ಕರ್ನಾಟಕ ಪರೀಕ್ಷಾ ಪ್ರಾಧಿಕಾರ  Google
ರಾಜ್ಯ

ಕೆ-ಸೆಟ್ ಪರೀಕ್ಷೆಗೆ 1.29 ಲಕ್ಷ ಮಂದಿ ನೋಂದಣಿ: Dress code ನಿಯಮಗಳೇನು?

ಒಟ್ಟು 37 ವಿವಿಧ ವಿಷಯಗಳಿಗೆ ನಡೆಯುವ ಕೆ-ಸೆಟ್ ಪರೀಕ್ಷೆಗೆ 1,29,212 ಮಂದಿ ಅರ್ಜಿ ಸಲ್ಲಿಸಿದ್ದಾರೆ. 11 ಜಿಲ್ಲೆಗಳ (ಬೆಂಗಳೂರು ಉತ್ತರ ದಕ್ಷಿಣ, ಬಳ್ಳಾರಿ, ಬೆಳಗಾವಿ, ದಾವಣಗೆರೆ, ಧಾರವಾಡ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು, ವಿಜಯಪುರ) 326 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ

ಬೆಂಗಳೂರು: ಪದವಿ ಕಾಲೇಜು ಉಪನ್ಯಾಸಕರ ಅರ್ಹತಾ ಪರೀಕ್ಷೆಯಾದ ಕೆ-ಸೆಟ್ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ (ಅ.11) ನಡೆಸಲಿದ್ದು, ಕಟ್ಟುನಿಟ್ಟಿನ ಬಿಗಿ ಕ್ರಮಗಳನ್ನು ಕೈಗೊಂಡಿದೆ.

ಒಟ್ಟು 37 ವಿವಿಧ ವಿಷಯಗಳಿಗೆ ನಡೆಯುವ ಕೆ-ಸೆಟ್ ಪರೀಕ್ಷೆಗೆ 1,29,212 ಮಂದಿ ಅರ್ಜಿ ಸಲ್ಲಿಸಿದ್ದಾರೆ. 11 ಜಿಲ್ಲೆಗಳ (ಬೆಂಗಳೂರು ಉತ್ತರ ದಕ್ಷಿಣ, ಬಳ್ಳಾರಿ, ಬೆಳಗಾವಿ, ದಾವಣಗೆರೆ, ಧಾರವಾಡ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು, ವಿಜಯಪುರ) 326 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಎಲ್ಲ 37 ವಿಷಯಗಳ ಪರೀಕ್ಷೆ ನಡೆದರೆ, ಉಳಿದ ಜಿಲ್ಲೆಗಳಲ್ಲಿ 13 ವಿಷಯಗಳ ಪರೀಕ್ಷೆ ಗಳು ಮಾತ್ರ ನಡೆಯಲಿವೆ. ಬೆಳಿಗ್ಗೆ 10ರಿಂದ ಮಧ್ಯಾಹ್ನ 1ಗಂಟೆವರೆಗೆ ಪರೀಕ್ಷೆ ನಡೆಯಲಿದ್ದು, ಒಂದೇ ಬಾರಿಗೆ ಎರಡೂ ಪತ್ರಿಕೆಗಳ (ಪತ್ರಿಕೆ 1, 2) ಪ್ರಶ್ನೆ ಪತ್ರಿಕೆಗಳನ್ನು ನೀಡಲಾಗುತ್ತದೆ. ಅಭ್ಯರ್ಥಿಗಳು ಮೂರು ಗಂಟೆ ಅವಧಿಯಲ್ಲಿ 100 ಅಂಕಗಳ ಸಾಮಾನ್ಯ ಜ್ಞಾನ ಮತ್ತು 200 ಅಂಕಗಳ ವಿಷಯವಾರು ಪತ್ರಿಕೆಗಳಿಗೆ ಉತ್ತರಿಸಬೇಕಾಗುತ್ತದೆ. ಎರಡೂ ಪತ್ರಿಕೆಗಳಿಗೆ ಪ್ರತ್ಯೇಕ ಒಎಂಆರ್ ನೀಡುತ್ತಿದ್ದು, ಆಯಾಯ ಒಎಂಆರ್‌ನಲ್ಲಿಯೇ ಅವುಗಳ ಉತ್ತರಗಳನ್ನು ಎಚ್ಚರಿಕೆಯಿಂದ ದಾಖಲಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಈ ಹಿಂದಿನ ಎಲ್ಲ ಪರೀಕ್ಷೆಗಳ ಹಾಗೆಯೇ ಈ ಪರೀಕ್ಷೆಗೂ ವಸ್ತ್ರ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ಪರೀಕ್ಷಾ ಕೇಂದ್ರಗಳ ಪ್ರವೇಶಕ್ಕೂ ಮುನ್ನ ಅಭ್ಯರ್ಥಿಗಳನ್ನು ಮುಖ ಚಹರೆ ಪತ್ತೆ ಪರಿಶೀಲನೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.