ಮುಂಬೈ: 2024-25ರ ಹಣಕಾಸು ವರ್ಷದಲ್ಲಿ ಜಿಡಿಪಿ (ಒಟ್ಟು ದೇಶೀಯ ಉತ್ಪನ್ನ) ಬೆಳವಣಿಗೆಯ ಅಂದಾಜನ್ನು ಶೇ 7ರಿಂದ ಶೇ 7.2 ಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಪರಿಷ್ಕರಿಸಿದ ಹಿನ್ನೆಲೆಯಲ್ಲಿ ಬೆಂಚ್‌ಮಾರ್ಕ್ ಬಿಎಸ್‌ಇ ಮತ್ತು ನಿಫ್ಟಿ ಸೂಚ್ಯಂಕಗಳು ಶುಕ್ರವಾರ ಶೇ. 2ಕ್ಕಿಂತ ಹೆಚ್ಚು ಏರಿಕೆ ಕಂಡು ದಾಖಲೆಯ ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿದವು.
ದಿನದ ವಹಿವಾಟಿನಲ್ಲಿ 30-ಷೇರುಗಳ ಬಿಎಸ್‌ಇ ಸೂಚ್ಯಂಕವು 1,720.8 ಅಂಕಗಳು ಅಥವಾ ಶೇ. 2.29 ರಷ್ಟು ಏರಿಕೆ ಕಂಡು ದಾಖಲೆಯ ಹೊಸ ಗರಿಷ್ಠ ಮಟ್ಟವಾದ 76,795.31 ಅಂಕಗಳಿಗೆ ತಲುಪಿತ್ತು. ಅಂತಿಮವಾಗಿ ಈ ಸೂಚ್ಯಂಕವು 1,618.85 ಅಂಕಗಳು ಅಥವಾ ಶೇಕಡಾ 2.16 ರಷ್ಟು ಏರಿಕೆಯಾಗಿ 76,693.36 ರ ದಾಖಲೆಯ ಗರಿಷ್ಠ ಮಟ್ಟದಲ್ಲಿ ನೆಲೆಗೊಂಡಿತು.
ದಿನದ ವಹಿವಾಟಿನಲ್ಲಿ ಎನ್‌ಎಸ್‌ಇ ನಿಫ್ಟಿ 50 ಸೂಚ್ಯಂಕವು 498.8 ಅಂಕಗಳು ಅಥವಾ ಶೇ 2.18 ರಷ್ಟು ಏರಿಕೆಯಾಗಿ 23,320.20 ಕ್ಕೆ ತಲುಪಿತು. ಇದು ದಾಖಲೆಯ ಇಂಟ್ರಾಡೇ ಗರಿಷ್ಠ ಮಟ್ಟದಿಂದ ಕೇವಲ 18.5 ಅಂಕಗಳಷ್ಟು ಕಡಿಮೆಯಾಗಿತ್ತು. ಈ ಸೂಚ್ಯಂಕವು ಅಂತಿಮವಾಗಿ 468.75 ಅಂಕಗಳು ಅಥವಾ ಶೇ. 2.05 ಹೆಚ್ಚಳದೊಂದಿಗೆ ಸಾರ್ವಕಾಲಿಕ ಮುಕ್ತಾಯದ ಗರಿಷ್ಠ ಮಟ್ಟವಾದ 23,290.15ಕ್ಕೆ ತಲುಪಿತು.
ಬಡ್ಡಿ ದರ ಸಂಬಂಧಿತ ಬ್ಯಾಂಕ್, ರಿಯಾಲ್ಟಿ ಮತ್ತು ಆಟೋ ವಲಯದ ಷೇರುಗಳು ತೀವ್ರ ಲಾಭದೊಂದಿಗೆ ಕೊನೆಗೊಂಡವು. ಐಟಿ ವಲಯದ ಷೇರುಗಳು ಕೂಡ ಹೆಚ್ಚಳ ದಾಖಲಿಸಿದವು.
ದೃಢವಾದ ಆರ್ಥಿಕ ಬೆಳವಣಿಗೆಯ ನಿರೀಕ್ಷೆ ನಡುವೆ ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು ಶುಕ್ರವಾರದಂದು ಆರ್‌ಬಿಐ ತನ್ನ ಪ್ರಮುಖ ಬಡ್ಡಿದರಗಳನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿದೆ.
30-ಷೇರುಗಳ ಬಿಎಸ್‌ಇ ಸೂಚ್ಯಂಕ ವ್ಯಾಪ್ತಿಯಲ್ಲಿನ ಎಲ್ಲ 30 ಕಂಪನಿಗಳ ಷೇರುಗಳು ಏರಿಕೆ ಕಂಡಿದ್ದು ಶುಕ್ರವಾರದ ವಿಶೇಷವಾಗಿತ್ತು. ಮಹೀಂದ್ರಾ ಆ್ಯಂಡ್ ಮಹೀಂದ್ರಾ, ವಿಪ್ರೋ, ಟೆಕ್ ಮಹೀಂದ್ರಾ, ಭಾರ್ತಿ ಏರ್‌ಟೆಲ್, ಇನ್ಫೋಸಿಸ್ ಮತ್ತು ಟಾಟಾ ಸ್ಟೀಲ್ ಷೇರುಗಳು ಅತಿ ಹೆಚ್ಚು ಲಾಭ ಗಳಿಸಿದವು.
