ಶಾಲೆಗಳಲ್ಲಿ ಇಂಟರ್‌ನೆಟ್ ಸಂಪರ್ಕವಿಲ್ಲ AI
ರಾಜ್ಯ

ರಾಜ್ಯದ ಶೇ.48 ಶಾಲೆಗಳಲ್ಲಿ ಇಂಟರ್‌ನೆಟ್ ಸೌಲಭ್ಯವಿಲ್ಲ: No internet in schools

ರಾಜ್ಯದ ಸಂಪರ್ಕ ದರವು ರಾಷ್ಟ್ರೀಯ ಸರಾಸರಿಗಿಂತ ಶೇ.67ರಷ್ಟು ಕಡಿಮೆ ಇದೆ. ದೇಶದಲ್ಲಿ ಪ್ರತಿ ಮೂರು ಶಾಲೆಗಳಲ್ಲಿ ಒಂದು ಶಾಲೆಗೆ ಇಂಟರ್‌ನೆಟ್ ಸೌಲಭ್ಯವಿಲ್ಲ. ಅದೇ ಕರ್ನಾಟಕದಲ್ಲಿ ಪ್ರತಿ ಎರಡು ಶಾಲೆಗಳಲ್ಲಿ ಒಂದು ಶಾಲೆಗೆ ಇಂಟರ್‌ನೆಟ್ ಸೌಲಭ್ಯವಿಲ್ಲದಿರುವುದು ದತ್ತಾಂಶಗಳಿಂದ ತಿಳಿದು ಬಂದಿದೆ.

ಬೆಂಗಳೂರು: ರಾಜ್ಯ ಸರ್ಕಾರವು ಶಾಲಾ ಶಿಕ್ಷಣದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಮತ್ತು ಕೋಡಿಂಗ್ ಪರಿಚಯಿಸಲು ಒಲವು ತೋರುತ್ತಿದ್ದರೂ ರಾಜ್ಯದ ಒಟ್ಟು 74,578 ಶಾಲೆಗಳ ಪೈಕಿ ಶೇ.48ರಷ್ಟು ಶಾಲೆಗಳಲ್ಲಿ ಇಂಟರ್‌ನೆಟ್ ಸಂಪರ್ಕವಿಲ್ಲದಿರುವುದು ಡಿಜಿಟಲ್ ಅಂತರವನ್ನು ತೋರಿಸುತ್ತಿದೆ.

ಕೇಂದ್ರ ಶಿಕ್ಷಣ ಸಚಿವಾಲಯವು ಕಳೆದ ತಿಂಗಳು ಬಿಡುಗಡೆ ಮಾಡಿರುವ 2025-26ನೇ ಸಾಲಿನ ಯುಡೈಸ್ ಪ್ಲಸ್ ವರದಿಯಲ್ಲಿ ಈ ವಿಚಾರವು ಬೆಳಕಿಗೆ ಬಂದಿದೆ.

ರಾಜ್ಯದ ಸಂಪರ್ಕ ದರವು ರಾಷ್ಟ್ರೀಯ ಸರಾಸರಿಗಿಂತ ಶೇ.67ರಷ್ಟು ಕಡಿಮೆ ಇದೆ. ದೇಶದಲ್ಲಿ ಪ್ರತಿ ಮೂರು ಶಾಲೆಗಳಲ್ಲಿ ಒಂದು ಶಾಲೆಗೆ ಇಂಟರ್‌ನೆಟ್ ಸೌಲಭ್ಯವಿಲ್ಲ. ಅದೇ ಕರ್ನಾಟಕದಲ್ಲಿ ಪ್ರತಿ ಎರಡು ಶಾಲೆಗಳಲ್ಲಿ ಒಂದು ಶಾಲೆಗೆ ಇಂಟರ್‌ನೆಟ್ ಸೌಲಭ್ಯವಿಲ್ಲದಿರುವುದು ದತ್ತಾಂಶಗಳಿಂದ ತಿಳಿದು ಬಂದಿದೆ.

ಶೇ.63 ಸರ್ಕಾರಿ ಶಾಲೆಗಳಲ್ಲಿ ಇಂಟರ್‌ನೆಟ್ ಇಲ್ಲ

ದೇಶದ ಐಟಿ ರಾಜಧಾನಿಯಾಗಿರುವ ಕರ್ನಾಟಕವು ದಕ್ಷಿಣ ರಾಜ್ಯಗಳ ಪೈಕಿ ಇಂಟರ್‌ನೆಟ್ ಸಂಪರ್ಕವಿಲ್ಲದೆ ಶಾಲೆಗಳ ಅತಿ ಹೆಚ್ಚಿನ ಶೇಕಡಾವಾರು ಪ್ರಮಾಣವನ್ನು ಹೊಂದಿದೆ. ಸರ್ಕಾರಿ ಶಾಲೆಗಳಲ್ಲಿ ಈ ಅಂತರವು ವಿಶೇಷವಾಗಿ ಆತಂಕಕಾರಿಯಾಗಿದೆ. ರಾಜ್ಯ ಸರ್ಕಾರವ ನಿರ್ವಹಿಸುವ 48,527 ಶಾಲೆಗಳಲ್ಲಿ 18,007 ಶಾಲೆಗಳಲ್ಲಿ ಮಾತ್ರ ಇಂಟರ್‌ನೆಟ್ ಸೌಲಭ್ಯವಿದೆ. ಸುಮಾರು 30,520 (ಶೇ.63) ಶಾಲೆಗಳಲ್ಲಿ ಸಂಪರ್ಕ ಸಾಧ್ಯವಾಗಿಲ್ಲ.

