ನ್ಯೂಸ್

ಉತ್ತಮ ಭವಿಷ್ಯಕ್ಕಾಗಿ ಮೊಬೈಲ್‌ನಿಂದ ದೂರವಿರಿ

ಅವಿನಾಶ್ ಜೈನಹಳ್ಳಿ

ಮೈಸೂರು: ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕಿದ್ದಲ್ಲಿ ವಿದ್ಯಾರ್ಥಿಗಳು ಮೊಬೈಲ್ ಬಳಕೆಯಿಂದ ದೂರ ಉಳಿಯಬೇಕು ಎಂದು ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಮನೋರೋಗ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಬೊ.ಎನ್.ರವೀಶ್ ಸಲಹೆ ನೀಡಿದರು.

ಭಾರತೀಯ ಬಹುಶಿಸ್ತೀಯ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ(ಐಐಎಂಆರ್‌ಡಿ), ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಮನೋರೋಗ ಚಿಕಿತ್ಸಾ ವಿಭಾಗ ವತಿಯಿಂದ ಮಹಾರಾಜ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ‘ಹದಿಹರೆಯದ ಮಕ್ಕಳಲ್ಲಿ ಮೊಬೈಲ್ ಫೋನ್ ವ್ಯಸನ: ಸಮಸ್ಯೆಗಳು ಮತ್ತು ಪರಿಹಾರ’ ವಿಷಯ ಕುರಿತು ಉಪನ್ಯಾಸ ನೀಡಿದರು.

ಕಲಿಕಾ ಸಮಯದಲ್ಲಿ ಮೊಬೈಲ್ ಬಳಕೆ ಅಪಾಯಕಾರಿ. ಅದು ವಿದ್ಯಾರ್ಥಿಗಳ ಸಾಧನೆಯ ಹಾದಿಗೆ ತೊಡಕುಂಟು ಮಾಡುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಮೊಬೈಲ್‌ನಿಂದ ದೂರವಿರಬೇಕು ಎಂದರು.

ಮೊಬೈಲ್ ಫೋನ್‌ಗಳು ವಿದ್ಯಾರ್ಥಿಗಳಿಗೆ ದೊಡ್ಡ ಅನನುಕೂಲತೆ ಉಂಟು ಮಾಡುತ್ತವೆ. ಮೊಬೈಲ್ ವ್ಯಸನವು ಅವರ ಅಧ್ಯಯನದ ಮೇಲೆ ಕೇಂದ್ರೀಕರಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು. ನಿಮ್ಮ ಫೋನ್‌ನಲ್ಲಿ ನಿರಂತರವಾಗಿ ಸಾಮಾಜಿಕ ಮಾಧ್ಯಮಕ್ಕೆ ಸಂಪರ್ಕ ಹೊಂದಿರುವುದು ಅಷ್ಟು ಆರೋಗ್ಯಕರವಲ್ಲ ಎಂದರು.

ಪ್ರಾಂಶುಪಾಲ ಡಾ.ಮಹೇಶ್, ಉಪನ್ಯಾಸಕ ಚನ್ನಕೇಶವ, ಐಐಎಂಆರ್‌ಡಿ ಅಧ್ಯಕ್ಷ ಡಾ.ಕುಮಾರಸ್ವಾಮಿ, ಕಾರ್ಯದರ್ಶಿ ಡಾ.ಎಸ್.ಲೋಕೇಶ್, ಟ್ರಸ್ಟಿ ಡಾ.ಎಂ.ಲೋಕೆಶ್, ಡಾ.ಶ್ರೀನಿವಾಸ್ ಇತರರಿದ್ದರು.