ಹೈಕೋರ್ಟ್ Google
ರಾಜ್ಯ

ಧರ್ಮಸ್ಥಳ ಕೇಸ್: ಎಸ್‌ಐಟಿ ಪ್ರಶ್ನಿಸಿದ್ದ ಮಟ್ಟಣ್ಣವರ್ ಅರ್ಜಿ ವಜಾ

ಧರ್ಮಸ್ಥಳದಲ್ಲಿ ಸಾವಿರಾರು ಶವಗಳನ್ನು ಹೂಳಲಾಗಿದೆ ಎಂಬುದಾಗಿ ಸುಳ್ಳು ಸಾಕ್ಷ್ಯ ಸೃಷ್ಟಿಸಿದ ಮತ್ತು ತಪ್ಪು ಮಾಹಿತಿ ಹರಡಿದ ಅಪರಾಧಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್‌ಐಆರ್‌ ಹಾಗೂ ವಿಶೇಷ ತನಿಖಾ ತಂಡ (ಎಸ್‌ಐಟಿ) ಕೈಗೊಂಡಿರುವ ತನಿಖೆ ಪ್ರಶ್ನಿಸಿ ಗಿರೀಶ್‌ ಮಟ್ಟಣ್ಣವರ್‌ ಮತ್ತು ಮಹೇಶ್‌ ಶೆಟ್ಟಿ ತಿಮರೋಡಿ ಸೇರಿ ನಾಲ್ವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ಗುರುವಾರ ವಜಾಗೊಳಿಸಿದೆ.

ಬೆಂಗಳೂರು: ಧರ್ಮಸ್ಥಳದಲ್ಲಿ ಸಾವಿರಾರು ಶವಗಳನ್ನು ಹೂಳಲಾಗಿದೆ ಎಂಬುದಾಗಿ ಸುಳ್ಳು ಸಾಕ್ಷ್ಯ ಸೃಷ್ಟಿಸಿದ ಮತ್ತು ತಪ್ಪು ಮಾಹಿತಿ ಹರಡಿದ ಅಪರಾಧಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್‌ಐಆರ್‌ ಹಾಗೂ ವಿಶೇಷ ತನಿಖಾ ತಂಡ (ಎಸ್‌ಐಟಿ) ಕೈಗೊಂಡಿರುವ ತನಿಖೆ ಪ್ರಶ್ನಿಸಿ ಗಿರೀಶ್‌ ಮಟ್ಟಣ್ಣವರ್‌ ಮತ್ತು ಮಹೇಶ್‌ ಶೆಟ್ಟಿ ತಿಮರೋಡಿ ಸೇರಿ ನಾಲ್ವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ಗುರುವಾರ ವಜಾಗೊಳಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಠಾಣಾ ಪೊಲೀಸರು ದಾಖಲಿಸಿರುವ ಎಫ್‌ಐಆರ್‌, ತಮಗೆ ಎಸ್‌ಐಟಿ ಪೊಲೀಸರು ನೀಡಿರುವ ನೋಟಿಸ್‌ ಮತ್ತು ಬೆಳ್ತಂಡಿ ಹೆಚ್ಚುವರಿ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಕೋರಿ ಸೌಜನ್ಯ ಪರ ಹೋರಾಟಗಾರರಾದ ಗಿರೀಶ್‌ ಮೆಟ್ಟಣವರ್‌, ಮಹೇಶ್‌ ಶೆಟ್ಟಿ ತಿಮರೋಡಿ, ಟಿ.ಜಯಂತ್‌ ಮತ್ತು ವಿಠಲ ಗೌಡ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ವಜಾಗೊಳಿಸಿ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರ ಪೀಠ ಆದೇಶಿಸಿದೆ.

