ಬೆಂಗಳೂರು: ನಟ ದರ್ಶನ್ ಪ್ರಮುಖ ಆರೋಪಿಯಾಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿ ಮಾರ್ಪಟ್ಟಿರುವ 14ನೇ ಆರೋಪಿ ಪ್ರದೂಷ್ ಎಸ್. ರಾವ್ಗೆ ಅವರ ತಂದೆಯ ಮೊದಲ ವರ್ಷದ ಪುಣ್ಯಾರಾಧನೆಯಲ್ಲಿ ಭಾಗವಹಿಸಲು ನ.7ರಿಂದ ನ.12ರವರೆಗೆ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಮಧ್ಯಂತರ ಜಾಮೀನು ನಿರಾಕರಿಸಿದ್ದ ನಗರದ 59ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪ್ರದೂಷ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ ರಾಮನಾಥ ಹೆಗ್ಡೆ ಅವರ ಪೀಠ ಈ ಆದೇಶ ಮಾಡಿದೆ.
ಪ್ರದೂಷ್ ಅನ್ನು ನ.7ರಿಂದ ನ.12ರವರೆಗೆ ಬೆಳಗ್ಗೆ 8 ಗಂಟೆಗೆ ಜೈಲಿನಿಂದ ಕರೆದುಕೊಂಡು ಹೋಗಿ ಸಂಜೆ 6 ಗಂಟೆಗೆ ವಾಪಸ್ ಜೈಲಿಗೆ ಕರೆತರಬೇಕು. ಈ ಸಮಯದಲ್ಲಿ ನಗರ ಸಶಸ್ತ್ರ ಮೀಸಲು ಪಡೆಯ ಪೊಲೀಸರು ಬೆಂಗಾವಲು ನೀಡಬೇಕು. ಪ್ರಕರಣಕ್ಕೆ ಸಂಬಂಧಿಸಿದವರನ್ನು ಭೇಟಿ/ಸಂಪರ್ಕ ಮಾಡಲು ಪ್ರದೂಷ್ಗೆ ಅವಕಾಶ ನೀಡಬಾರದು ಎಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧಿಕಾರಿಗಳಿಗೆ ನ್ಯಾಯಪೀಠ ನಿರ್ದೇಶಿಸಿದೆ.
ಅಲ್ಲದೆ, ಪ್ರದೂಷ್ ತಮ್ಮ ತಂದೆಯ ಪುಣ್ಯಾರಾಧನೆಯಲ್ಲಿ ಭಾಗವಹಿಸುವ ವ್ಯಕ್ತಿಗಳ ಮತ್ತು ಪುರೋಹಿತರ ಹೆಸರುಗಳನ್ನು ಜೈಲು ಹಾಗೂ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ತನಿಖಾಧಿಕಾರಿಗಳಿಗೆ ನೀಡಬೇಕು ಎಂದು ಪೀಠ ಸೂಚಿಸಿದೆ.