ತರೀಕೆರೆಯ ಸೈಬರ್ ಸೆಂಟರ್ ಬಳಿ ಗೃಹಲಕ್ಷ್ಮೀ ಯೋಜನೆಯ ನೋಂದಣಿಗೆ ನಿಂತಿರುವ ಮಹಿಳೆಯರು.  
ನ್ಯೂಸ್

ಗೃಹಲಕ್ಷ್ಮೀಯರ ಪರ್ಸ್‌ಗೆ ಕನ್ನ!

ರೀಕೆರೆ: ಸರ್ಕಾರದ ಉಚಿತ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ನೋಂದಣಿ ಗ್ರಾಪಂನ ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್ ಕೇಂದ್ರಗಳಲ್ಲಿ ಉಚಿತವಾಗಿ ಆಗಬೇಕಿತ್ತು. ಆದರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಹುತೇಕ ಕಡೆ ಸಿಬ್ಬಂದಿ ಕಳ್ಳಾಟದಿಂದಾಗಿ ಸೈಬರ್ ಸೆಂಟರ್‌ಗಳಲ್ಲಿ ನಿಯಮ ಬಾಹಿರವಾಗಿಯೇ ಸಲ್ಲಿಕೆಯಾಗುತ್ತಿದೆ. ಅಲ್ಲದೆ ಫಲಾನುಭವಿಗಳು ಹಣವನ್ನೂ ಕಳೆದುಕೊಳ್ಳುವಂತಾಗಿದೆ.

ಸರ್ಕಾರ ಯೋಜನೆಯನ್ನು ಅನುಷ್ಠಾನಗೊಳಿಸಿ ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್ ಕೇಂದ್ರಗಳಲ್ಲಿ ಮಾತ್ರ ಗೃಹಲಕ್ಷ್ಮೀ ಲಾನುಭವಿಗಳಿಗೆ ಉಚಿತ ನೋಂದಣಿಗೆ ಅವಕಾಶ ಕಲ್ಪಿಸಿದೆ. ಆದರೆ ಈ ಸೇವಾ ಕೇಂದ್ರಗಳ ಸಿಬ್ಬಂದಿ ಮೈಗಳ್ಳತನದಿಂದ ಸೈಬರ್ ಸೆಂಟರ್‌ಗಳ ಮಾಲೀಕರು ಹಣ ಮಾಡಿಕೊಳ್ಳುತ್ತಿದ್ದಾರೆ.
ಅಜ್ಜಂಪುರ ಹಾಗೂ ತರೀಕೆರೆ ತಾಲೂಕನ್ನು ಒಳಗೊಂಡ ಕ್ಷೇತ್ರದಲ್ಲಿ 49,356 ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಬಹುತೇಕ ಜನರು ಸೈಬರ್ ಸೆಂಟರ್‌ಗಳಲ್ಲೇ ಶುಲ್ಕ ಪಾವತಿಸಿ ನೋಂದಣಿ ಮಾಡಿಕೊಂಡಿದ್ದಾರೆ. ಅಡ್ಡದಾರಿಯಲ್ಲಿ ಸಂಪಾದನೆಗಿಳಿದವರ ಜೇಬು ಭರ್ತಿ ಮಾಡುತ್ತಿದ್ದಾರೆ.
ಬಾಪೂಜಿ ಸೇವಾ ಕೇಂದ್ರಗಳಲ್ಲಿ ನೋಂದಣಿ ಮಾಡಿಸಿಕೊಳ್ಳಲು ಆಗಮಿಸುತ್ತಿರುವ ಮಹಿಳೆಯರಿಗೆ ಅವರ ಮೊಬೈಲ್ ಸಂಖ್ಯೆಗೆ ಆಧಾರ್ ಕಾರ್ಡ್ ಜೋಡಣೆ ಆಗಿಲ್ಲವೆಂಬ ನೆಪವೊಡ್ಡಿ ಖಾಸಗಿ ಸೈಬರ್ ಸೆಂಟರ್ ದಾರಿ ತೋರಿಸುತ್ತಿದ್ದಾರೆ. ಈ ಮೂಲಕ ಕೆಲ ಗ್ರಾಪಂಗಳ ಬಾಪೂಜಿ ಸೇವಾ ಕೇಂದ್ರದ ಸಿಬ್ಬಂದಿ ಲಾಭ ಹಂಚಿಕೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ. ಸೈಬರ್ ಸೆಂಟರ್‌ಗಳ ಮಾಲೀಕರಿಗೆ ಗ್ರಾಪಂ ಸೇವಾ ಕೇಂದ್ರದ ಲಾಗಿನ್ ಐಡಿ ಹಾಗೂ ಪಾಸ್‌ವರ್ಡ್ ನೀಡುತ್ತಿದ್ದಾರೆ. ಸೈಬರ್ ಸೆಂಟರ್ ಮಾಲೀಕರು ತಮ್ಮ ಮೊಬೈಲ್ ಆ್ಯಪ್ ಮೂಲಕ ನೋಂದಣಿ ಮಾಡುವುದಾದರೆ ಡೇಟಾ ಎಂಟ್ರಿ ಆಪರೇಟರ್‌ಗಳಿಂದ ಒಟಿಪಿ ಪಡೆದು ನಿಯಮ ಬಾಹಿರವಾಗಿ ನೋಂದಣಿ ಪ್ರಕ್ರಿಯೆ ನಡೆಸುತ್ತಿದ್ದಾರೆ. ಅರ್ಜಿಯೊಂದಕ್ಕೆ 100ರಿಂದ 120 ರೂ. ಶುಲ್ಕ ಪಡೆದು ಸ್ವೀಕೃತಿ ಪತ್ರವನ್ನು ಸೈಬರ್ ಸೆಂಟರ್‌ನಲ್ಲೇ ನೀಡುತ್ತಿದ್ದಾರೆ. ಬಾಪೂಜಿ, ಗ್ರಾಮ ಒನ್ ಸೇವಾ ಕೇಂದ್ರ ಸಿಬ್ಬಂದಿ ಕಳ್ಳಾಟ ಮೇಲಧಿಕಾರಿಗಳ ಪಾರದರ್ಶಕ ಪರಿಶೀಲನೆಯಿಂದ ಮಾತ್ರ ಬಯಲಾಗಬೇಕಿದೆ.
ಪಟ್ಟಣ ಮಾತ್ರವಲ್ಲದೆ ತಾಲೂಕಿನ ಲಿಂಗದಹಳ್ಳಿ ಹೋಬಳಿ ವ್ಯಾಪ್ತಿಯ ಕೆಲ ಸೈಬರ್ ಸೆಂಟರ್‌ಗಳ ಜತೆ ನಿಕಟ ಸಂಪರ್ಕ ಸಾಧಿಸಿ ಏನೂ ಅರಿಯದ ವೃದ್ಧೆಯರು, ಅನಕ್ಷರಸ್ಥ ಮಹಿಳೆಯರ ಮುಗ್ಧತೆಯನ್ನೇ ಬಂಡವಾಳ ಮಾಡಿಕೊಳ್ಳಲಾಗುತ್ತಿದೆ. ಬಾಪೂಜಿ ಸೇವಾ ಕೇಂದ್ರಗಳಲ್ಲಿ ಯೋಜನೆಗಳನ್ನು ಸಮರ್ಪಕ ಮತ್ತು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ನಿಯೋಜನೆಗೊಂಡಿರುವ ಡೇಟಾ ಎಂಟ್ರಿ ಆಪರೇಟರ್‌ಗಳ ಕೈಚಳಕಕ್ಕೆ ಸಾರ್ವಜನಿಕರು ಶುಲ್ಕದ ಹೊರೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಸ್ವೀಕೃತಿ ಪತ್ರಕ್ಕೆ ಲ್ಯಾಮಿನೇಷನ್!: ಲಿಂಗದಹಳ್ಳಿ ಹೋಬಳಿ ವ್ಯಾಪ್ತಿಯ ಗ್ರಾಮ ಒನ್ ಸೇವಾ ಕೇಂದ್ರದಲ್ಲಿ ಗೃಹಲಕ್ಷ್ಮೀ ಯೋಜನೆಯ ನೋಂದಣಿ ಮಾಡಿಸಿಕೊಳ್ಳುತ್ತಿರುವ ಮಹಿಳೆಯರಿಗೆ ನೀಡುವ ಸ್ವೀಕೃತ ಪತ್ರದಲ್ಲೂ ಹಣದ ಸುಲಿಗೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ನೋಂದಣಿ ಬಳಿಕ ಲಾನುಭವಿಗೆ ನೀಡುವ ಸ್ವೀಕೃತಿ ಪತ್ರಕ್ಕೆ ಲ್ಯಾಮಿನೇಷನ್ ಅಗತ್ಯವೇ ಇಲ್ಲ. ಆದರೆ ಆ ಪತ್ರಕ್ಕೆ ಲ್ಯಾಮಿನೇಷನ್ ಮಾಡಿಕೊಟ್ಟು 80 ರೂ. ವಸೂಲಿ ಮಾಡಲಾಗುತ್ತಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಎಲ್ಲೆಲ್ಲಿ ನೋಂದಣಿ?:
ತಾಲೂಕಿನ 45 ಬಾಪೂಜಿ ಸೇವಾ ಕೇಂದ್ರ, 23 ಕರ್ನಾಟಕ ಗ್ರಾಮ ಒನ್, ಪುರಸಭೆಯಿಂದ ತೆರೆದಿರುವ 3 ಸೇವಾ ಕೇಂದ್ರಗಳು ಸೇರಿ ಒಟ್ಟು 71 ಸೇವಾ ಕೇಂದ್ರಗಳಲ್ಲಿ ಜು.20ರಿಂದ ಗೃಹಲಕ್ಷ್ಮೀ ಯೋಜನೆ ನೋಂದಣಿ ಪ್ರಕ್ರಿಯೆಗೆ ಅವಕಾಶ ಕಲ್ಪಿಸಲಾಗಿದೆ.