"ಎನ್ಡಿಎ ಸರ್ಕಾರ ರಚನೆಯು ಹತ್ತಿರವಾಗುತ್ತಿದ್ದಂತೆ ನಿಫ್ಟಿ ಸತತ ಮೂರನೇ ಅವಧಿಯಲ್ಲಿ 469 ಅಂಕಗಳ ಲಾಭದೊಂದಿಗೆ ಮುಕ್ತಾಯಗೊಂಡಿದೆ. ಕಳೆದ ಮೂರು ದಿನಗಳಲ್ಲಿ ನಿಫ್ಟಿ 6.42% ಏರಿಕೆಯಾಗಿದೆ. ಇದು ಫೆಬ್ರವರಿ 2021 ರಿಂದ ಗರಿಷ್ಠ ಮೂರು ಅವಧಿಯ ಏರಿಕೆಯಾಗಿದೆ" ಎಂದು ಎಚ್ಡಿಎಫ್ಸಿ ಸೆಕ್ಯುರಿಟೀಸ್ ನಂದೀಶ್ ಶಾ ಹೇಳಿದ್ದಾರೆ.
ಬಿಎಸ್‌ಇ ಸ್ಮಾಲ್‌ಕ್ಯಾಪ್ ಕ್ಯಾಪ್ ಸೂಚ್ಯಂಕ ಶೇ 2.18 ಮತ್ತು ಮಿಡ್‌ಕ್ಯಾಪ್ ಸೂಚ್ಯಂಕ ಶೇ 1.28 ರಷ್ಟು ಏರಿಕೆ ಕಂಡಿವೆ. ಎಲ್ಲ ವಲಯದ ಸೂಚ್ಯಂಕಗಳು ಏರಿಕೆ ಕಂಡಿವೆ. ದೂರಸಂಪರ್ಕ ಶೇ. 3.78, ಐಟಿ ಶೇ. 3.38, ಟೆಕ್ (ಶೇ. 3.33), ಆಟೋ (ಶೇ. 2.53), ಯುಟಿಲಿಟೀಸ್ (ಶೇ. 2.18), ಲೋಹ (ಶೇ. 2.15), ಇಂಧನ (ಶೇ. 1.99) ಸೂಚ್ಯಂಕಗಳು ಹೆಚ್ಚಳವಾಗಿವೆ.
ಈ ವಾರದಲ್ಲಿ, ಬಿಎಸ್‌ಇ ಬೆಂಚ್‌ಮಾರ್ಕ್ ಸೂಚ್ಯಂಕ 2,732.05 ಅಂಕಗಳು ಅಥವಾ 3.69 ಪ್ರತಿಶತದಷ್ಟು ಜಿಗಿದಿದ್ದರೆ, ನಿಫ್ಟಿ ಸೂಚ್ಯಂಕ 759.45 ಅಂಕಗಳು ಅಥವಾ ಶೇ 3.37 ಏರಿಕೆಯಾಗಿದೆ. ಬಿಎಸ್‌ಇಯಲ್ಲಿ 2,890 ಸ್ಟಾಕ್‌ಗಳ ಬೆಲೆಗಳು ಹೆಚ್ಚಳವಾದರೆ, 970 ಷೇರುಗಳ ಬೆಲೆಗಳು ಇಳಿಕೆಯಾಗಿವೆ. 92 ಷೇರುಗಳ ಬೆಲೆ ಬದಲಾಗದೆ ಉಳಿದಿವೆ.
ಏಷ್ಯಾದ ಮಾರುಕಟ್ಟೆಗಳ ಪೈಕಿ, ಸಿಯೋಲ್ ಮತ್ತು ಶಾಂಘೈ ಲಾಭ ಕಂಡರೆ, ಟೋಕಿಯೊ ಮತ್ತು ಹಾಂಗ್ ಕಾಂಗ್ ಕುಸಿತ ಕಂಡಿವೆ. ಐರೋಪ್ಯ ಮಾರುಕಟ್ಟೆಗಳು ಕಡಿಮೆ ವಹಿವಾಟು ನಡೆಸಿದವು. ಅಮೆರಿಕ ಮಾರುಕಟ್ಟೆಗಳಲ್ಲಿ ಗುರುವಾರ ಮಿಶ್ರ ನೋಟ ಇತ್ತು.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಗುರುವಾರ 6,867.72 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.