ಬೆಂಗಳೂರು: ಡಿಸೆಂಬರ್‌ನಲ್ಲಿ ಸಹೋದರನ ಮದುವೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಜಾಮೀನು ಮಂಜೂರು ಮಾಡುವಂತೆ ಕೋರಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪವಿತ್ರಾಗೌಡ ಹೈಕೋರ್ಟ್‌ಗೆ ಮೊರೆ ಹೋಗಿದ್ದಾರೆ.
ಈ ಕುರಿತಂತೆ ಮುಂದಿನ ಡಿಸೆಂಬರ್ 12 ಮತ್ತು 13ರಂದು ತನ್ನ ಸಹೋದರನ ಮದುವೆ ನಿಶ್ಚಿಯವಾಗಿರುವ ಹಿನ್ನೆಲೆಯಲ್ಲಿ ತಮಗೆ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿ ಪವಿತ್ರಾ ಗೌಡ ಅವರು ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದಾರೆ.
ಈ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರ ಏಕ ಸದಸ್ಯ ಪೀಠ, ಪ್ರಕರಣದ ತನಿಖೆ ನಡೆಸಿರುವ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾಧಿಕಾರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಡಿ.4ಕ್ಕೆ ಮುಂದೂಡಿದೆ.
ಸಹೋದರನ ಮದುವೆಯು ನಮ್ಮ ಕುಟುಂಬದ ಕಾರ್ಯಕ್ರಮವಾಗಿದೆ. ಹಾಗಾಗಿ ಇದೊಂದು ಭಾವನಾತ್ಮಕ ವಿಚಾರವಾಗಿದೆ. ವಿವಾಹದಲ್ಲಿ ಭಾಗಿಯಾಗದಿದ್ದರೆ ಭಾವನಾತ್ಮಕವಾಗಿ ನನಗೆ ಮತ್ತಷ್ಟು ಸಂಕಷ್ಟವಾಗಲಿದೆ. ವಿಚಾರಣೆಯ ಪ್ರಗತಿ, ದಾಖಲಾದ ಸಾಕ್ಷ್ಯಗಳು, ತಮ್ಮ ವೈಯಕ್ತಿಕ ಪಾತ್ರ, ಈಗಾಗಲೇ ಅನುಭವಿಸಿರುವ ಬಂಧನದ ಅವಧಿ ಮತ್ತು ಕೌಟುಂಬಿಕ ಪರಿಸ್ಥಿತಿಗಳನ್ನು ಪರಿಗಣಿಸಿ ಜಾಮೀನು ನೀಡಬೇಕೆಂದು ಪವಿತ್ರಾ ಗೌಡ ಕೋರಿದ್ದಾರೆ.
ಅಲ್ಲದೇ, ನಾನು ಬೆಂಗಳೂರಿನ ಶಾಶ್ವತ ನಿವಾಸಿಯಾಗಿದ್ದೇನೆ. ಪ್ರಕರಣಕ್ಕೆ ಸಂಬಂಧಿಸಿದ, ನ್ಯಾಯಾಲಯದ ಎಲ್ಲ ವಿಚಾರಣಾ ದಿನಾಂಕದಂದು ಹಾಜರಾಗುತ್ತೇನೆ. ಪ್ರಕರಣದ ಯಾವೊಂದು ಸಾಕ್ಷಿಯೊಂದಿಗೂ ಸಂಪರ್ಕ ಸಾಧಿಸಬಾರದು. ಸಾಕ್ಷ್ಯಗಳನ್ನು ತಿರುಚಬಾರದು ಎಂಬುದು ಸೇರಿ ನ್ಯಾಯಾಲಯ ವಿಧಿಸುವ ಯಾವುದೇ ಕಠಿಣ ಷರತ್ತುಗಳನ್ನು ಪಾಲಿಸಲು ಸಿದ್ಧನಿದ್ದೇನೆ ಎಂದು ಪವಿತ್ರಾ ಗೌಡ ನ್ಯಾಯಾಲಯಕ್ಕೆ ಭರವಸೆ ನೀಡಿದ್ದಾರೆ.
