ನವದೆಹಲಿ: ಕರೊನಾ ಸೋಂಕು ನಿಯಂತ್ರಿಸುವಲ್ಲಿ ಕರ್ನಾಟಕ ಸರ್ಕಾರ ಕೈಗೊಂಡ ಕ್ರಮಗಳನ್ನು ಶ್ಲಾಘಿಸಿರುವ ಕೇಂದ್ರ ಸರ್ಕಾರ, ಅದೇ ಕ್ರಮಗಳನ್ನು ಅನುಸರಿಸುವಂತೆ ಉಳಿದೆಲ್ಲ ರಾಜ್ಯಗಳಿಗೆ ಸಲಹೆ ನೀಡಿದೆ.
ಕರೊನಾ ಹಾವಳಿಯನ್ನು ನಿಯಂತ್ರಿಸಲು ಕರ್ನಾಟಕದಲ್ಲಿ ಸೋಂಕಿತರ ಸಂಪರ್ಕವನ್ನು ಪತ್ತೆ ಮಾಡುವ ಸಮಗ್ರ ಯೋಜನೆ, ಮನೆಮನೆಗೆ ತೆರಳಿ ಸಮೀಕ್ಷೆ, ಫೋನ್ ಮೂಲಕವೂ ಸರ್ವೇಕ್ಷಣೆ ಮುಂತಾದ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಸರ್ಕಾರದಿಂದ ನಡೆಯುವ ಪ್ರಯತ್ನಗಳ ವಿಷಯದಲ್ಲಿ ಕರ್ನಾಟಕ ಮಾದರಿಯಾಗಿದೆ. ವಿವಿಧ ಸಂಸ್ಥೆಗಳನ್ನು ಮತ್ತು ತಂತ್ರಜ್ಞಾನವನ್ನು ಅತ್ಯಂತ ಸಮರ್ಥವಾಗಿ ಅಳವಡಿಸಿಕೊಳ್ಳಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ಮುಕ್ತ ಕಂಠದಿಂದ ಪ್ರಶಂಸಿಸಿದೆ.