ರಾಜ್ಯ

ವಿಕಾಸವಲ್ಲ ವಿನಾಶ!

ಈಗ ಅದೇ ನದಿಗಳ ತಿರುವು ಯೋಜನೆ ಮುನ್ನೆಲೆಗೆ ಬಂದಿದೆ. ಬೇಡ್ತಿ, ಅಘನಾಶಿನಿ, ಕಾಳಿ ನದಿ ನೀರುಗಳನ್ನು ತಿರುಗಿಸುವ ಪ್ರಸ್ತಾವಗಳು ಸರ್ಕಾರದ ಮುಂದಿವೆ. ಸದ್ಯ ಬೇಡ್ತಿ ನದಿ ತಿರುವು ಯೋಜನೆ ಡಿಪಿಆರ್ ತಯಾರಿಕೆ ಹಂತಕ್ಕೆ ತಲುಪಿದ್ದು, ಅದಕ್ಕಾಗಿ ಡ್ರೋನ್ ಸರ್ವೆಗೆ ಸಿದ್ಧತೆ ನಡೆದಿದೆ.

| ಸುಭಾಸ ಧೂಪದಹೊಂಡ, ಕಾರವಾರ

ಉತ್ತರ ಕನ್ನಡ ಜಿಲ್ಲೆ ನೈಸರ್ಗಿಕವಾಗಿ ಶ್ರೀಮಂತವಾಗಿದೆ. ಇಲ್ಲಿನ ಕಾಡು, ನೀರು, ಸಮುದ್ರ ಮುಂತಾದ ಸಂಪತ್ತುಗಳ ಮೇಲೆ ಮೊದಲಿನಿಂದಲೂ ಬಾಹ್ಯ ಶಕ್ತಿಗಳ ಕಣ್ಣಿದೆ. ಆಗ ಪೋರ್ಚುಗೀಸರು, ಬ್ರಿಟಿಷರು ಮರಮಟ್ಟುಗಳ ಲೂಟಿಗೆ ಇಲ್ಲಿಗೆ ಲಗ್ಗೆ ಇಟ್ಟಿದ್ದರು. ಈಗ ಯೋಜನೆಗಳ ಹೆಸರಿನಲ್ಲಿ ನೀರು, ಖನಿಜ ಮುಂತಾದ ವಸ್ತುಗಳ ಮೇಲೆ ಕಣ್ಣು ಬಿದ್ದಿದೆ. ಆಸ್ಪತ್ರೆ, ರಸ್ತೆ, ರೈಲು ಮುಂತಾದ ಮೂಲಸೌಕರ್ಯಗಳಿಗೆ ನೂರಿನ್ನೂರು ಕೋಟಿ ಕೊಡಲು ಹಿಂಜರಿಯುವ ಸರ್ಕಾರಗಳು ಇಲ್ಲಿನ ನೈಸರ್ಗಿಕ ಸಂಪತ್ತು ಬಳಸುವ ಯೋಜನೆಗಳಿಗೆ ಸಾವಿರ ಕೋಟಿ ಹೂಡಲು ಉತ್ಸುಕರಾಗಿರುವುದೇಕೆ? ಹೋರಾಟದ ಮೂಲಕ ಒಂದು ಯೋಜನೆಯನ್ನು ಓಡಿಸುವ ಹೊತ್ತಿಗೆ ಮತ್ತೊಂದು ಯೋಜನೆ ಬರುತ್ತಿದೆ.