ಪ್ರಕರಣದಲ್ಲಿ ರೇಣುಕಾಸ್ವಾಮಿಗೆ ಚಪ್ಪಲಿಯಲ್ಲಿ ಹೊಡೆದಿದೆ ಎನ್ನಲಾದ ಪ್ರಕರಣವನ್ನು ಉಲ್ಲೇಖಿಸಿರುವ ಪವಿತ್ರಾಗೌಡ, ಪ್ರಕರಣದಲ್ಲಿನ ತಮ್ಮ ವೈಯಕ್ತಿಕ ಪಾತ್ರವನ್ನು ಸ್ವತಂತ್ರವಾಗಿ ಪರಿಗಣಿಸಬೇಕು. ತಮ್ಮ ಮೇಲೆ ಆರೋಪಿಸಲಾಗಿದೆ ಎಂದು ಹೇಳಲಾದ ಕೃತ್ಯಗಳು ಮತ್ತು ಇತರ ಆರೋಪಿಗಳು ಎಸಗಿದ್ದಾರೆಂದು ಹೇಳಲಾದ ಮಾರಕ ದೈಹಿಕ ಹಲ್ಲೆಗಳ ನಡುವಿನ ವ್ಯತ್ಯಾಸವು ಪ್ರಸ್ತುತವಾಗಿದೆ. ತನಿಖೆಯ ಸಮಯದಲ್ಲಿ ಪೊಲೀಸರ ಮುಂದೆ ಕರೆ ಮಾಡಿದಾಗ ಸ್ವಯಂಪ್ರೇರಣೆಯಿಂದ ಹಾಜರಾಗಿದ್ದೆ ಮತ್ತು ತನಿಖಾ ಸಂಸ್ಥೆಯಿಂದ ತಪ್ಪಿಸಿಕೊಳ್ಳಲಿಲ್ಲ. ನಮಗೆ 17 ವರ್ಷದ ಮಗಳು ಕುಶಿ ಗೌಡ ಇದಾಳೆ. ಆಕೆ ಮೊದಲನೇ ಪಿಯುಸಿಯಲ್ಲಿ ಓದುತ್ತಿದ್ದಾಳೆ. ಆಕೆಗೆ ಆರೈಕೆ ಮತ್ತು ಮಾರ್ಗದರ್ಶನ ಅಗತ್ಯವಿದೆ. ಇನ್ನೂ ವಯಸ್ಸಾದ ಪೋಷಕರಾದ ಪುಟ್ಟಣ್ಣ ಪಿ. ಮತ್ತು ಭಾಗ್ಯಮ್ಮ ಅವರಿದ್ದಾರೆ. ನನ್ನ ಜೈಲುವಾಸದಿಂದಾಗಿ ಅವರಿಗೆ ಸಾಕಷ್ಟು ಕಷ್ಟವನ್ನು ಅನುಭವಿಸುತ್ತಿದ್ದಾರೆ. ಹಾಗಾಗಿ ಜಾಮೀನು ನೀಡಬೇಕು ಎಂದು ಪವಿತ್ರಾ ಗೌಡ ಕೋರಿದ್ದಾರೆ
ಸಾಮಾಜಿಕ ತಾಣದಲ್ಲಿ ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸಿದ್ದನೆಂಬ ಕಾರಣಕ್ಕೆ ಅರ್ಜಿದಾರರು ಮತ್ತು ಇತರೆ ಆರೋಪಿಗಳು ಸೇರಿ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಪತ್ತೆ ಹಚ್ಚಿ, ಅಹಹರಿಸಿ ಕೊಲೆಗೆ ಸಂಚು ಹೂಡಿದ್ದರು ಎಂಬ ಆರೋಪವಿದೆ. ಮೃತ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿನ ರಾಜರಾಜೇಶ್ವರಿ ನಗರಕ್ಕೆ ಕರೆತಂದು ಚಪ್ಪಲಿಯಿಂದ ಹಲ್ಲೆ ನಡೆಸಿ ಇತರರನ್ನೂ ಪ್ರಚೋದಿಸಿದ್ದರು ಎಂಬ ಆರೋಪವಿದೆ.
ರೇಣುಕಾಸ್ವಾಮಿ ಕೊಲೆಯು 2024ರ ಜೂ.8ರಂದು ನಡೆದಿತ್ತು. ಪವಿತ್ರಾಗೌಡ ಜೂ.11ರಂದು ಬಂಧನಕ್ಕೆ ಒಳಗಾಗಿದ್ದರು. ನಂತರ ಹೈಕೋರ್ಟ್ ಜಾಮೀನು ನೀಡಿದ್ದು, ಅದನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದ ಹಿನ್ನೆಲೆಯಲ್ಲಿ ಪವಿತ್ರಾ ಗೌಡ 2025ರ ಆ.15ರಿಂದ ಮತ್ತೆ ಜೈಲು ಸೇರಿದ್ದರು.
ಆರೋಪಿ ಪವಿತ್ರಾಗೌಡ ಅವರಿಗೆ ಸಂಬಂಧಿಸಿದ ಕ್ರಿಮಿನಲ್ ಅರ್ಜಿಯು ಬೆಂಗಳೂರಿನ 58ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.