ನ್ಯೂಸ್

ಸಂಪಾದಕೀಯ: ಆಧುನಿಕತೆಯತ್ತ ದಿಟ್ಟ ಹೆಜ್ಜೆ

vinaymk1969

ದೇಶದ ಭದ್ರತೆಯ ದೃಷ್ಟಿಯಲ್ಲಿ ಸಶಸ್ತ್ರ ಪಡೆಗಳ ಆಧುನೀಕರಣ ಅನಿವಾರ್ಯ ಮತ್ತು ಅತ್ಯವಶ್ಯ. ದೇಶವನ್ನು ಶತ್ರುರಾಷ್ಟ್ರಗಳಿಂದ ಕಾಪಾಡುವ ಮಹತ್ತರ ಹೊಣೆಗಾರಿಕೆ ನಿಭಾಯಿಸುವ ಸೇನೆಗೆ ಆಧುನಿಕ ಶಸ್ತ್ರಾಸ್ತ್ರಗಳು, ಮೂಲಸೌಕರ್ಯದ ವಿಸ್ತರಣೆಯಂಥ ಕ್ರಮಗಳು ಕಾಲಕಾಲಕ್ಕೆ ಮಾಡಲೇಬೇಕು. ಭಾರತ ಅಂತಾರಾಷ್ಟ್ರೀಯ ವಲಯದಲ್ಲಿ ತನ್ನ ಶಕ್ತಿ ಹೆಚ್ಚಿಸಿಕೊಂಡು, ಹಲವು ಬಲಾಢ್ಯ ರಾಷ್ಟ್ರಗಳೊಂದಿಗೆ ಮಹತ್ವದ ರಕ್ಷಣಾ ಒಪ್ಪಂದ ಮಾಡಿಕೊಂಡಿರುವುದಕ್ಕೆ ರಫೇಲ್ ಒಂದು ನಿದರ್ಶನ. ಒಂದೆಡೆ ಚೀನಾ ಕಾರಣವಿಲ್ಲದೆ ಗಡಿತಂಟೆ ತೆಗೆಯುತ್ತಿದ್ದು, ಪೂರ್ವ ಲಡಾಖ್ ಭಾಗದಲ್ಲಿ ಇತ್ತೀಚೆಗಷ್ಟೇ ಉದ್ವಿಗ್ನ ಸ್ಥಿತಿ ಸೃಷ್ಟಿ ಆಗಿದ್ದನ್ನು ನೆನಪಿಸಿಕೊಳ್ಳಬಹುದು. ಶಸ್ತ್ರಾಸ್ತ್ರಗಳ ಬಲದ ಮೇಲೆ ಇತರ ರಾಷ್ಟ್ರಗಳನ್ನು ಕೆಣಕುವ ಚೀನಾದ ಚಾಳಿ ಹೊಸದೇನಲ್ಲ. ಮತ್ತೊಂದೆಡೆ, ಪಾಕಿಸ್ತಾನ ತಾನು ಆಂತರಿಕವಾಗಿ ಕೃಶವಾಗುತ್ತಿದ್ದರೂ, ಭಾರತವಿರೋಧಿ ಚಟುವಟಿಕೆಗಳನ್ನು, ಭಯೋತ್ಪಾದನೆಯ ರಫ್ತನ್ನು ನಿಲ್ಲಿಸಿಲ್ಲ ಎಂಬುದು ವಾಸ್ತವ ಸ್ಥಿತಿ.

ಭಾರತ ರಾಜತಾಂತ್ರಿಕ ಮಾರ್ಗಗಳಿಂದ ಹಲವು ಕಠಿಣ ಸವಾಲುಗಳನ್ನು ಪರಿಹರಿಸಿಕೊಂಡಿದೆ ಎಂಬುದು ನಿಜವೇ. ಜತೆಗೆ, ಸೇನೆಯ ಆತ್ಮಬಲ ಹೆಚ್ಚಬೇಕಾದರೆ ಅದು ಯಾವುದೇ ರಾಷ್ಟ್ರವನ್ನು ಎದುರಿಸಲು ಸದಾ ಸನ್ನದ್ಧ ಸ್ಥಿತಿಯಲ್ಲಿ ಇರಲು ಅವಶ್ಯಕ ಶಸ್ತ್ರಾಸ್ತ್ರ, ಯುದ್ಧವಿಮಾನಗಳನ್ನು ಒದಗಿಸಲೇಬೇಕು. ಈಗಿನ ಕೇಂದ್ರ ಸರ್ಕಾರ ಈ ಬದ್ಧತೆಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿದೆ ಎಂಬುದು ಸಮಾಧಾನದ ವಿಷಯ. ಎರಡು ದಶಕಗಳ ಹಿಂದೆ ರಷ್ಯಾದಿಂದ ಯುದ್ಧವಿಮಾನಗಳನ್ನು ಖರೀದಿಸಿದ ಬಳಿಕ, ತೀರಾ ಇತ್ತೀಚಿನ ಆಧುನಿಕ ತಂತ್ರಜ್ಞಾನದ ಯುದ್ಧವಿಮಾನ ವಾಯುಪಡೆಯ ಬತ್ತಳಿಕೆಯಲ್ಲಿ ಇರಲಿಲ್ಲ. ಫ್ರಾನ್ಸ್​ನೊಂದಿಗಿನ ಒಪ್ಪಂದದ ಪ್ರಕಾರ ಒಟ್ಟು 36 ರಫೇಲ್ ಯುದ್ಧವಿಮಾನ ಭಾರತಕ್ಕೆ ಸಿಗಲಿದ್ದು, ಮೊದಲ ಹಂತದಲ್ಲಿ ಐದು ಯುದ್ಧವಿಮಾನಗಳು ಬುಧವಾರ ಬಂದಿಳಿದಿವೆ.

