ಬೆಂಗಳೂರು: ಕರೊನಾ ಸೋಂಕಿನ ಸರಪಳಿ ಮುರಿಯವ ಉದ್ದೇಶದಿಂದ ರಾಜ್ಯದಲ್ಲಿ ಕಠಿಣ ನಿರ್ಬಂಧಗಳು ಇಂದಿನಿಂದ ಜಾರಿಗೆ ಬಂದಿದ್ದು, ಸಂಸದರು-ಶಾಸಕರು ತಂತಮ್ಮ ಕ್ಷೇತ್ರದಲ್ಲೇ ಉಳಿದು ಪರಿಣಾಮಕಾರಿ ಅನುಷ್ಠಾನ ಖಚಿತಪಡಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಲಹೆ ನೀಡಿದ್ದಾರೆ.
ಜನರ ಜೀವ-ಜೀವನ ಸುರಕ್ಷತೆಗಾಗಿ ಕೈಗೊಂಡಿರುವ ಕಠಿಣ ನಿರ್ಬಂಧಗಳು ಯಶಸ್ವಿಯಾಗಿ ಜಾರಿಗೊಳಿಸುವ ಹಂತದಲ್ಲಿ ಏನಾದರೂ ಅಡತಡೆ, ಸಮಸ್ಯೆಗಳಿದ್ದರೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿ ಇಲ್ಲವೇ ನೇರವಾಗಿ ತಮ್ಮ ಗಮನಕ್ಕೆ ತರಬೇಕು ಎಂದು ತಿಳಿಸಿದ ಬಿಎಸ್ವೈ, ಎಲ್ಲರ ಸಹಕಾರವಿಲ್ಲದೆ ಸಫಲತೆ ಸಾಧ್ಯವಾಗದು ಎಂದು ಹೇಳಿದ್ದಾರೆ.
ಜನತೆಗೂ ಮನವಿ: "ವೈರಾಣು ಹರಡುವಿಕೆ ತಡೆಯಲು, ಕರೊನಾ ಹಿಮ್ಮೆಟ್ಟಿಸಲು, ಎಲ್ಲರೂ ಒಂದಾಗೋಣ. 14 ದಿನಗಳ ನಿರ್ಬಂಧ ಕಟ್ಟುನಿಟ್ಟಾಗಿ ಪಾಲಿಸೋಣ. ಮಾರ್ಗಸೂಚಿಯನ್ನು ತಪ್ಪದೆ ಪಾಲಿಸೋಣ" ಎಂದು ನಾಡಿನ ಜನತೆಗೆ ಸಿಎಂ ಬಿಎಸ್ವೈ ಕರೆ ನೀಡಿದ್ದು, "ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ" ಎಂದು ಮನವಿ ಮಾಡಿದ್ದಾರೆ.