ಬೆಂಗಳೂರು: ಭೂ ಕಬಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧದ ಪ್ರಕರಣಕ್ಕೆ
ಹೈಕೋರ್ಟ್ ಮಂಗಳವಾರ ಮಧ್ಯಂತರ ತಡೆ ನೀಡಿದೆ.
ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಜಾರಿಗೊಳಿಸಿದ್ದ ಸಮನ್ಸ್ ಹಾಗೂ ಪ್ರಕರಣ ರದ್ದುಪಡಿಸುವಂತೆ ಕೋರಿ ಚಲುವರಾಯಸ್ವಾಮಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಕೃಷ್ಣ ದೀಕ್ಷಿತ್ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಅರ್ಜಿದಾರರ ಪರ ವಕೀಲ ಸಿದ್ದಾರ್ಥ್ ಮುಚ್ಚಂಡಿ ವಾದ ಮಂಡಿಸಿ, ಮೊದಲಿಗೆ ಭೂಮಿ 1923ರಿಂದಲೂ ಅಸ್ವಿತ್ವದಲ್ಲಿದ್ದು, ಅದನ್ನು ಮೂಲ ಮಾಲೀಕರು ದೇವಾಲಯಕ್ಕೆ ಗಿಫ್ಟ್ ಡೀಡ್ ಮಾಡಿದ್ದರು. ತದನಂತರ ಆ ಜಮೀನನ್ನು ಸರ್ಕಾರ 1982ರಲ್ಲಿ ತಿಮ್ಮರಾಯಪ್ಪ ಅವರಿಗೆ ಮಂಜೂರು ಮಾಡಿದೆ. ಅದನ್ನು ಅರ್ಜಿದಾರರು ಖರೀದಿ ಮಾಡಿದ್ದಾರೆ. ಹಾಗಾಗಿ ಇದರಲ್ಲಿ ಒತ್ತುವರಿ ಪ್ರಶ್ನೆಯೇ ಬರುವುದಿಲ್ಲ ಎಂದರು.
ಅಲ್ಲದೆ, ಕಳೆದ ನೂರು ವರ್ಷಗಳ ದಾಖಲೆಗಳಲ್ಲಿ ಎಲ್ಲೂ ಕೂಡ ಆ ಭೂಮಿ ಕರಾಬು ಅಥವಾ ಕೆರೆ ಪ್ರದೇಶ ಎಂದು ಎಲ್ಲೂ ಸಹ ಉಲ್ಲೆಖವಾಗಿಲ್ಲ. ಇದೀಗ ಏಕಾಏಕಿ ಸರ್ವೆ ಮಾಡಿ ಅದು ಕೆರೆ ಜಾಗ ಎಂದು ಹೇಳಲಾಗುತ್ತಿದೆ. ಆದರೆ ಅದಕ್ಕೆ ಯಾವುದೇ ದಾಖಲೆಗಳಿಲ್ಲಎಂದು ವಾದಿಸಿದರು.
ಜತೆಗೆ ಮಂಜೂರಾದ ಭೂಮಿಯನ್ನು ಸರ್ಕಾರ ರದ್ದುಗೊಳಿಸಿಲ್ಲ, ಮಂಜೂರಾತಿ ಹಾಗೆಯೇ ಇದೆ. ಆದ್ದರಿಂದ ಒತ್ತುವರಿ ಪ್ರಶ್ನೆ ಉದ್ಭವಿಸುವುದಿಲ್ಲ. ಆದ್ದರಿಂದ ಈ ಪ್ರಕರಣದಲಿ ್ಲಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ ಅನ್ವಯಿಸಿರುವುದೇ ಕಾನೂನು ಬಾಹಿರ ಕ್ರಮವಾಗಿದೆ. ಆದ್ದರಿಂದ ವಿಚಾರಣೆ ಮತ್ತು ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಜಾರಿಗೊಳಿಸಿದ್ದ ಸಮನ್ಸ್ ರದ್ದುಗೊಳಿಸಬೇಕು ಎಂದು ನ್ಯಾಯಾಲಯವನ್ನು ಕೋರಿದ್ದರು.
ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ 2024ರ ಮಾ.28ರಂದು ಭೂ ಕಬಳಿಕೆ ಕುರಿತಾದ ವಿಶೇಷ ಕೋರ್ಟ್ ಹೊರಡಿಸಿದ್ದ ಸಮನ್ಸ್‌ಗೆ ಹಾಗೂ ಮುಂದಿನ ವಿಚಾರಣಾ ಪ್ರಕ್ರಿಯೆಗಳಿಗೆ ತಡೆ ನೀಡಿ ವಿಚಾರಣೆಯನ್ನು 2025 ರ ಜವನರಿಗೆ ಮುಂದೂಡಿತು.