ದಕ್ಷಿಣ ಭಾರತದಲ್ಲಿ ಕರ್ನಾಟಕವೇ ಕಳಪೆ

ದಕ್ಷಿಣ ಭಾರತದ ನೆರೆಯ ರಾಜ್ಯಗಳಿಗೆ ಹೋಲಿಸಿದರೆ, ರಾಜ್ಯದ ಸಾಧನೆ ಕಳಪೆಯಾಗಿದೆ. ಆಂಧ್ರಪ್ರದೇಶವು ತನ್ನ 60,843 ಶಾಲೆಗಳ ಪೈಕಿ ಶೇ.99.2 ಶಾಲೆಗಳಲ್ಲಿ ಇಂಟರ್‌ನೆಟ್ ಸೌಲಭ್ಯ ಹೊಂದಿದೆ. ತಮಿಳುನಾಡಿನ 57,566 ಶಾಲೆಗಳಲ್ಲಿ ಶೇ.99ರಷ್ಟು ಸಾಧನೆ ಮಾಡಿದೆ. ಕೇರಳವು ತನ್ನ 15,750 ಶಾಲೆಗಳ ಪೈಕಿ ಶೇ.92.6ರಷ್ಟು ಶಾಲೆಗಳಲ್ಲಿ ಸಂಪರ್ಕ ಕಲ್ಪಿಸಿದೆ. ತೆಲಂಗಾಣವು ತನ್ನದೇ ಆದ ಗಮನಾರ್ಹ ಅಂತರವನ್ನು ಹೊಂದಿದೆ. 41,762 ಶಾಲೆಗಳ ಪೈಕಿ ಶೇ.76.7ರಷ್ಟು ಇಂಟರ್‌ನೆಟ್ ಹೊಂದಿದೆ. ಆದರೆ, ಕರ್ನಾಟಕದ ಶೇ.51.7ರಷ್ಟು ಶಾಲೆಗಳಲ್ಲಿ ಮಾತ್ರ ಸಂಪರ್ಕ ಸೌಲಭ್ಯ ಹೊಂದಿದೆ. ಈ ಸಂಪರ್ಕವು ದಕ್ಷಿಣ ಭಾರತದಲ್ಲಿಯೇ ಅತ್ಯಂತ ಕಡಿಮೆ ವ್ಯಾಪ್ತಿಯನ್ನು ಹೊಂದಿದೆ ಎಂದು ವರದಿಯು ಬಹಿರಂಗಗೊಳಿಸಿದೆ.

ಈ ನಡುವೆ ಸ್ವಾತಂತ್ರ್ಯ ದಿನಾಚರಣೆಯಲ್ಲಿ ರಾಜ್ಯವನ್ನು ಉದ್ದೇಶಿಸಿ ಮಾತನಾಡಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ರಾಜ್ಯಾದ್ಯಂತ ‘ಎಐ ಅಕ್ಷರ ಅಭಿಯಾನ’ ಮತ್ತು ಕೋಡಿಂಗ್ ಗುರುಕುಲ’ ಉಪಕ್ರಮಗಳನ್ನು ೋಷಿಸಿದ್ದಾರೆ.

6ನೇ ತರಗತಿಯಿಂದಲೇ ಶಾಲೆಗಳಲ್ಲಿ ಎಐ ಶಿಕ್ಷಣವನ್ನು ಪರಿಚಯಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದ್ದಾರೆ. ಇನ್ನು ಸರ್ಕಾರಿ ಶಾಲೆಗಳ 9ನೇ ತರಗತಿ ವಿದ್ಯಾರ್ಥಿಗಳಿಗೆ ಎಐ ತರಬೇತಿ ಆರಂಭಿಸಲಾಗಿದೆ. ಮಾಹಿತಿ ತಂತ್ರಜ್ಞಾನ ಇಲಾಖೆ ಮತ್ತು ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ ಕಿರಿಯ ವಿದ್ಯಾರ್ಥಿಗಳಿಗೂ ಇದನ್ನು ವಿಸ್ತರಿಸುವ ಸಾಧ್ಯತೆಗಳನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಮೂಲಸೌಕರ್ಯ ಕೊರತೆಗಳ ಅಂತರವು ಈ ಯೋಜನೆಯನ್ನು ಎಷ್ಟರ ಮಟ್ಟಿಗೆ ಅನುಷ್ಠಾನ ಮಾಡಲಾಗುತ್ತದೆ ಎಂಬ ಪ್ರಶ್ನೆಗಳು ಉದ್ಭವಿಸುತ್ತಿವೆ.

ಮೂಲಸೌಕರ್ಯಗಳ ಕೊರತೆಯಿಂದಾಗಿ ಹಾಗೂ ಇಂಟರ್‌ನೆಟ್ ಸೌಲಭ್ಯವಿಲ್ಲದೆ ಶಾಲೆಗಳ ವಿದ್ಯಾರ್ಥಿಗಳು ಹಿಂದುಳಿಯುವ ಅಪಾಯವಿದೆ. ಸೌಲಭ್ಯವಿರುವ ಶಾಲೆಗಳ ವಿದ್ಯಾರ್ಥಿಗಳು ಉದಯೋನ್ಮುಖ ತಂತ್ರಜ್ಞಾನದ ಪರಿಚಯವನ್ನು ಪಡೆಯುತ್ತಿರುತ್ತಾರೆ. ಪ್ರಸ್ತುತ ಕಾಲಘಟ್ಟಕ್ಕೆ ಇಂಟರ್‌ನೆಟ್ ಅತ್ಯವಶ್ಯವಾಗಿದೆ. - ಡಿ. ಶಶಿಕುಮಾರ್, ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