ಮಟ್ಟಣ್ಣವರ್‌ ಪರ ಹಿರಿಯ ವಕೀಲ ಎಸ್‌.ಬಾಲನ್‌, ಈ ಪ್ರಪ್ರಕರಣದಲ್ಲಿ ಸರ್ಕಾರಿ ಅಧಿಕಾರಿಯೇ ದೂರು ನೀಡಬೇಕಿತ್ತು. ಆದರೆ, ಮುಸುಕುಧಾರಿ ಚಿನ್ನಯ್ಯ ದೂರು ನೀಡಿದ್ದು, ಆತನ ಸರ್ಕಾರಿ ನೌಕರನಲ್ಲ. ಅಸಂಜ್ಞೇಯ ಅಪರಾಧಕ್ಕೆ ಪೊಲೀಸರು ನೇರ ಎಫ್‌ಐಆರ್‌ ದಾಖಲಿಸಿರುವುದು ಕಾನೂನುಬಾಹಿರ. ದೂರು ದಾಖಲಿಸಲು ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಮೊರೆ ಹೋಗುವಂತೆ ದೂರುದಾರರಿಗೆ ತಿಳಿಸಬೇಕಿತ್ತು. ಅಲ್ಲದೆ, ವಿಚಾರಣೆ ನೆಪದಲ್ಲಿ ಅರ್ಜಿದಾರರಿಗೆ ಬೆಳಗಿನಿಂದ ರಾತ್ರಿಯವರೆಗೆ ಕಿರುಕುಳ ನೀಡಲಾಗುತ್ತಿದೆ. ಈ ಎಲ್ಲಾ ಕಾನೂನಾತ್ಮಕ ಲೋಪಗಳನ್ನು ಪರಿಗಣಿಸಿ ಅರ್ಜಿದಾರರ ವಿರುದ್ಧದ ಎಸ್‌ಐಟಿ ತನಿಖೆ ರದ್ದುಪಡಿಸಬೇಕು ಎಂದು ಕೋರಿದರು.

ಎಸ್‌ಐಟಿ ಪೊಲೀಸರ ಪರ ರಾಜ್ಯ ಸರ್ಕಾರಿ ಅಭಿಯೋಜಕ ಬಿ.ಎನ್‌. ಜಗದೀಶ್‌, ‘ಮ್ಯಾಜಿಸ್ಪ್ರೇಟ್‌ ನ್ಯಾಯಾಲಯದಿದ ಪೂರ್ವಾನುಮತಿ ಪಡೆದೇ ಕಾನೂನುಬದ್ಧವಾಗಿ ಎಫ್‌ಐಆರ್‌ ದಾಖಲಿಸಲಾಗಿದೆ. ತಾಂತ್ರಿಕ ನಿರ್ಬಂಧಗಳು ಅನ್ವಯವಾಗುವುದು ಆರೋಪಪಟ್ಟಿ ಸಲ್ಲಿಕೆಯಾದ ನಂತರವೇ ಹೊರತು, ತನಿಖೆಯ ಹಂತದಲ್ಲಲ್ಲ. ಪ್ರಕರಣವು ತನಿಖಾ ಹಂತದಲ್ಲಿದ್ದು, ಎಫ್‌ಐಆರ್ ರದ್ದುಪಡಿಸಬಾರದು. ಈ ಹಿಂದೆ ಬೇರೊಂದು ಅರ್ಜಿಯಲ್ಲಿ ಇದೇ ಅರ್ಜಿದಾರರು ಪ್ರಕರಣದ ತನಿಖೆ ಸರಿಯಾಗಿ ನಡೆಯಲಿ ಎಂದು ಕೋರಿದ್ದರು. ಈಗ ತನಿಖೆ ತಮ್ಮ ಕೊರಳಿಗೆ ಸುತ್ತಿಕೊಳ್ಳುತ್ತಿದ್ದಂತೆ ಎಫ್‌ಐಆರ್‌ ರದ್ದು ಮಾಡುವಂತೆ ಕೋರುತ್ತಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಮೂಲ ಎಫ್‌ಐಆರ್‌ ‘ಅಪರಿಚಿತ ವ್ಯಕ್ತಿ’ಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ತನಿಖೆಯಲ್ಲಿ ಸಾಕ್ಷ ಲಭ್ಯವಾದ ಕಾರಣ ಮ್ಯಾಜಿಸ್ಪ್ರೇಟ್‌ ಅನುಮತಿ ಪಡೆದು ಅರ್ಜಿದಾರರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ಒಂದೆಡೆ ತನಿಖೆ ನಡೆಯಲಿ ಎಂದು ಅರ್ಜಿದಾರರೇ ಹೇಳಿದ್ದರು. ಇನ್ನೊಂದೆಡೆ ತನಿಖೆ ರದ್ದು ಮಾಡಿ ಹೇಳುತ್ತಿದ್ದಾರೆ. ತನಿಖೆ ಇನ್ನೂ ಪ್ರಗತಿಯಲ್ಲಿರುವಾಗ ಎಫ್‌ಐಆರ್‌ ರದ್ದು ಕೋರುವುದು ಅಕಾಲಿಕ. ಈ ಹಂತದಲ್ಲಿ ಎಫ್‌ಐಆರ್‌ ರದ್ದುಪಡಿಸಲಾಗದು ಎಂದು ತಿಳಿಸಿ ಅರ್ಜಿ ವಜಾಗೊಳಿಸಿತು.

