ಉನ್ನತ ಶಿಕ್ಷಣ Google photo
ರಾಜ್ಯ

ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿಗೆ ‘ವಿದ್ಯಾರ್ಥಿ ಅಭಿವೃದ್ಧಿ ಮಾದರಿ’: ವಿನೂತನ ಮಾದರಿಗೆ ಸಮಿತಿ ರಚನೆ

ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ, ತಾಂತ್ರಿಕ ಕೌಶಲ, ಉದ್ಯೋಗಾರ್ಹತೆ ಮತ್ತು ವೃತ್ತಿ ಅವಕಾಶಗಳನ್ನು ಹೆಚ್ಚಿಸಲು ಉನ್ನತ ಶಿಕ್ಷಣ ಇಲಾಖೆಯು ರಾಜ್ಯದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ‘ಸಮಗ್ರ, ಫಲಿತಾಂಶ ಆಧಾರಿತ ವಿದ್ಯಾರ್ಥಿ ಅಭಿವೃದ್ಧಿ ಮಾದರಿ’ಯನ್ನು ರೂಪಿಸುತ್ತಿದೆ.

ಬೆಂಗಳೂರು: ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ, ತಾಂತ್ರಿಕ ಕೌಶಲ, ಉದ್ಯೋಗಾರ್ಹತೆ ಮತ್ತು ವೃತ್ತಿ ಅವಕಾಶಗಳನ್ನು ಹೆಚ್ಚಿಸಲು ಉನ್ನತ ಶಿಕ್ಷಣ ಇಲಾಖೆಯು ರಾಜ್ಯದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ‘ಸಮಗ್ರ, ಫಲಿತಾಂಶ ಆಧಾರಿತ ವಿದ್ಯಾರ್ಥಿ ಅಭಿವೃದ್ಧಿ ಮಾದರಿ’ಯನ್ನು ರೂಪಿಸುತ್ತಿದೆ.

ಸಾಂಪ್ರದಾಯಿಕ ತರಗತಿ ಕಲಿಕೆಯನ್ನು ಮೀರಿ, ವಿದ್ಯಾರ್ಥಿಗಳ ಕೌಶಲ ಮತ್ತು ಉದ್ಯೋಗ ಸಿದ್ಧತೆಯನ್ನು ಅಳೆಯಬಹುದಾದ ‘ವಿದ್ಯಾರ್ಥಿ-ಕೇಂದ್ರಿತ ಅಭಿವೃದ್ಧಿ ವ್ಯವಸ್ಥೆ’ ಜಾರಿಗೆ ತರುವುದು ಸರ್ಕಾರದ ಉದ್ದೇಶವಾಗಿದೆ.

ಇದಕ್ಕಾಗಿ ಸಮಿತಿ ರಚಿಸಲಾಗಿದ್ದು, ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಿ, ಅವರ ಅಗತ್ಯಗಳಿಗೆ ಅನುಗುಣವಾಗಿ ವೈಯಕ್ತಿಕ ಅಭಿವೃದ್ಧಿ ಯೋಜನೆ ರೂಪಿಸಲಿದೆ. ಸಂವಹನ ಕೌಶಲ, ನಾಯಕತ್ವ, ಸಮಸ್ಯೆ ಪರಿಹಾರ, ತಂಡದ ಕಾರ್ಯನಿರ್ವಹಣೆ ಹಾಗೂ ವೃತ್ತಿಪರ ನೈತಿಕತೆಗೂ ಆದ್ಯತೆ ನೀಡಲಿದೆ.

ವಿದ್ಯಾರ್ಥಿಗಳ ಪ್ರಗತಿಗೆ ಡಿಜಿಟಲ್ ಪ್ರೊೈಲ್

ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಕೌಶಲ, ಸಾಧನೆ ಮತ್ತು ಕಲಿಕೆಯಲ್ಲಿ ಎದುರಾಗುವ ಕೊರತೆಗಳನ್ನು ದಾಖಲಿಸಲು ನಿರಂತರವಾಗಿ ನವೀಕರಿಸುವ ಡಿಜಿಟಲ್ ಪ್ರೊಫೈಲ್‌ಗಳನ್ನು ರೂಪಿಸಲಾಗುತ್ತದೆ. ಕೃತಕ ಬುದ್ಧಿಮತ್ತೆ (ಎಐ) ನೆರವಿನಿಂದ ಕಲಿಕೆಯಲ್ಲಿನ ಸಮಸ್ಯೆಗಳನ್ನು ಗುರುತಿಸಿ, ಮಾರ್ಗದರ್ಶನ, ಹೆಚ್ಚುವರಿ ತರಬೇತಿ ಮತ್ತು ಮರುಮೌಲ್ಯಮಾಪನಕ್ಕೆ ಅವಕಾಶ ಕಲ್ಪಿಸುವ ಉದ್ದೇಶವಿದೆ.

ವಿದ್ಯಾರ್ಥಿಗಳ ಆಸಕ್ತಿ ಮತ್ತು ವೃತ್ತಿ ಗುರಿಗಳಿಗೆ ಅನುಗುಣವಾಗಿ ಉದ್ಯೋಗ, ಇಂಟರ್ನ್‌ಶಿಪ್, ಸಂಶೋಧನೆ, ಉದ್ಯಮಶೀಲತೆ ಹಾಗೂ ಉನ್ನತ ಶಿಕ್ಷಣಕ್ಕೆ ಅಗತ್ಯವಾದ ಅಭಿವೃದ್ಧಿ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗುತ್ತದೆ. ಕಾಲೇಜುಗಳ ಕಾರ್ಯನಿರ್ವಹಣೆ ಮತ್ತು ಸುಧಾರಣೆಗಳ ಅನುಷ್ಠಾನ ಮೇಲ್ವಿಚಾರಣೆಗಾಗಿ ಕೇಂದ್ರೀಕೃತ ಡಿಜಿಟಲ್ ಪೋರ್ಟಲ್ ಅನ್ನೂ ರೂಪಿಸಲಾಗುತ್ತದೆ.

ಸಮಿತಿಯಲ್ಲಿ ಯಾರೆಲ್ಲ ಇದ್ದಾರೆ?

ಉನ್ನತ ಶಿಕ್ಷಣ ಇಲಾಖೆಯ ಯುಯುಸಿಎಂಎಸ್‌ನ ಪ್ರೊ. ಭಾಗ್ಯವಾನ್, ಐಐಟಿ ಮದ್ರಾಸ್‌ನ ಪ್ರೊ. ಎಡಮನಾ ಪ್ರಸಾದ್, ತಮಿಳುನಾಡಿನ ಬನ್ನಾರಿ ಅಮ್ಮನ್ ತಾಂತ್ರಿಕ ಸಂಸ್ಥೆಯ ಡಾ. ಅಮರ ಕಾರ್ತಿಕ್ ಎ., ಯೋಗಿ ವೇಮನ ವಿವಿ ಪ್ರೊ. ವಿ. ರಾಮಕೃಷ್ಣ, ಎಸ್‌ಕೆಎಸ್‌ಜೆಟಿಐನ ಪ್ರೊ. ಕಿರಣ್ ಕುಮಾರ್ ಬಿ.ವಿ. ಹಾಗೂ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ. ಶಿವಶಂಕರ ಅವರು ಸಮಿತಿಯಲ್ಲಿದ್ದಾರೆ. ತಾಂತ್ರಿಕ ಶಿಕ್ಷಣ ನಿರ್ದೇಶಕರು ಅನುಷ್ಠಾನದ ಸಮನ್ವಯ ಮತ್ತು ಮೇಲ್ವಿಚಾರಣೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ.

ಸರ್ಕಾರಿ ಕಾಲೇಜಲ್ಲಿ 1,400 ಸೀಟು ಉಳಿಕೆ

ರಾಜ್ಯದಲ್ಲಿರುವ 17 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ 2026-27ನೇ ಸಾಲಿನಲ್ಲಿ ಕೆಇಎ ಒಟ್ಟು 4,704 ಇಂಜಿನಿಯರಿಂಗ್ ಸೀಟುಗಳನ್ನು ಪ್ರಕಟಿಸಿತ್ತು. ಈ ಪೈಕಿ 3,302 ಸೀಟುಗಳು ಭರ್ತಿಯಾಗಿವೆ. ಉಳಿದ 1,402 ಸೀಟುಗಳು ಖಾಲಿ ಇವೆ. ಪರ್ಯಾಯವಾಗಿ ಏನೆಲ್ಲ ಬದಲಾವಣೆ ಮಾಡಬಹುದು ಎಂದು ಸಮಿತಿ ಚಿಂತನೆ ನಡೆಸಲಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಸರ್ಕಾರಿ ಇಂಜಿನಿಯರಿಂಗ್ ಕಾಲೇಜಗಳ ಬಲವರ್ಧನೆ ಜತೆಗೆ ವಿದ್ಯಾರ್ಥಿಗಳಿಗೆ ಕೌಶಲಪೂರ್ಣ ಕಲಿಕೆಯಾಗಬೇಕು. ಈ ನಿಟ್ಟಿನಲ್ಲಿ ಸಾಕಷ್ಟು ಚರ್ಚೆ ನಡೆಸಿ ಈ ತಜ್ಞರ ಸಮಿತಿ ರಚಿಸಲಾಗಿದೆ. ಪಠ್ಯಕ್ರಮ ಬದಲಾವಣೆ, ತಂತ್ರಜ್ಞಾನದ ಬೋಧನೆ ಸೇರಿ ಹಲವು ವಿನೂತನ ಕ್ರಮಗಳನ್ನು ಅಳವಡಿಸಿಕೊಳ್ಳಬೇಕಿದೆ. - ಬಸವರಾಜ ರಾಯರಡ್ಡಿ, ಉನ್ನತ ಶಿಕ್ಷಣ ಸಚಿವ