1990ರ ದಶಕದಲ್ಲಿ ಬೇಡ್ತಿ, ಅಘನಾಶಿನಿಗೆ ಅಣೆಕಟ್ಟೆ ಕಟ್ಟಿ, ಜಲವಿದ್ಯುತ್ ಉತ್ಪಾದಿಸುವ ಯೋಜನೆಗೆ ಕರ್ನಾಟಕ ವಿದ್ಯುತ್ ನಿಗಮ ಮುಂದಾಗಿತ್ತು. ಆಗ ಅಸ್ತಿತ್ವಕ್ಕೆ ಬಂದ ಬೇಡ್ತಿ, ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ, ಸೋಂದಾ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳ ನೇತೃತ್ವದಲ್ಲಿ ಪರಿಣಾಮಕಾರಿ ಹೋರಾಟ ಕೈಗೊಂಡು, ಅಣೆಕಟ್ಟು ನಿರ್ಮಾಣ ನಿಲ್ಲಿಸುವಲ್ಲಿ ಯಶಸ್ವಿಯಾಗಿತ್ತು. ಈಗ ಅದೇ ನದಿಗಳ ತಿರುವು ಯೋಜನೆ ಮುನ್ನೆಲೆಗೆ ಬಂದಿದೆ. ಬೇಡ್ತಿ, ಅಘನಾಶಿನಿ, ಕಾಳಿ ನದಿ ನೀರುಗಳನ್ನು ತಿರುಗಿಸುವ ಪ್ರಸ್ತಾವಗಳು ಸರ್ಕಾರದ ಮುಂದಿವೆ. ಸದ್ಯ ಬೇಡ್ತಿ ನದಿ ತಿರುವು ಯೋಜನೆ ಡಿಪಿಆರ್ ತಯಾರಿಕೆ ಹಂತಕ್ಕೆ ತಲುಪಿದ್ದು, ಅದಕ್ಕಾಗಿ ಡ್ರೋನ್ ಸರ್ವೆಗೆ ಸಿದ್ಧತೆ ನಡೆದಿದೆ.

ಬಯಲುನಾಡಿನ ಪ್ರದೇಶದಲ್ಲಿ ಯೋಜನೆ ಜಾರಿಗೆ ಒತ್ತಾಯವಿದ್ದರೆ, ಉತ್ತರ ಕನ್ನಡದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ದೆಹಲಿವರೆಗೂ ಹೋಗಿ ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೂ ಯೋಜನೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಇದರಿಂದ ಕೊಳ್ಳ ಸಂರಕ್ಷಣಾ ಸಮಿತಿ ಹೋರಾಟ ತೀವ್ರಗೊಳಿಸುತ್ತಿದೆ. ಇಷ್ಟು ದಿನ ಬೇಡ್ತಿ, ಅಘನಾಶಿನಿ ಕೊಳ್ಳಗಳಲ್ಲಿ ನಡೆದ ಹೋರಾಟ ಈಗ ರಾಜಧಾನಿವರೆಗೂ ತಲುಪುತ್ತಿದೆ. ಬೇಡ್ತಿ, ಅಘನಾಶಿನಿ ನದಿಗಳ ತಿರುವು ವಿರೋಧಿಸಿ ಅ.10ರಂದು ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ದೊಡ್ಡ ಮಟ್ಟದ ಹೋರಾಟಕ್ಕೆ ಸಿದ್ಧತೆ ನಡೆದಿದೆ.

ನದಿ ಜೋಡಣೆಯಿಂದ ಮಲೆನಾಡು, ಕರಾವಳಿಯ ಜನಜೀವನದ ಮೇಲೆ ಭಾರಿ ದುಷ್ಪರಿಣಾಮ ಉಂಟಾಗಲಿದೆ. ಯೋಜನೆಯ ಎಲ್ಲ ಭಾಗದ ಜನ ಈ ಯೋಜನೆ ವಿರುದ್ಧ ಹೋರಾಟಕ್ಕೆ ಮುಂದಾಗಬೇಕು. | ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸೋಂದಾ ಸ್ವರ್ಣವಲ್ಲೀ ಮಠ