ಶೇ.86.32ರಷ್ಟು ಗುರಿ ಸಾಧನೆ: ಮಹಿಳೆಯರ ಸಬಲೀಕರಣ ಉದ್ದೇಶದಿಂದ ಅನುಷ್ಠಾನಗೊಳಿಸಿರುವ ಗೃಹಲಕ್ಷ್ಮೀ ಯೋಜನೆಗೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿ ನೋಂದಣಿ ಪ್ರಕ್ರಿಯೆ ಬಳಿಕ ಆ.30ರಂದು ಮೈಸೂರಿನಲ್ಲಿ ವಿಧ್ಯುಕ್ತವಾಗಿ ಚಾಲನೆ ನೀಡುತ್ತಿದೆ. ಅಜ್ಜಂಪುರ ಮತ್ತು ತರೀಕೆರೆ ತಾಲೂಕುಗಳನ್ನು ಒಳಗೊಂಡಿರುವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 59,176 ಅರ್ಹ ಕುಟುಂಬಗಳ ಪೈಕಿ ಈವರೆಗೆ 49,356 ಮಹಿಳೆಯರು ಅಗತ್ಯ ದಾಖಲೆ ಸಲ್ಲಿಸಿ ನೋಂದಣಿ ಮಾಡಿಕೊಂಡಿದ್ದಾರೆ. ಇವರೆಲ್ಲರಿಂದ ಸರ್ಕಾರ ತಿಂಗಳಿಗೆ 9.87 ಕೋಟಿ ರೂ. ಸಂದಾಯ ಮಾಡಬೇಕಿದೆ.
ಕೆಲವೊಂದು ಗ್ರಾಮ ಒನ್ ಕೇಂದ್ರಗಳಲ್ಲಿ ಗಹಲಕ್ಷ್ಮೀ ಯೋಜನೆಯ ಸ್ವೀಕೃತಿ ಪತ್ರಕ್ಕೆ ಲ್ಯಾಮಿನೇಷನ್ ಮಾಡಿ ಹಣ ಪಡೆಯುತ್ತಿರುವ ವಿಷಯ ಗೊತ್ತಿದೆ. ಲಾನುಭವಿಗಳು ನೋಂದಣಿಗೆ ಹಣ ಪಾವತಿಸುವುದಾಗಲಿ, ಹಣ ನೀಡಿ ಸ್ವೀಕೃತಿ ಪತ್ರಕ್ಕೆ ಲ್ಯಾಮಿನೇಷನ್ ಮಾಡಿಸಿಕೊಳ್ಳಬೇಕಿಲ್ಲ ಎಂದು ಸಿಡಿಪಿಒ ಕೆ.ಸಿ.ಜ್ಯೋತಿಲಕ್ಷ್ಮೀ ಹೇಳಿದರು.
ಬಾಪೂಜಿ ಕೇಂದ್ರಗಳಲ್ಲಿ ಉಚಿತವಾಗಿ ಗೃಹಲಕ್ಷ್ಮೀ ಯೋಜನೆಯ ನೋಂದಣಿ ಮಾಡಿಕೊಳ್ಳಲು ಸರ್ಕಾರವೇ ಅವಕಾಶ ಕಲ್ಪಿಸಿಕೊಟ್ಟಿದೆ. ಗ್ರಾಪಂ ಲಾಗಿನ್ ಮತ್ತು ಪಾಸ್‌ವರ್ಡ್‌ಗಳನ್ನು ಸೈಬರ್ ಸೆಂಟರ್‌ಗಳಲ್ಲಿ ಬಳಸಿ ನೋಂದಣಿ ಮಾಡುತ್ತಿರುವುದನ್ನು ಅಧಿಕಾರಿಗಳ ಮೂಲಕ ಪರಿಶೀಲಿಸಲಾಗುವುದು. ಇಂತಹ ಅಕ್ರಮ ನಡೆದಿದ್ದಾದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತರೀಕೆರೆ ಎಸಿ ಡಾ. ಕೆ.ಜೆ.ಕಾಂತರಾಜ್ ಎಚ್ಚರಿಸಿದರು.