ಡಾ. ಕಸ್ತೂರಿರಂಗನ್ ಟ್ರಸ್ಟ್  File photo
ರಾಜ್ಯ

ಡಾ. ಕಸ್ತೂರಿರಂಗನ್ ಟ್ರಸ್ಟ್ ಆರಂಭ: ಸಂಶೋಧಕರಿಗೆ 4 ಲಕ್ಷ ರೂ. ಫೆಲೋಶಿಪ್‌: Dr. kasturi rangan trust

ಬಾಹ್ಯಾಕಾಶ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಆರು ದಶಕಗಳಿಗೂ ಹೆಚ್ಚು ಕಾಲದ ಕೊಡುಗೆಗಳ ಮೂಲಕ ಭಾರತದ ಪ್ರಗತಿಗೆ ಮಹತ್ವದ ದಿಕ್ಕು ನೀಡಿದ ಡಾ. ಕೃಷ್ಣಸ್ವಾಮಿ ಕಸ್ತೂರಿರಂಗನ್ ಅವರ ಪರಂಪರೆಯನ್ನು ಮುಂದುವರಿಸುವ ಉದ್ದೇಶದಿಂದ, ಡಾ. ಕಸ್ತೂರಿರಂಗನ್ ಟ್ರಸ್ಟ್ ಅನ್ನು ಸ್ಥಾಪಿಸಲಾಗಿದೆ.

ಬೆಂಗಳೂರು: ಬಾಹ್ಯಾಕಾಶ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಆರು ದಶಕಗಳಿಗೂ ಹೆಚ್ಚು ಕಾಲದ ಕೊಡುಗೆಗಳ ಮೂಲಕ ಭಾರತದ ಪ್ರಗತಿಗೆ ಮಹತ್ವದ ದಿಕ್ಕು ನೀಡಿದ ಡಾ. ಕೃಷ್ಣಸ್ವಾಮಿ ಕಸ್ತೂರಿರಂಗನ್ ಅವರ ಪರಂಪರೆಯನ್ನು ಮುಂದುವರಿಸುವ ಉದ್ದೇಶದಿಂದ, ಡಾ. ಕಸ್ತೂರಿರಂಗನ್ ಟ್ರಸ್ಟ್ ಅನ್ನು ಸ್ಥಾಪಿಸಲಾಗಿದೆ.

ಸಂಶೋಧನೆಗೆ ಬೆಂಬಲ ನೀಡುವುದು, ಹೊಸ ಆಲೋಚನೆಗಳನ್ನು ಉತ್ತೇಜಿಸುವುದು ಮತ್ತು ಸಮಾಜ ಎದುರಿಸುತ್ತಿರುವ ಸಮಸ್ಯೆಗಳಿಗೆ ಪ್ರಾಯೋಗಿಕ ಪರಿಹಾರಗಳನ್ನು ಕಂಡುಕೊಳ್ಳುವುದು ಟ್ರಸ್ಟ್‌ನ ಉದ್ದೇಶವಾಗಿದೆ. ಬಾಹ್ಯಾಕಾಶ ಮತ್ತು ತಂತ್ರಜ್ಞಾನ, ಶಿಕ್ಷಣ, ಸುಸ್ಥಿರತೆ ಹಾಗೂ ಸಾರ್ವಜನಿಕ ನೀತಿ ಈ ನಾಲ್ಕು ಕ್ಷೇತ್ರಗಳ ಮೇಲೆ ಟ್ರಸ್ಟ್ ಗಮನಹರಿಸಲಿದೆ.

ಟ್ರಸ್ಟ್‌ನ ಟ್ರಸ್ಟಿ ಡಾ. ಸಂಜಯ್ ರಂಗನ್ ಮಾತನಾಡಿ, ನಮ್ಮ ದೇಶ ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸುವಲ್ಲಿ ಜ್ಞಾನ ಮತ್ತು ಸಂಶೋಧನೆಯ ಶಕ್ತಿಯ ಮೇಲೆ ಡಾ. ಕಸ್ತೂರಿರಂಗನ್ ಅವರು ನಂಬಿಕೆ ಇಟ್ಟಿದ್ದರು. ಈ ಟ್ರಸ್ಟ್‌ನ ಮೂಲಕ, ಸಮಾಜಕ್ಕೆ ಪ್ರಯೋಜನವಾಗುವ ಪರಿಹಾರಗಳನ್ನು ಕಂಡುಕೊಳ್ಳಲು ಮತ್ತು ಭವಿಷ್ಯದ ನಾಯಕರನ್ನು ಬೆಂಬಲಿಸಲು ಜನರು ಹಾಗೂ ಸಂಸ್ಥೆಗಳನ್ನು ಒಗ್ಗೂಡಿಸುವ ಮೂಲಕ ಅವರ ದೂರದೃಷ್ಟಿಯನ್ನು ಮುಂದುವರಿಸಲು ನಾವು ಆಶಿಸುತ್ತೇವೆ ಎಂದು ಹೇಳಿದರು.

ಫೆಲೋಶಿಪ್‌ಗೆ ನಾಮನಿರ್ದೇಶನ ಆರಂಭ

ಟ್ರಸ್ಟ್‌ನ ಮೊದಲ ಉಪಕ್ರಮವಾಗಿ ಡಾ. ಕಸ್ತೂರಿರಂಗನ್ ಫೆಲೋಶಿಪ್-2027 ಮೂಲಕ ಪಿಎಚ್‌ಡಿ ಮತ್ತು ಪೋಸ್ಟ್‌ಡಾಕ್ಟರಲ್ ಸಂಶೋಧಕರಿಗೆ ಬೆಂಬಲ ನೀಡಲಾಗುತ್ತದೆ.

ಪ್ರತಿಯೊಬ್ಬ ಫೆಲೋಗೆ ಸಂಶೋಧನಾ ವೆಚ್ಚಗಳಿಗಾಗಿ ಒಂದು ಬಾರಿಯ ಅನುದಾನವಾಗಿ 4 ಲಕ್ಷ ರೂ.ಗಳನ್ನು ನೀಡಲಾಗುತ್ತದೆ. 2025 ಮತ್ತು 2026ರಲ್ಲಿ ಪಿಎಚ್‌ಡಿ ಪ್ರಬಂಧವನ್ನು ಸಲ್ಲಿಸಿರುವ ಅಭ್ಯರ್ಥಿಗಳು ಈ ಫೆಲೋಶಿಪ್‌ಗೆ ಅರ್ಹರಾಗಿರುತ್ತಾರೆ. ಮುಂದಿನ ವರ್ಷಗಳಲ್ಲಿ ಮುಕ್ತವಾಗಿ ಅರ್ಜಿ ಆಹ್ವಾನಿಸುವ ಯೋಜನೆಯಿದೆ.

ನಾಮನಿರ್ದೇಶನಗಳು ಇಂದಿನಿಂದ (ಅ.27) ಆರಂಭವಾಗುತ್ತಿದ್ದು, ಡಿ.31ರೊಳಗೆ ಸಲ್ಲಿಸಬಹುದು. ಮೊದಲ ತಂಡದ ಫೆಲೋಗಳ ಹೆಸರನ್ನು ಮುಂದಿನ ಏ.25ರಂದು ಪ್ರಕಟಿಸಲಾಗುವುದು.