ಬೆಂಗಳೂರು: ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳ ಗ್ರಂಥಾಲಯಗಳಿಗೆ ಸಮಗ್ರ ಶಿಕ್ಷಣ ಕರ್ನಾಟಕ ವತಿಯಿಂದ ಮಕ್ಕಳ ಪುಸ್ತಕ ಪ್ರಕಾಶಕರಿಂದ ಪುಸ್ತಕಗಳನ್ನು ಆಹ್ವಾನಿಸಿದೆ.
ನೋಂದಾಯಿತ ಪ್ರಕಾಶಕರು 2025ನೇ ಸಾಲಿನಲ್ಲಿ ಪ್ರಕಟಗೊಂಡಿರುವ ಪುಸ್ತಕಗಳನ್ನು ಮಾತ್ರ ಕಳುಹಿಸಬೇಕು. ಶಾಲಾ ಮಕ್ಕಳಿಗೆ ಉಪಯುಕ್ತವಾಗಿರುವ ಕನ್ನಡ ವತ್ತು ಇಂಗ್ಲಿಷ್ ಪುಸ್ತಕಗಳನ್ನು ಪರಿಗಣಿಸಲಾಗುತ್ತದೆ. ಕತೆ, ಕಾದಂಬರಿ, ನಾಟಕ, ಮಕ್ಕಳ ಸಾಹಿತ್ಯ, ಕೃತಕ ಬುದ್ಧಿಮತ್ತೆ (ಎಐ), ಮೌಲ್ಯ ಶಿಕ್ಷಣ ಹಾಗೂ ಇತರೆ ಶೈಕ್ಷಣಿಕ ಮತ್ತು ಮೌಲ್ಯಾಧಾರಿತ ಪುಸ್ತಕಗಳಿಗೆ ಆದ್ಯತೆ ನೀಡಲಾಗುತ್ತದೆ.
ಮಕ್ಕಳ ಮಟ್ಟಕ್ಕೆ ಅನುಗುಣವಾಗಿ ಗರಿಷ್ಠ 50 ಪುಸ್ತಕಗಳನ್ನು ಮಾತ್ರ ಆಯ್ಕೆಗಾಗಿ ಪರಿಗಣಿಸಲಾಗುತ್ತದೆ.
ಪುಸ್ತಕಗಳ ಆಯ್ಕೆ ಹಾಗೂ ಅವುಗಳ ಬೆಲೆ ನಿಗದಿ ವಿಷಯದಲ್ಲಿ ಎಸ್‌ಎಸ್‌ಕೆ ಕಚೇರಿ ತೀರ್ಮಾನವೇ ಅಂತಿಮವಾಗಿರುತ್ತದೆ. ಈ ಬಗ್ಗೆ ಪ್ರಕಾಶಕರು ಮುಚ್ಚಳಿಕೆ ಸಲ್ಲಿಸಬಹುದು ಎಸ್‌ಎಸ್‌ಕೆ ರಾಜ್ಯ ಯೋಜನಾ ನಿರ್ದೇಶಕಿ ಕೆ. ವಿದ್ಯಾಕುಮಾರಿ ಪ್ರಕಟಣೆ ಹೊರಡಿಸಿದ್ದಾರೆ.