ನೌಕಾ ಯೋಜನೆಗೆ ನೀರಿನ ಅಭಾವ

ಕಾರವಾರದ ಕದಂಬ ಏಷ್ಯಾದ ಬೃಹತ್ ನೌಕಾನೆಲೆಯಾಗಿ ಅಭಿವೃದ್ಧಿಯಾಗುತ್ತಿದೆ. ಪ್ರಸ್ತುತ 15 ಪ್ರಮುಖ ಯುದ್ಧ ನೌಕೆಗಳು ಇಲ್ಲಿವೆ. ವಿಸ್ತರಣೆ ಕಾಮಗಾರಿ ಮುಕ್ತಾಯ ವಾಗುವ ಹೊತ್ತಿಗೆ 50 ಯುದ್ಧ ಹಡಗುಗಳು ಸೀಬರ್ಡ್​ನಲ್ಲಿ ನೆಲೆಯಾಗಲಿವೆ. ಸುಮಾರು 1 ಲಕ್ಷ ಉದ್ಯೋಗಿಗಳು ಬಂದು ಸೇರಲಿದ್ದಾರೆ. ಹಡಗುಗಳಿಗೆ ತುಂಬಲು ದೊಡ್ಡ ಪ್ರಮಾಣದಲ್ಲಿ ನೀರು ಬೇಕು. ಸದ್ಯ ಕದಂಬ ನೌಕಾನೆಲೆಗೆ ಗಂಗಾವಳಿ ನದಿಯಿಂದ ದಿನಕ್ಕೆ 120 ದಶಲಕ್ಷ ಲೀಟರ್ (ಎಂಎಲ್​ಡಿ) ನೀರು ಒದಗಿಸಲಾಗುತ್ತಿದೆ. ಬೇಸಿಗೆಯಲ್ಲಿ ನೌಕಾ ಯೋಜನೆಗೂ ನೀರಿನ ಅಭಾವ ಉಂಟಾಗುತ್ತದೆ. 2019ರಲ್ಲಿ ನೀರಿನ ಕೊರತೆಯಿಂದಾಗಿ ಕಾರವಾರದ ಯುದ್ಧನೌಕೆಗಳನ್ನು ಮುಂಬೈಗೆ ಕಳಿಸಲಾಗಿತ್ತು. ಐದಾರು ವರ್ಷಗಳಲ್ಲಿ ನೌಕಾನೆಲೆಯ ನೀರಿನ ಬೇಡಿಕೆ ದುಪ್ಪಟ್ಟಾಗಲಿದೆ. ಅಲ್ಲದೆ, ಅಂಕೋಲಾದಲ್ಲಿ ವಿಮಾನ ನಿಲ್ದಾಣ, ವಾಣಿಜ್ಯ ಬಂದರು ಕಾಮಗಾರಿಗೆ ಸಿದ್ಧತೆ ನಡೆದಿದೆ. ಅವೆಲ್ಲಕ್ಕೆ ನೀರು ಎಲ್ಲಿಂದ ಎಂಬ ಪ್ರಶ್ನೆ ಮೂಡಿದೆ.

ನದಿ ತಿರುವಿನ ಆತಂಕಗಳು

  • ಭೂ ಕುಸಿತ ವಲಯದಲ್ಲೇ ಯೋಜನೆ ಜಾರಿಯಾಗುತ್ತಿದೆ. ಪಶ್ಚಿಮ ಘಟ್ಟದ ತಪ್ಪಲನ್ನು ಬಗೆದು ಸುರಂಗ, ಕಾಲುವೆ, ಪೈಪ್​ಲೈನ್ ಮಾಡುವುದರಿಂದ ಭಾರಿ ಪ್ರಮಾಣದ ಭೂ ಕುಸಿತ ಸಾಧ್ಯತೆ.

  • 100ರಿಂದ 823 ಹೆಕ್ಟೇರ್​ವರೆಗೆ ಅರಣ್ಯ ನಾಶ. ಲಕ್ಷಾಂತರ ಮರಗಳಿಗೆ ಕೊಡಲಿ. ವನ್ಯಜೀವಿಗಳ ಆವಾಸಕ್ಕೆ ಆಪತ್ತು.

  • ಕರಾವಳಿಯ ಕಾರವಾರ, ಅಂಕೋಲಾ, ಗೋಕರ್ಣ ಪ್ರದೇಶಗಳಿಗೆ, ಸೀಬರ್ಡ್​ನಂಥ ಬೃಹತ್ ಯೋಜನೆ ಗಳಿಗೆ ಕುಡಿಯುವ ನೀರಿನ ತುಟಾಗ್ರತೆ ಉಂಟಾಗಲಿದೆ. ಶಿರಸಿ, ಯಲ್ಲಾಪುರಕ್ಕೂ ನೀರಿನ ಕೊರತೆ.

  • ಕರಾವಳಿಯ ಮೀನುಗಾರಿಕೆ, ಜನಜೀವನದ ಮೇಲೆ ದುಷ್ಪರಿಣಾಮ, ಮಲೆನಾಡಿನ ಅಡಿಕೆ ತೋಟ ಸೇರಿದಂತೆ ಕೃಷಿಗೆ ನೀರಿನ ಅಭಾವ, ಬಾವಿ, ಅಂತರ್ಜಲ ಬತ್ತುವ ಆತಂಕ.

  • ಪ್ರವಾಸೋದ್ಯಮ, ಜನಜೀವನದ ಮೇಲೆ ಭಾರಿ ದುಷ್ಪರಿಣಾಮ.

ಕುಡಿಯುವ ನೀರಿಗೆ ತತ್ವಾರ

ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಅಭಾವವಾಗಲಿದೆ ಎಂದು ಗಂಗಾವಳಿ ನದಿಯಿಂದ ನೀರು ಪಡೆಯುವ ಕೃಷಿಕರ ಪಂಪ್​ಸೆಟ್​ಗಳನ್ನು ಸ್ಥಗಿತ ಮಾಡಲಾಗುತ್ತದೆ. ಪ್ರಸ್ತುತ ಸ್ಥಳೀಯ ಬೇಡಿಕೆ ಈಡೇರಿಸುವಷ್ಟೂ ನೀರು ಬೇಡ್ತಿ, ಗಂಗಾವಳಿಯಲ್ಲಿಲ್ಲ. ಬೇಡ್ತಿಯಿಂದ ಯಲ್ಲಾಪುರಕ್ಕೆ ನೀರೊದಗಿಸುವ ಯೋಜನೆ ನೀರಿನ ಅಭಾವದಿಂದ ವಿಫಲವಾಗಿದೆ. ಹೀಗಿರುವಾಗ ನದಿ ನೀರನ್ನು ಇನ್ನೆಲ್ಲೋ ಕೊಂಡೊಯ್ಯುತ್ತೇವೆ ಎಂಬುದು ಮೂರ್ಖತನದ ನಿರ್ಧಾರವಾಗಿದೆ ಎನ್ನುತ್ತಾರೆ ರೈತ ಮುಖಂಡ ಶಿವರಾಮ ಗಾಂವಕರ್. ವಾಸಕುದ್ರಿಗೆ, ಗೋಕರ್ಣ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು. ಕಾರವಾರ, ಅಂಕೋಲಾ ಶಹರ ನೀರು ಸರಬರಾಜು ಯೋಜನೆಗಳಿಗೆ ಗಂಗಾವಳಿ ನೀರೇ ಆಧಾರ. ಪ್ರಸ್ತುತ 300 ಎಂಎಲ್​ಡಿ ನೀರನ್ನು ಗಂಗಾವಳಿಯಿಂದ ವಿವಿಧೆಡೆ ಕುಡಿಯಲು ಪೂರೈಸಲಾಗುತ್ತದೆ. ಬೇಸಿಗೆಯಲ್ಲಿ ಅಷ್ಟು ನೀರು ಸಿಗುವುದು ಕಷ್ಟ. ಇದರಿಂದ .38 ಟಿಎಂಸಿ ನೀರು ಸಂಗ್ರಹಿಸುವ ವೆಂಟೆಡ್ ಡ್ಯಾಂ ನಿರ್ವಿುಸಲಾಗುತ್ತಿದೆ ಎನ್ನುತ್ತಾರೆ ನಗರ ನೀರು ಸರಬರಾಜು, ಒಳಚರಂಡಿ ಮಂಡಳಿಯ ಅಧಿಕಾರಿಗಳು.

ಏನಿದು ಯೋಜನೆ?

ರಾಷ್ಟ್ರೀಯ ನದಿ ಜೋಡಣೆ ನೀತಿಯಂತೆ ಬೇಡ್ತಿ-ಹಿರೇವಡ್ಡಟ್ಟಿ ಯೋಜನೆ ಜಾರಿಯಾಗುತ್ತಿದ್ದು, ಶೇ. 90 ಹಣವನ್ನು ಕೇಂದ್ರ, ಶೇ.10 ಹಣವನ್ನು ರಾಜ್ಯ ಭರಿಸಲಿವೆ. ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಗೆ (ಎನ್​ಡಬ್ಲ್ಯುಡಿಎ) 1995ರಲ್ಲಿ ಮೊದಲ ಬಾರಿಗೆ ಈ ಯೋಜನೆಯ ಸಂಭಾವ್ಯ ವರದಿ (ಪಿಎಫ್​ಆರ್) ಸಿದ್ಧಪಡಿಸಿ ಕರ್ನಾಟಕ ಸರ್ಕಾರ ಕಳಿಸಿತ್ತು. ನಂತರ ಕರ್ನಾಟಕ ಸರ್ಕಾರ ರಾಜ್ಯದೊಳಗಿನ ನದಿಗಳ ಜೋಡಣೆ ಬಗ್ಗೆ ಅಧ್ಯಯನ ಮಾಡುವ ಜವಾಬ್ದಾರಿಯನ್ನು ಎನ್​ಡಬ್ಲ್ಯುಡಿಎ ವಹಿಸಿತ್ತು. ಆಲಮಟ್ಟಿ-ಮಲಪ್ರಭಾ, ಮಲಪ್ರಭಾ-ತುಂಗಭದ್ರಾ, ಬೇಡ್ತಿ-ಧರ್ವ-ವರದಾ, ಭದ್ರಾ-ವೇದಾವತಿ, ಅಘನಾಶಿನಿ-ಬೇಡ್ತಿ-ವರದಾ ಹೀಗೆ 6 ಯೋಜನೆಗಳ ಬಗ್ಗೆ ಎನ್​ಡಬ್ಲ್ಯುಡಿಎ ವರದಿ ತಯಾರಿಸಿದೆ. ನದಿ ಜೋಡಣೆಗೆ ವಿರೋಧ ಎದುರಾಗಿದ್ದರಿಂದ ಪ್ರಸ್ತಾವ ಮೂಲೆಗುಂಪಾಗಿತ್ತು. 2022ರಲ್ಲಿ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ, ಬಜೆಟ್​ನಲ್ಲಿ ಈ ಯೋಜನೆ ಜಾರಿಗೆ ಅಧ್ಯಯನ ಮಾಡಿಸುವುದಾಗಿ ಘೋಷಿಸಿದರು. ಸಂಸದರಾದ ನಂತರ ಇದರ ಜಾರಿಗೆ ಪ್ರಯತ್ನಿಸಿದರು. ಹಾಲಿ ಸಿಎಂ ಡಿ.ಕೆ. ಶಿವಕುಮಾರ್ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದಾಗ ಬೇಡ್ತಿ-ಹಿರೇವಡ್ಡಟ್ಟಿ ಡಿಪಿಆರ್ ತಯಾರಿಸಲು ಎನ್​ಡಬ್ಲುಡಿಎಗೆ ಅನುಮತಿ ನೀಡಿ ಬಂದಿದ್ದಾರೆ.

ಹೀಗಿದೆ ಪ್ರಸ್ತಾವನೆ

ಬೇಡ್ತಿ ನದಿ ತಿರುವು ಸಂಬಂಧ ಎನ್​ಡಬ್ಲ್ಯುಡಿಎ ಈಗ 2 ಪ್ರಸ್ತಾವಗಳನ್ನು ಮುಂದಿಟ್ಟಿದೆ. ಈಗ ಬೇಡ್ತಿ-ವರದಾ ಜೋಡಣೆ ಎಂಬುದಕ್ಕಿಂತ ಬೇಡ್ತಿ-ತುಂಗಭದ್ರಾ ಜೋಡಣೆ ಎನ್ನಬಹುದು. ಮೊದಲ ಪ್ರಸ್ತಾವದಂತೆ, ಬೇಡ್ತಿ ನದಿಯಿಂದ 524 ಮಿಲಿಯನ್ ಕ್ಯೂಬಿಕ್ ಮೀಟರ್ ನೀರನ್ನು ಮೇಲೆತ್ತಿ ಸುರಂಗ, ಕಾಲುವೆಗಳ ಮೂಲಕ ತುಂಗಭದ್ರಾ ಜಲಾಶಯಕ್ಕೆ, ಅಲ್ಲಿಂದ ಹಿರೇವಡ್ಡಟ್ಟಿ ಜಲಾಶಯಕ್ಕೆ ನೀರು ಹರಿಸುವುದು. ಈ ಯೋಜನೆಗೆ 15,511 ಕೋಟಿ ರೂ. ಬೇಕಾಗಬಹುದು ಎಂದು 2025ರ ಪಿಎಫ್​ಆರ್​ನಲ್ಲಿದೆ. ಇದರಿಂದ 67,819 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಮಾಡಬಹುದು ಎನ್ನಲಾಗಿದೆ. ಎರಡನೆಯ ಪ್ರಸ್ತಾವದಂತೆ, ಬೇಡ್ತಿ ನೀರನ್ನು ಪೈಪ್​ಲೈನ್ ಮೂಲಕ ನೇರವಾಗಿ ಹಿರೇವಡ್ಡಟ್ಟಿ ಜಲಾಶಯಕ್ಕೆ ಹರಿಸುವುದು. ಇದರಿಂದ 70,035 ಹೆಕ್ಟೇರ್​ಗೆ ನೀರುಣಿಸಬಹುದು. ಇದರ ವೆಚ್ಚ 9,652 ಕೋಟಿ ರೂ.

ನೀರು ವ್ಯರ್ಥವಾಗುತ್ತದೆ ಎಂಬುದೇ ತಪ್ಪು ಕಲ್ಪನೆ

ನದಿಯ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತದೆ ಎಂಬುದೇ ದೊಡ್ಡ ತಪ್ಪುಕಲ್ಪನೆ; ನದಿ ಎಂದರೆ ಕೇವಲ ನೀರಿನ ಹರಿವಲ್ಲ. ಅದರ ಜತೆ ಇಡೀ ಜೀವವೈವಿಧ್ಯ ವ್ಯವಸ್ಥೆಯೇ ಇರುತ್ತದೆ ಎನ್ನುತ್ತಾರೆ ಕಡಲ ವಿಜ್ಞಾನಿ ಡಾ. ವಿ.ಎನ್. ನಾಯಕ. ನದಿ ಅಳಿವೆ ಪ್ರದೇಶ ಸಮುದ್ರದ ಮೀನುಗಳ ಹೆರಿಗೆ ಕೋಣೆ. ಅಲ್ಲಿ ಬೆಳೆಯುವ ಜೀವಿಗಳು, ಸಸ್ಯಗಳು ಬೇರೆಲ್ಲೂ ಬೆಳೆಯುವುದಿಲ್ಲ. ಅವು ಪರಿಸರಕ್ಕೆ ಅಮೂಲ್ಯ ಕೊಡುಗೆ ನೀಡುತ್ತವೆ. ಅಳಿವೆ ಪ್ರದೇಶದಲ್ಲಿ ಕಾಂಡ್ಲಾಗಳು ಬೆಳೆಯುತ್ತವೆ. ಅಲ್ಲಿ, ಅಪರೂಪದ ಕಪ್ಪೆಚಿಪ್ಪುಗಳು, ಮೃದ್ವಂಗಿಗಳು, ಪಕ್ಷಿಗಳು, ಮೀನುಗಳು ಜೀವಿಸುತ್ತವೆ. ನದಿಗಳಲ್ಲಿ ಸಿಹಿ ನೀರಿನ ಹರಿವು ಕಡಿಮೆಯಾದರೆ ಸಮುದ್ರದ ಉಪ್ಪು ನೀರಿನ ಪ್ರಭಾವ ಹೆಚ್ಚುತ್ತದೆ. ಇದರಿಂದ ಅಳಿವೆಯ ಸಾವಿರಾರು ಜೀವಪ್ರಭೇದಗಳಿಗೆ ಸಮಸ್ಯೆ ಉಂಟಾಗುತ್ತದೆ. ಅಣೆಕಟ್ಟೆಯಿಂದಾಗಿರುವ ಬದಲಾವಣೆ ಕಾಳಿ ಹಾಗೂ ಶರಾವತಿ ನದಿಗಳಲ್ಲಿ ಈಗಾಗಲೇ ಕಾಣುತ್ತಿದೆ ಎನ್ನುತ್ತಾರೆ. ಸಾಗರ ವಿಜ್ಞಾನಿ ಡಾ.ಪ್ರಕಾಶ ಮೇಸ್ತ ಅವರ ಪ್ರಕಾರ, ನದಿಯ ನೀರು ಸಮುದ್ರಕ್ಕೆ ಸೇರುವುದು ಅಲ್ಲಿನ ಪರಿಸರ, ಜೀವ ವ್ಯವಸ್ಥೆಯ ಉಳಿವಿಗೆ ಕಾರಣವಾಗಿದೆ. ಪಶ್ಚಿಮಘಟ್ಟದ ನದಿಗಳು ಲವಣ, ಖನಿಜ, ಪೋಷಕಾಂಶಗಳನ್ನು ತಮ್ಮ ಜತೆ ತರುತ್ತವೆ. ಅವು ಮೀನುಗಳಿಗೆ ಆಹಾರವಾಗುತ್ತವೆ. ನದಿ ನೀರಿನ ಹರಿವು ಕಡಿಮೆಯಾದರೆ ಸಮುದ್ರದ ಮೀನುಗಳ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಈ ಭಾಗದ ಹಲವು ವಿಶಿಷ್ಟ ಮೀನುಗಳು ಅಳಿದು ಹೋಗಬಹುದು ಎನ್ನುತ್ತಾರೆ.

ಮೂರು ಅಣೆಕಟ್ಟೆ

ಬೇಡ್ತಿ ನದಿ ಧಾರವಾಡ ಜಿಲ್ಲೆಯಲ್ಲಿ ಹುಟ್ಟುತ್ತದೆ. ವರ್ಷದ ಸುಮಾರು 9 ತಿಂಗಳು ನದಿಯಲ್ಲಿ ನೀರೇ ಇರುವುದಿಲ್ಲ. ಶಾಲ್ಮಲಾ, ಪಟ್ಟಣದಹಳ್ಳ ಮುಂತಾದ ಉಪ ನದಿಗಳು ಸೇರಿದ ನಂತರ ಬೇಡ್ತಿ ಘಟ್ಟದ ಕೆಳಗೆ ಧುಮುಕಿ ಗಂಗಾವಳಿ ಹೆಸರಿನಿಂದ ಸಾಗಿ, ಗೋಕರ್ಣ ಸಮೀಪ ಸಮುದ್ರ ಸೇರುತ್ತದೆ. ಬೇಡ್ತಿ ನೀರನ್ನು ನೆಚ್ಚಿಕೊಂಡರೆ ಯಾವುದೇ ನೀರಾವರಿ ಯೋಜನೆ ಜಾರಿ ಸಾಧ್ಯವೇ ಇಲ್ಲ. ಇದರಿಂದ ಬೇಡ್ತಿಯ ಎರಡು ಉಪ ನದಿಗಳನ್ನೂ ತಿರುಗಿಸುವ ಪ್ರಸ್ತಾವ ಈ ಯೋಜನೆಯ ಜತೆ ಸೇರಿಕೊಂಡಿದೆ. ಶಿರಸಿ ತಾಲೂಕಿನ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಹರಿಯುವ ಶಾಲ್ಮಲಾ ಹಾಗೂ ಪಟ್ಟಣದಹೊಳೆ ಎಂಬ 2 ನದಿಗಳಿಗೆ ಹಾಗೂ ಬೇಡ್ತಿ ನದಿಗೆ ಅಣೆಕಟ್ಟೆ ಕಟ್ಟುವ ಪ್ರಸ್ತಾವ ಪಿಎಫ್​ಆರ್​ನಲ್ಲಿದೆ. ಶಿರಸಿ ತಾಲೂಕಿನ ಪಟ್ಟಣದಹೊಳೆಗೆ ಸರೆಳೆಬೈಲ್ ಬಳಿ ಬ್ಯಾರೇಜ್ ನಿರ್ವಿುಸಲಾಗುತ್ತದೆ. ಶಾಲ್ಮಲಾ ನದಿಗೆ ಹುಳಗೋಳ ಬಳಿ ಬ್ಯಾರೇಜ್ ನಿರ್ವಿುಸಲಾಗುತ್ತದೆ. ಪಟ್ಟಣದಹಳ್ಳದ ನೀರನ್ನು ಶಾಲ್ಮಲಾಗೆ ಸೇರಿಸಲಾಗುತ್ತದೆ. ನಂತರ ಎರಡೂ ನದಿಗಳ ನೀರನ್ನು ಬೇಡ್ತಿಗೆ ಹರಿಸಲಾಗುತ್ತದೆ. ಬೇಡ್ತಿ ನದಿಗೆ ಯಲ್ಲಾಪುರ ತಾಲೂಕಿನ ಸೂರಿಮನೆ ಎಂಬಲ್ಲಿ ಅಣೆಕಟ್ಟೆ ಕಟ್ಟಿ ನೀರನ್ನು ಹಿರೇವಡ್ಡಟ್ಟಿ ಅಥವಾ ತುಂಗಭದ್ರಾ ಕಡೆಗೆ ಕೊಂಡೊಯ್ಯಲಾಗುತ್ತದೆ.

