ಈದ್ಗಾ ಮೈದಾನವನ್ನು ರಕ್ಷಣೆ ಮಾಡುವಂತೆ ಒತ್ತಾಯಿಸಿ ಮುಸ್ಲಿಮರು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ಮನವಿ ಸಲ್ಲಿಸಿದರು. ಜಿ.ಕೆ.ಮಿಥುನ್‌ಕುಮಾರ್ ಇದ್ದರು. 
ನ್ಯೂಸ್

ಮೈದಾನದಲ್ಲಿ ಸದ್ಯಕ್ಕೆ ಯಥಾಸ್ಥಿತಿ

ಶಿವಮೊಗ್ಗ: ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿಗಿರುವ ಮೈದಾನದ ವಿವಾದ ಸೃಷ್ಟಿಯಾದ ಬೆನ್ನಲ್ಲೇ ಪೊಲೀಸ್ ಇಲಾಖೆ ಭದ್ರತೆ ಹೆಚ್ಚಿಸಿದೆ. ದಾಖಲೆಗಳ ಪರಿಶೀಲನೆ ಆಗುವವರೆಗೂ ಸಾರ್ವಜನಿಕರ ವಾಹನಗಳ ನಿಲುಗಡೆಯನ್ನೂ ನಿಷೇಧಿಸಿ ಜಿಲ್ಲಾಡಳಿತ ಆದೇಶಿಸಿದೆ. ತಿಲಕ್‌ನಗರದಿಂದ ಡಿಸಿ ಕಚೇರಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಬ್ಯಾರಿಕೇಡ್ ಹಾಕಿ ಸದ್ಯಕ್ಕೆ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಿದೆ.

ರಂಜಾನ್ ಹಬ್ಬದ ಸಾಮೂಹಿಕ ಪ್ರಾರ್ಥನೆ ಬಳಿಕ ಮೈದಾನಕ್ಕೆ ಬೇಲಿ ನಿರ್ಮಿಸಿದ್ದು ವಿವಾದಕ್ಕೆ ಕಾರಣವಾಯಿತು. ಮಂಗಳವಾರ ಇಡೀ ದಿನ ಹಿಂದುಪರ ಸಂಘಟನೆಗಳ ಮುಖಂಡರು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಮೈದಾನಕ್ಕೆ ಹಾಕಿದ್ದ ಬೇಲಿ ತೆರವುಗೊಳಿಸಿದ್ದ ಪೊಲೀಸರು, ತಡರಾತ್ರಿಯೇ ಮೈದಾನದ ಸುತ್ತ ವಾಹನಗಳ ಸಂಚಾರ ಬಂದ್ ಮಾಡಿದರು. ಮತ್ತೊಂದೆಡೆ ಮುಸ್ಲಿಮರು ಈ ಮೈದಾನ ವಕ್ಫ್ ಆಸ್ತಿ. ಮೈದಾನವನ್ನು ರಕ್ಷಣೆ ಮಾಡುವಂತೆ ಒತ್ತಾಯಿಸಿ ಬುಧವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಮೈದಾನಕ್ಕೆ ಸಾರ್ವಜನಿಕರ ವಾಹನಗಳು ತೆರಳದಂತೆ ಸೋಮವಾರ ತಡ ರಾತ್ರಿ ಬೇಲಿ ನಿರ್ಮಿಸಲಾಗಿತ್ತು. ಜಿಲ್ಲಾಧಿಕಾರಿ ಕಚೇರಿ ಎದುರಲ್ಲೇ ಇರುವ ಮೈದಾನಕ್ಕೆ ಬೇಲಿ ನಿರ್ಮಿಸಿದ್ದರಿಂದ ವಿವಾದ ಸೃಷ್ಟಿಯಾಗಿತ್ತು. ಮೈದಾನಕ್ಕೆ ಪೊಲೀಸ್ ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದು ಸಂಜೆ ನಂತರ ರಸ್ತೆಗೆ ಅಳವಡಿಸಿದ್ದ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಿ ವ್ಯಾಪಾರ ವಹಿವಾಟಿಗೆ ಅನುಕೂಲ ಮಾಡಿಕೊಡಲಾಯಿತು.

ವಿವಾದದ ಬಳಿಕ ಎಚ್ಚೆತ್ತುಕೊಂಡ ಜಿಲ್ಲಾಡಳಿತವು ಮರ್ಕಜಿ ಸುನ್ನಿ ಜಾಮಿಯಾ ಮಸ್ಜಿದ್ ಸಮಿತಿ ಪದಾಧಿಕಾರಿಗಳು, ಸಾರ್ವಜನಿಕರು ಹಾಗೂ ಅಧಿಕಾರಿಗಳ ಸಭೆ ನಡೆಸಿ ಕೆಲ ಪ್ರಮುಖ ನಿರ್ಣಯ ತೆಗೆದುಕೊಂಡಿದೆ. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ದಾಖಲೆಗಳಲ್ಲಿ ಮೈದಾನವು ವಕ್ಫ್ ಆಸ್ತಿ ಎಂದು ನಮೂದಾಗಿದೆ ಎಂದು ಸಮಿತಿಯವರು ಕೆಲ ದಾಖಲೆ ಸಲ್ಲಿಸಿದ್ದಾರೆ. ಈ ಬಗ್ಗೆ ಪಾಲಿಕೆ ದಾಖಲೆಗಳನ್ನೂ ಪರಿಶೀಲಿಸಲಾಗುವುದು. ಮೂಲ ದಾಖಲೆಗಳನ್ನೂ ಪರಿಶೀಲಿಸಿದ ನಂತರ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದರು.

ಸದ್ಯಕ್ಕೆ ಮೈದಾನದಲ್ಲಿ ವಾಹನಗಳ ನಿಲುಗಡೆಗೆ ಅವಕಾಶವಿಲ್ಲ. ಅಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಇಂದಿನ ಸಭೆಯಲ್ಲಿ ಮುಸ್ಲಿಮರು ಹಲವು ಸಮಸ್ಯೆಗಳ ಬಗ್ಗೆಯೂ ಗಮನಕ್ಕೆ ತಂದಿದ್ದಾರೆ. ಖಬರಸ್ಥಾನ್ ಜಮೀನಿನ ಬಗ್ಗೆಯೂ ಕೆಲವೊಂದು ಮಾಹಿತಿ ನೀಡಿದ್ದಾರೆ. ಎಲ್ಲವನ್ನೂ ಗಮನಿಸಿ ದಾಖಲೆ ಪರಿಶೀಲನೆಗೆ ಸಮಯ ಕೇಳಿದ್ದೇವೆ. ಅಲ್ಲಿಯವರೆಗೆ ಆ ಮೈದಾನದಲ್ಲಿ ಯಾವುದೇ ಚಟುವಟಿಕೆಗಳಿಗೆ ಅವಕಾಶವಿಲ್ಲ. ಈ ಆಸ್ತಿಗೆ ಸಂಬಂಧಿಸಿ ಇನ್ನೂ ಹೆಚ್ಚಿನ ಪರಿಶೀಲನೆ ಅಗತ್ಯ ಇರುವುದರಿಂದ ಸದ್ಯಕ್ಕೆ ಬ್ಯಾರಿಕೇಡ್ ಹಾಕಿ ಮೈದಾನವನ್ನು ರಕ್ಷಿಸಲಾಗುವುದು ಎಂದು ಹೇಳಿದರು.