆ ಎಂಬ ಆಶಯ, ಭಾರತ-ಅಮೆರಿಕ ವ್ಯಾಪಾರ ಮಾತುಕತೆ ಯಶಸ್ಸಿನ ಆಶಾವಾದ ಮುಂತಾದ ಕಾರಣಗಳಿಂದ ಭಾರತೀಯ ಷೇರುಪೇಟೆ ಶುಕ್ರವಾರ ಏರಿಕೆ ದಾಖಲಿಸಿದೆ.
ಸತತ ಐದನೇ ದಿನವೂ ಏರುಗತಿಯಲ್ಲಿದ್ದ ಸೆನ್ಸೆಕ್ಸ್ 355.97 ಅಂಕಗಳ ಜಿಗಿತದೊಂದಿಗೆ 81,904.70ಕ್ಕೆ ಸ್ಥಿರವಾಯಿತು. ದಿನದ ವಹಿವಾಟಿನ ಮಧ್ಯೆ ಇದು 444.12 ಅಂಕಗಳ ಏರಿಕೆಯೊಂದಿಗೆ 81,992.85ಕ್ಕೆ ತಲುಪಿತ್ತು. ನಿಫ್ಟಿ 108.50 ಅಂಕ ಏರಿಕೆಯೊಂದಿಗೆ 25,114ಕ್ಕೆ ಏರಿತು. ನಿಫ್ಟಿ ಸತತ 8 ದಿನಗಳಿಂದ ಏರುತ್ತಿದೆ. ಇಡೀ ವಾರದಲ್ಲಿ ಸೆನ್ಸೆಕ್ಸ್ 1,193.94 ಅಂಕ ಜಿಗಿತ ಕಂಡಿದ್ದು, ನಿಫ್ಟಿ 373 ಅಂಕ ಏರಿಕೆಯಾಗಿದೆ. ಎಂಟು ವಹಿವಾಟಿನ ದಿನಗಳಲ್ಲಿ ನಿಫ್ಟಿ 534.4 ಅಂಕ ಹೆಚ್ಚಳವಾಗಿದೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಗುರುವಾರ 3,472.37 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ವಿನಿಮಯ ಕೇಂದ್ರ ತಿಳಿಸಿದೆ. ಜಾಗತಿಕ ತೈಲ ಮಾನದಂಡವಾದ ಬ್ರೆಂಟ್ ಕ್ರೂಡ್ ಶೇ. 0.47 ಏರಿಕೆಯೊಂದಿಗೆ ಬ್ಯಾರೆಲ್ಗೆ 66.72 ಡಾಲರ್ಗೆ ತಲುಪಿತು.