ಭಾರಿ ಯೋಜನಾ ವೆಚ್ಚ

2023-24ರ ಎಸ್​ಆರ್ ಬೆಲೆಯಂತೆ ಬೇಡ್ತಿ-ಹಿರೇವಡ್ಡಟ್ಟಿ ಸಂಪರ್ಕ ಯೋಜನೆ ವೆಚ್ಚ 9ರಿಂದ 15 ಸಾವಿರ ಕೋಟಿ ರೂ.ಗಳಾಗಿವೆ. ನಂತರ ನಿರ್ವಹಣೆಗೂ ಭಾರಿ ವೆಚ್ಚವಾಗಲಿದೆ. ಇದನ್ನು ಎನ್​ಡಬ್ಲ್ಯುಡಿಎ ವರದಿಯೇ ಹೇಳಿದೆ. ನೀರು ಉತ್ತರದ ಕಡೆಗೆ ಹರಿಯುವುದರಿಂದ ಅದನ್ನು ಪಂಪ್ ಮಾಡಬೇಕಾಗುತ್ತದೆ. ವಿದ್ಯುತ್, ಪೈಪ್​ಲೈನ್ ನಿರ್ವಹಣೆ ಎಲ್ಲ ಸೇರಿ 1500ರಿಂದ 2100 ಕೋಟಿ ರೂ.ವರೆಗೆ ವಾರ್ಷಿಕ ವೆಚ್ಚವಾಗಲಿದೆ. 2,101ರಿಂದ 2,122 ಕೋಟಿ ರೂ. ಲಾಭವಾಗಲಿದೆ. ಅಂದರೆ ಪ್ರತಿ ವರ್ಷ ಲಾಭದಷ್ಟೇ ಖರ್ಚೂ ಆಗುತ್ತದೆ ಎಂಬುದು ಪ್ರಾಥಮಿಕ ವರದಿಯಲ್ಲೇ ಸಾಬೀತಾಗಿದೆ.

ಅಘನಾಶಿನಿ-ಕಾಳಿ ನೀರಿಗೂ ಆಪತ್ತು

ಉತ್ತರ ಕನ್ನಡದ ಇನ್ನೆರಡು ನದಿಗಳ ನೀರನ್ನು ಕೊಂಡೊಯ್ಯುವ ಪ್ರಸ್ತಾವವೂ ಇದೆ. ರಾಷ್ಟ್ರೀಯ ನದಿ ತಿರುವು ಯೋಜನೆಯಲ್ಲಿ ಅಘನಾಶಿನಿಯನ್ನು ವೇದಾವತಿಗೆ ಸೇರಿಸುವ ಪ್ರಸ್ತಾವವಿದೆ. ಇನ್ನು ಕಾಳಿ ನೀರನ್ನು ಉತ್ತರ ಕರ್ನಾಟಕಕ್ಕೆ ಹರಿಸಲು 2019ರಲ್ಲಿ ಖಾಸಗಿ ಸಂಸ್ಥೆಯಿಂದ 5400 ಕೋಟಿ ರೂ. ಯೋಜನೆ ರೂಪಿಸಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಎರಡೂ ಯೋಜನೆಗಳಿಗೆ ಭಾರಿ ವಿರೋಧ ವ್ಯಕ್ತವಾಗಿದೆ.