ಭಾರತ ಶಾಂತಿಪ್ರಿಯ ರಾಷ್ಟ್ರ. ಆದರೆ, ನಮ್ಮ ದೇಶದ ಗಡಿಯ ತಂಟೆಗೆ ಬಂದರೆ, ಶಾಂತಿಯನ್ನು ಭಂಗ ಮಾಡಲು ಯತ್ನಿಸಿದರೆ ಅಂಥ ಯಾವುದೇ ರಾಷ್ಟ್ರಕ್ಕೂ ಸಮರ್ಥ ಉತ್ತರ ಕೊಡಲು ಸಿದ್ಧವಿದೆ. ಈ ನಿಟ್ಟಿನಲ್ಲಿ ವಾಯುಪಡೆಯ ಬತ್ತಳಿಕೆಗೆ ರಫೇಲ್ ಯುದ್ಧವಿಮಾನ ಬಂದಿರುವುದು ಮಹತ್ವದ ಬೆಳವಣಿಗೆ. 60-70ರ ದಶಕದ ಮಿಗ್-21 ಫೈಟರ್ ವಿಮಾನಗಳನ್ನೇ ನೆಚ್ಚಿಕೊಂಡಿದ್ದ ವಾಯುಪಡೆಗೆ ರಫೇಲ್ ಇನ್ನಷ್ಟು ಶಕ್ತಿ ತುಂಬಿದೆ. ಹಲವು ಹಂತದ ಲೆಕ್ಕಾಚಾರ ಮತ್ತು ತಜ್ಞರ ಅಭಿಪ್ರಾಯದ ಪ್ರಕಾರವೇ ರಫೇಲ್ ಖರೀದಿಗೆ ನಿರ್ಧರಿಸಲಾಗಿದೆ. ಹಾಗಾಗಿ, ಈ ಬಗ್ಗೆ ರಾಜಕಾರಣ ಮಾಡಲು ಹೊರಟ ಕೆಲವರು ವಾಸ್ತವವನ್ನು ಅರ್ಥಮಾಡಿಕೊಳ್ಳಬೇಕು, ಮತ್ತು ಸೇನೆಯಂಥ ಸೂಕ್ಷ್ಮ ವಿಷಯಗಳಲ್ಲಿ, ಭದ್ರತೆಗೆ ಸಂಬಂಧಿಸಿ ರಾಜಕೀಯವನ್ನು ಬದಿಗಿಟ್ಟು ದೇಶಹಿತವನ್ನು ಮುಖ್ಯವಾಗಿಸಿಕೊಳ್ಳಬೇಕು.

ಈ ಎಲ್ಲ ಬೆಳವಣಿಗೆಗಳನ್ನು ಚೀನಾ, ಪಾಕಿಸ್ತಾನ ಗಮನಿಸುತ್ತಲೇ ಇವೆ. ಬಹುತೇಕ ಬಲಾಢ್ಯ ರಾಷ್ಟ್ರಗಳು ಅತ್ಯಾಧುನಿಕ ಯುದ್ಧವಿಮಾನಗಳನ್ನು ಹೊಂದಿರುವಾಗ ಭಾರತ ಕೂಡ ಆ ನಿಟ್ಟಿನಲ್ಲಿ ಬಲವಾದ ಹೆಜ್ಜೆ ಇರಿಸಿದೆ. ವಾಯುಪಡೆಯಂತೆಯೇ ನೌಕಾಪಡೆ ಮತ್ತು ಭೂಸೇನೆಗಳ ಆಧುನೀಕರಣದತ್ತಲೂ ಸರ್ಕಾರ ಮನಸ್ಸು ಮಾಡಲಿ. ಆ ಮೂಲಕ ಎಂಥ ಸನ್ನಿವೇಶವನ್ನೂ ಎದುರಿಸಲು ಭಾರತ ಆತ್ಮವಿಶ್ವಾಸದಿಂದ ಸನ್ನದ್ಧವಾಗಲಿ.