ಪ್ರಕರಣವೇನು?

ಧರ್ಮಸ್ಥಳದಲ್ಲಿ ಸಾವಿರಾರು ಶವಗಳನ್ನು ಹೂಳಲಾಗಿದೆ ಎಂದು ಮುಸುಕುಧಾರಿ ವ್ಯಕ್ತಿ ಚಿನ್ನಯ್ಯ ನೀಡಿದ್ದ ದೂರು ಆಧರಿಸಿ ತನಿಖೆಗಾಗಿ ಸರ್ಕಾರ ಎಸ್‌ಐಟಿ ರಚಿಸಿತ್ತು. ತನಿಖೆ ನಡೆಸಿದ ಅಧಿಕಾರಿಗಳು, ದೂರುದಾರ ಚಿನ್ನಯ್ಯನ ಹೇಳಿಕೆಗಳಲ್ಲಿನ ವೈರುದ್ಯಗಳನ್ನು ಬಯಲಿಗೆಳೆದಿದ್ದರು. ಕ್ಷೇತ್ರಕ್ಕೆ ಕಳಂಕ ತರಲು ವ್ಯವಸ್ಥಿತ ಷಡ್ಯಂತ್ರ ನಡೆದಿರುವುದು ತನಿಖೆಯಲ್ಲಿ ಪತ್ತೆಯಾಗಿತ್ತು. ಚಿನ್ನಯ್ಯ ಅಲಿಯಾಸ್‌ ಚಿನ್ನ, ಮಹೇಶ್‌ ಶೆಟ್ಟಿ ತಿಮರೋಡಿ, ಗಿರೀಶ್‌ ಮಟ್ಟಣ್ಣವರ್‌, ಜಯಂತ್‌, ವಿಠಲ ಗೌಡ ಹಾಗೂ ಸುಜಾತಾ ಭಟ್‌ ಸೇರಿ ಆರು ಮಂದಿಯ ವಿರುದ್ಧ ಸುಳ್ಳು ಸಾಕ್ಷ್ಯ ಸೃಷ್ಟಿ ಹಾಗೂ ನಕಲಿ ದಾಖಲೆ ತಯಾರಿಕೆ ಆರೋಪದಡಿ ತನಿಖೆ ತೀವ್ರಗೊಳಿಸಿತ್ತು. ನಂತರ ಚಿನ್ನಯ್ಯ ನೀಡಿದ್ದ ದೂರು ಆಧರಿಸಿ ಎಫ್‌ಐಆರ್‌ ದಾಖಲಿಸಿ, ಅರ್ಜಿದಾರರನ್ನು ಆರೋಪಿಗಳನ್ನಾಗಿ ಮಾಡಲಾಗಿತ್ತು.