ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ Google photo
ರಾಜ್ಯ

ಜನಸಂಖ್ಯಾ ಗಣತಿಗಾಗಿ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆ ಮುಂದೂಡುವಂತೆ ಪತ್ರ: sslc, 2nd puc exam

ಮುಂದಿನ ವರ್ಷದ ಜನವರಿಯಿಂದ ಮಾರ್ಚ್‌ವರೆಗೆ ಕೇಂದ್ರ ಸರ್ಕಾರವು ಜನಸಂಖ್ಯಾ ಗಣತಿಯನ್ನು ನಡೆಸುತ್ತಿರುವ ಹಿನ್ನೆಲೆಯಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಮುಂದೂಡುವಂತೆ ಕೋರಿ ಜನಗಣತಿ ಕಾರ್ಯಾಚರಣೆ ನಿರ್ದೇಶನಾಲಯವು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಪತ್ರ ಬರೆದಿದೆ.

ಬೆಂಗಳೂರು: ಮುಂದಿನ ವರ್ಷದ ಜನವರಿಯಿಂದ ಮಾರ್ಚ್‌ವರೆಗೆ ಕೇಂದ್ರ ಸರ್ಕಾರವು ಜನಸಂಖ್ಯಾ ಗಣತಿಯನ್ನು ನಡೆಸುತ್ತಿರುವ ಹಿನ್ನೆಲೆಯಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಮುಂದೂಡುವಂತೆ ಕೋರಿ ಜನಗಣತಿ ಕಾರ್ಯಾಚರಣೆ ನಿರ್ದೇಶನಾಲಯವು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಪತ್ರ ಬರೆದಿದೆ.

ಶಾಲಾ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಜನಗಣತಿ ಕಾರ್ಯಾಚರಣೆ ನಿರ್ದೇಶನಾಲಯದ ನಿರ್ದೇಶಕರು ಮತ್ತು ಮುಖ್ಯ ಪ್ರಧಾನ ಜನಗಣತಿ ಅಧಿಕಾರಿ ಆರ್. ರಾಮಚಂದ್ರನ್ ಪತ್ರ ಬರೆದಿದ್ದಾರೆ.

2026ರ ಏಪ್ರಿಲ್ 16ರಿಂದ ಮೇ 15ರವರೆಗೆ ಕರ್ನಾಟಕದಲ್ಲಿ ‘ಮನೆಗಳ ಪಟ್ಟಿ ಮಾಡುವ ಪ್ರಕ್ರಿಯೆ’ಯು ಯಶಸ್ವಿಯಾಗಿ ಪೂರ್ಣಗೊಂಡಿದೆ. 2027ರ ಜನಗಣತಿ ಎರಡನೇ ಹಂತವಾದ ‘ಜನಸಂಖ್ಯಾ ಗಣತಿ’ಯು 2027ರ ಜನವರಿ 25ರಿಂದ ೆಬ್ರವರಿ 28ರವರೆಗೆ ನಡೆಯಲಿದೆ. ನಂತರ, ಮಾ.1ರಿಂದ ಮಾ.5ರವರೆಗೆ ‘ಪರಿಷ್ಕರಣಾ ಸುತ್ತು’ ನಡೆಯಲಿದೆ.

ಜನಸಂಖ್ಯಾ ಗಣತಿಯು ಪ್ರಮುಖ ರಾಷ್ಟ್ರೀಯ ಪ್ರಕ್ರಿಯೆಯಾಗಿದೆ. ಈ ಪ್ರಕ್ರಿಯೆಗೆ ರಾಜ್ಯಾದ್ಯಂತ 1.5 ಲಕ್ಷಕ್ಕೂ ಹೆಚ್ಚು ಗಣತಿದಾರರು ಮತ್ತು ಮೇಲ್ವಿಚಾರಕರ ನಿಯೋಜನೆಯ ಅಗತ್ಯವಿದೆ. ಈ ಮಾನವ ಸಂಪನ್ಮೂಲದ ಬಹುದೊಡ್ಡ ಭಾಗವನ್ನು ಶಿಕ್ಷಣ ಇಲಾಖೆಯಿಂದ ಪಡೆಯುವ ನಿರೀಕ್ಷೆಯಿದೆ. ಸಂಗ್ರಹಿಸಲಾದ ದತ್ತಾಂಶವು ಸಂಪೂರ್ಣ, ನಿಖರ ಮತ್ತು ವಿಶ್ವಾಸಾರ್ಹವಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕಿದೆ. ಜನಗಣತಿ ಕಾರ್ಯವನ್ನು ಸಕಾಲದಲ್ಲಿ ಪೂರ್ಣಗೊಳಿಸಲು, ’ಪರಿಷ್ಕರಣಾ ಸುತ್ತು’ ಸೇರಿ ಸಂಪೂರ್ಣ ಗಣತಿ ಅವಧಿಯಲ್ಲಿ ಅಗತ್ಯ ಸಿಬ್ಬಂದಿ ಲಭ್ಯವಿರುವುದು ಅಗತ್ಯವಾಗಿದೆ.

ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕದಲ್ಲಿ ಜನಸಂಖ್ಯಾ ಗಣತಿ ಕಾರ್ಯವು ಯಾವುದೇ ಅಡಚಣೆಯಿಲ್ಲದೆ ಯಶಸ್ವಿಯಾಗಿ ಪೂರ್ಣಗೊಳ್ಳಲು ಅಗತ್ಯವಿರುವ ಸಿಬ್ಬಂದಿ ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ದ್ವಿತೀಯ ಪಿಯುಸಿ ಪರೀಕ್ಷೆಗಳ ಪ್ರಾರಂಭ ದಿನಾಂಕವನ್ನು ಮಾ.6ಕ್ಕೆ ಮರುನಿಗದಿಪಡಿಸಬೇಕೆಂದು ಕೋರಿ ಪತ್ರ ಬರೆಯಲಾಗಿದೆ.

ತಾತ್ಕಾಲಿಕ ವೇಳಾಪಟ್ಟಿ ಪ್ರಕಾರ ಫೆ.27ರಿಂದ ಮಾರ್ಚ್ 17ರವರೆಗೆ ದ್ವಿತೀಯ ಪಿಯುಸಿ ಮತ್ತು ಮಾರ್ಚ್ 22ರಿಂದ ಏಪ್ರಿಲ್ 5 ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಅನ್ನು ನಡೆಸಲು ಉದ್ದೇಶಿಸಲಾಗಿದೆ.