ಬೆಂಗಳೂರು: ಕಾಳಿಂಗ ಸರ್ಪ ಸೆರೆಹಿಡಿದು ಅದರ ಫೋಟೋ ತೆಗೆದ ಹಿನ್ನೆಲೆಯಲ್ಲಿ ವನ್ಯಜೀವಿಯ ಬೇಟೆ ಮತ್ತು ಸೆರೆ ಆರೋಪದ ಮೇಲೆ ಹಾವು ರಕ್ಷರೊಬ್ಬರ ವಿರುದ್ಧ ದಾಖಲಿಸಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿ ಕಾಳಿಂಗ ಸೆಂಟರ್ ಫಾರ್ ರೈನ್‌ಫಾರೆಸ್ಟ್ ಇಕಾಲಜಿಯ ಡಾ. ಪಿ. ಗೌರಿಶಂಕರ್ ಅವರು ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ಅನಂತ್ ರಾಮನಾಥ್ ಹೆಗಡೆ ಅವರ ಪೀಠ ಈ ಆದೇಶ ಮಾಡಿದೆ.
ಕಾಳಿಂಗ ಸರ್ಪವನ್ನು ಬಂಧನದಲ್ಲಿಟ್ಟಿದ್ದರು, ಕೊಂದಿದ್ದರು ಅಥವಾ ಗಾಯಗೊಳಿಸಿದ್ದರು ಅಥವಾ ಅದರ ಫೋಟೋವನ್ನು ಅಪ್‌ಲೋಡ್ ಮಾಡಿದ್ದರು ಎಂಬ ಆರೋಪವಿಲ್ಲ. ಕಾಳಿಂಗ ಸರ್ಪವನ್ನು ಅರ್ಜಿದಾರರು ವಾಸ್ತವವಾಗಿ ಸೆರೆಹಿಡಿದಿದ್ದರು ಎಂಬುದನ್ನು ಪ್ರಾಸಿಕ್ಯೂಷನ್ ದಾಖಲೆಗಳು ಸಾಬೀತುಪಡಿಸಿಲ್ಲ.
ಆರೋಪ ಪಟ್ಟಿಯೊಂದಿಗೆ ಸಲ್ಲಿಸಿರುವ ಫೋಟೋಗಳನ್ನು ಗಮನಿಸಿದರೆ, ಕಾಳಿಂಗ ಸರ್ಪವು ಅರಣ್ಯದ ತೆರೆದ ಪ್ರದೇಶದಲ್ಲಿರುವುದು ಕಂಡುಬರುತ್ತದೆ. ಅದನ್ನು ಬಂಧನದಲ್ಲಿಟ್ಟಿರಲಿಲ್ಲ. ಮೂರನೇ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದ ವಿಡಿಯೋದಲ್ಲಿ ಅರ್ಜಿದಾರರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರ ವಿರುದ್ಧ ದೂರು ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅರ್ಜಿದಾರರ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ.